Connect with us


      




ಜಾನಪದ

ಜಾನಪದ

pratham

Published

on

ಮುನ್ನುಡಿ

ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.

ಹೂಮಾಲೆಯಂಥ ಮೇಲಿನ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ,ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು.ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ,ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು. ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ ‘ಜಾನಪದ’ಎನ್ನಿಸಿಕೊಂಡಿದೆ.

ಜಾನಪದದ ಅರ್ಥ ಮತ್ತು ವ್ಯಾಖ್ಯಾನ

‘ಜಾನಪದ’ ಎನ್ನುವ ಪದ ಇಂಗ್ಲೀಷಿನಲ್ಲಿ Folklore ಎಂಬುದಕ್ಕೆ ಸಮಾನಾರ್ಥಕವಾಗಿ ಬಳಸಿರುವ ಕನ್ನಡ ಪದ. Folklore ಎನ್ನುವುದು Folk & Lore ಎಂಬ ಎರಡು ಪ್ರತ್ಯೇಕ ಅರ್ಥವನ್ನು ಉಳ್ಳ ಪದಗಳ ಸಯೋಗದಿಂದ ಕೂಡಿದೆ. Folk ಎನ್ನುವುದಕ್ಕೆ ಕನ್ನಡದಲ್ಲಿ ಜನಪದ ಎಂತಲೂ, Lore ಜ್ಞಾನ ಎಂತಲೂ ಇದೆ. ಜಾನಪದ ಜ್ಞಾನ ಈ ವಿಷಯಕ್ಕೆ ಡಾ. ಹಾ.ಮಾ. ನಾಯಕ ಅವರು ಜಾನಪದ ಎಂಬ ಶಬ್ದವನ್ನು ಬಳಸಿದ್ದಾರೆ. ಜನಪದ ಜ್ಞಾನವೇ ಜನಪದ ಎಂದು ಕರೆಯಬಹುದು. ಜನಪದರ ಸಾಹಿತ್ಯ, ಸಂಗೀತ, ನೃತ್ಯ, ಆಟ ಈ ಎಲ್ಲವನ್ನು ಒಳಗೊಂಡಿದ್ದೇ ಜಾನಪದವೆಂದು ಹೇಳಬಹುದು. ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ-ತಲೆಮಾರುಗಳಿಂದ ಬಂದಿರುವ ಮೌಖಿಕ ಪರಂಪರೆಯಲ್ಲಿ ಸಂಬಂಧ ಜ್ಞಾನವೇ ಜಾನಪದ. ಜಾನಪದ ಎಂದರೇನು? ಎಂಬುದರ ಕುರಿತು ಭಾರತೀಯ ಪಾಶ್ಚಾತ್ಯ ಹಾಗೂ ವಿದೇಶಿ ವಿದ್ವಾಂಸರು ವ್ಯಾಖ್ಯಾನವನ್ನು ನೀಡಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

ಮೂಲ: ವಿಕಿಪೀಡಿಯಾ

Share