Connect with us


      
ಪರಿಸರ

ವಿನೂತನ ಕಪ್ಪೆ ಹಬ್ಬ !

Bindushree Hosuru

Published

on

ವಿಶೇಷ ವರದಿ: ಸಂಧ್ಯಾ ಉರಣ್ ಕರ್

ಬೆಂಗಳೂರು: ಡಿ. 09 (ಯು.ಎನ್.ಐ) ಆಧುನಿಕತೆಯ ಧೂಳಿಗೆ ತಂತ್ರಜ್ಞಾನದ ಗೀಳಿಗೆ ಬರಿದಾಗುತ್ತಿರುವ ಹಸಿರಿಗೆ ಕಪ್ಪೆಗಳೂ ಬರಿದಾಗುತ್ತಿವೆ. ಮಳೆರಾಯನ ಆಗಮನಕ್ಕೋ ಕೆರೆಯನ್ನು ತುಂಬಿಸಲೋ ಕಪ್ಪೆರಾಯನನ್ನು ಪೂಜಿಸುವುದು ನಮ್ಮಲ್ಲಿ ಹಿಂದಿನಿಂದ ನಡೆದು ಬಂದ ಪದ್ಧತಿ. ಇತ್ತೀಚೆಗೆ ಕಪ್ಪೆಗಳ ವಟಗುಟ್ಟುವಿಕೆಯ ಸದ್ದು ಕಡಿಮೆಯಾಗುತ್ತಿದೆ.

ಪರಿಸರದ ಆರೋಗ್ಯದ ಬಗ್ಗೆ ಸೂಚನೆ ನೀಡುವ ಮತ್ತು ನೈಸರ್ಗಿಕ ಕೀಟ ನಿಯಂತ್ರಕವಾಗಿರುವ ಮಂಡೂಕ ಸಂತತಿಯ ಬಗ್ಗೆ ನಮಗಿರುವ ತಿಳಿವಳಿಕೆ ಅತ್ಯಲ್ಪ. ಕಪ್ಪೆಗಳು ಮಾಯವಾಗುತ್ತಿದ್ದರೆ ಅಲ್ಲಿನ ಪರಿಸರ ಹದಗೆಡುತ್ತಿದೆ ಎನ್ನುವುದರ ಸ್ಪಷ್ಟ ಸೂಚನೆ ಅದು. ಕಪ್ಪೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ತುರ್ತುಸ್ಥಿತಿ ಈಗ ದೇಶದೆಲ್ಲೆಡೆ ಇದೆ. ಹೀಗಾಗಿ ಇತ್ತೀಚೆಗೆ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಮಂಡೂಕಗಳ ಬಗ್ಗೆ ಜಾಗೃತಿ ಮೂಡಿಸುವ ಹಬ್ಬವೊಂದನ್ನು ಆಯೋಜಿಸಲಾಗಿದೆ.
ಪ್ರಾಣಿ, ಪಕ್ಷಿಗಳಂತೆ ಇದೀಗ ಕಪ್ಪೆಯ ಉಳಿವು ಆತಂಕಕಾರಿಯಾಗಿದೆ. ರೈತೋಪಯೋಗಿ ಜೀವವೈವಿಧ್ಯತೆಯ ಪ್ರತೀಕ ಕಪ್ಪೆಗಳ ಸಂತತಿ ಅಳಿಯುತ್ತಿದೆ. ಅಳಿದುಳಿದಿರುವ ಒಂದಿಷ್ಟು ಕಪ್ಪೆಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ “ಕಪ್ಪೆ ಹಬ್ಬ” ಆಯೋಜಿತವಾಗುತ್ತಿದೆ. ಅರೇ ಇದೇನು ಕಪ್ಪೆ ಹಬ್ಬ ಅಂತ ಕೇಳೋರಿಗೆ ಇದು ವಿಚಿತ್ರ, ಆಶ್ಚರ್ಯ ಅನಿಸಿದರೂ ಇದರಲ್ಲಿ ಸತ್ಯವಡಗಿದೆ.

ವಿನಾಶದಂಚಿನಲ್ಲಿರುವ ಕಪ್ಪೆಗಳನ್ನು ಉಳಿಸಲೆಂದೇ ಕಪ್ಪೆಹಬ್ಬ ಧ್ವನಿಯಾಗುತ್ತಿದೆ. ಹಾರುವ ಕಪ್ಪೆ, ಚಿಮ್ಮುವ ಕಪ್ಪೆ ಹೀಗೆ ನಾನಾ ಪ್ರಬೇಧದ ಕಪ್ಪೆಗಳು ಕಾಣಸಿಗುತ್ತವೆ. ಕೆಲವು ಕಳೆನಾಶಕ ಕಪ್ಪೆಗಳಾದರೆ ಇನ್ನೂ ಕೆಲವು ಔಷಧೀಯಂತೆ ಬಳಕೆಯೂ ಆಗುತ್ತವೆ. ಮತ್ತೆ ಕೆಲವು ರಾಸಾಯನಿಕಗಳಂತೆ ಉಪಯೋಗಕಾರಿಯೂ ಆಗಿವೆ. ಹೀಗಾಗಿ ಬದಲಾದ ಕಾಲಘಟ್ಟ ಹವಾಮಾನ್ಯ ವೈಪರೀತ್ಯಕ್ಕೂ ನಾಶವಾಗುತ್ತಿರುವ ಕಪ್ಪೆಗಳನ್ನು ಉಳಿಸುವ ಅನಿವಾರ್ಯತೆ ಎದುರಾಗಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಪರಿಸರವಾದಿಗಳು ರಾಜ್ಯ ಕಪ್ಪೆ ಘೋಷಣೆಗೆ ಚಿಂತನೆ ನಡೆಸಿದ್ದರು. ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಮಲಬಾರ್ ಟ್ರೀ ಟೋಡ್ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಒತ್ತಾಯವನ್ನೂ ಮಾಡಿದ್ದರು. ಅದರ ಮುಂದುವರೆದ ಭಾಗವಾಗಿ ಇದೀಗ ಕಪ್ಪೆಯ ಉಳಿವಿಗಾಗಿ ಜಾಗೃತಿ ಮೂಡಿಸಲೆಂದೇ ಇದೇ ಡಿಸೆಂಬರ್ 18,19 ಎರಡು ದಿನಗಳ ಕಾಲ ಕಪ್ಪೆ ಹಬ್ಬ ನಡೆಸಲು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ವನ್ಯಜೀವಿ ಸಂರಕ್ಷಣೆ ಶಿವಮೊಗ್ಗ, ಸಾಗರ, ಕಾರ್ಗಲ್ ವಿಭಾಗ ದೇಶದಲ್ಲಿಯೇ ಮೊದಲ ಬಾರಿಗೆ “ಕಪ್ಪೆ ಹಬ್ಬ” ವನ್ನು ಆಯೋಜಿಸುತ್ತಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಪ್ಪಾನೆ ಎಂಬ ನಿರ್ಜನ ಪ್ರವಾಸಿ ತಾಣದಲ್ಲಿ “ಕಪ್ಪೆಹಬ್ಬ”ಕ್ಕೆ ಚಾಲನೆ ಸಿಗಲಿದೆ. ಸತತ 6 ತಿಂಗಳ ಕಾಲ ಕಪ್ಪೆಹಬ್ಬ ನಡೆಯಲಿದೆ. ಕಪ್ಪೆಗಳ ಸಣ್ಣ-ಸಣ್ಣ ಪ್ರಭೇದಗಳ ಬಗ್ಗೆಯೂ ಗಮನ ಹರಿಸಲೇಬೇಕಾದ ಸಮಯ ಇದಾಗಿದೆ. ಈ ಮೊದಲ ಆರಂಭಿಕ ದಿನಗಳೆರೆಡು ಕಪ್ಪೆಯ ಬದುಕು, ವೈವಿಧ್ಯತೆ, ಜಾಗೃತಿ, ಕಪ್ಪೆಗಳ ಉಪಯೋಗ, ಪರಿಸರಕ್ಕೆ ಕಪ್ಪೆಗಳಿಂದಾಗುವ ಪ್ರಯೋಜನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪರಿಸರವಾದಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳೂ ಸೇರಿದಂತೆ ಯುವಪೀಳಿಗೆಯಲ್ಲಿ ಜನಜಾಗೃತಿ ಮೂಡಿಸಲಿದ್ದಾರೆ.

ಕಪ್ಪೆಗಳ ಮಹತ್ವದ ಬಗ್ಗೆ ಮಾತನಾಡುವ ಪರಿಸರವಾದಿ ಡಾ.ಕೆ.ವಿ.ಗುರುರಾಜ್‌, ಶಶಿಸಂಪಳ್ಳಿ ಸೇರಿದಂತರ ಅರಣ್ಯಾಧಿಕಾರಿಗಳು ಉತ್ಸವದಲ್ಲಿ ಭಾಗವಹಿಸಿ  ಮಂಡೂಕದ ಕುರಿತು ಮಾಹಿತಿ ನೀಡಲಿದ್ದಾರೆ.

ಗುಬ್ಬಿ ಲ್ಯಾಬ್ಸ್‌ ಸಂಸ್ಥೆಯು ಮೊದಲಿಗೆ 2012ರಲ್ಲಿ ‘ಫ್ರಾಗ್ಸ್‌ ಆ್ಯಂಡ್‌ ಟೋಡ್ಸ್‌ ಆಫ್‌ ವೆಸ್ಟರ್ನ್‌ ಘಾಟ್ಸ್‌’ ಎನ್ನುವ ಪುಸ್ತಕವನ್ನು ತರುವ ಮೂಲಕ ಕಪ್ಪೆಗಳ ಬಗ್ಗೆ ಗಮನ ಸೆಳೆದಿದೆ. ನಂತರ, ಅದು 2013ರಲ್ಲಿ ಕಪ್ಪೆಗಳ ಬಗ್ಗೆಯೇ ಇರುವ ಒಂದು ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. 2015ರಲ್ಲಿ 75 ಬಗೆಯ ಕಪ್ಪೆಗಳ ಶಬ್ದತರಂಗಗಳನ್ನು ದಾಖಲಿಸಿ ‘ಮಂಡೂಕ ವಾಣಿ’ ಎನ್ನುವ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿದೆ. ಈಗ ಇನ್ನೊಂದು ಹೆಜ್ಜೆ ಮುಂದಿಟ್ಟು ಈ ಅಪ್ಲಿಕೇಶನ್‌ ಅನ್ನು ಅದು ಸಿದ್ಧಪಡಿಸಿರುವುದು ಗಮನಾರ್ಹವಾಗಿದೆ.

Share