Connect with us


      
ಸಿನೆಮಾ

‘ಗರುಡಗಮನ ವೃಷಭವಾಹನ’ ಸಿನೆಮಾ ಕಸುಬಿನ ಭಾಷೆ

Kumara Raitha

Published

on

ತಾಯಿಯ ಸ್ವಾರ್ಥದಿಂದ ಮಾರಣಾಂತಿಕ ಹಿಂಸೆಗೆ ತುತ್ತಾಗಿ ಬದುಕುಳಿದ ಅನಾಥ ಬಾಲಕ. ಆತನನ್ನು ಉಡಿಗೆ ಹಾಕಿಕೊಂಡು ತನ್ನ ಮಗನ ಜೊತೆ ಸಲಹುವ ಬಡ ಹೆಂಗಸು. ಬಾಲಕರಿಬ್ಬರು ಬೆಳೆದು, ವಾಸ್ತವದಲ್ಲಿ ಎದಿರಾಗುವ ಹಿಂಸೆಗೆ, ಪ್ರತಿ ಹಿಂಸೆಯ ವೃತ್ತಿಯನ್ನೇ ಬದುಕಿನ ಪಾಡಾಗಿಸಿಕೊಳ್ಳುವುದು. ಕಾನೂನು ವ್ಯವಸ್ಥೆಯನ್ನು ಎಗ್ಗಿಲ್ಲದೆ ಎದಿರಾಗುವುದು. ಇಬ್ಬರ ಕರುಳ ಸ್ನೇಹದ ನಡುವೆ ಮೂರನೇಯ ಅಡ್ಡಕಸುಬಿನ ದಣಿಯ ಪ್ರವೇಶದಿಂದ ಕರಳು ಬಳ್ಳಿ ಹರಿದು, ಇಬ್ಬರ ಬದುಕು ದುರಂತ ಅಂತ್ಯ ಕಾಣುವುದು.

ಈ ಕಥನ ಹಂದರದೊಳಗೆ ಬೇರೆ ಬೇರೆ ಬಗೆಯ ಸಾಮಾಜಿಕ, ಭೌಗೋಳಿಕ ಸನ್ನಿವೇಶಗಳಲ್ಲಿ ಭಿನ್ನ ಬಗೆಯ ಹೂರಣ ತುಂಬಿರುವ ಒಂದು ಐವತ್ತು ಅರವತ್ತು  ಸಿನೆಮಾಗಳು ಭಾರತದ ಬಹಳಷ್ಟು ಭಾಷೆಗಳಲ್ಲಿ ಬಂದಾಗಿದೆ. ‘ಪಾತಕ ಲೋಕದ ಸಿನೆಮಾ’ ಅಥವ ‘ ಗ್ಯಾಂಗ್ ಕಾಳಗದ ಸಿನೆಮಾ’ ಎಂಬ ಈ ಬಗೆಯ ನೂರಾರು ಸಿನೆಮಾಗಳು ಜಗತ್ತಿನಾದ್ಯಾಂತ ಹಲವು ಕಥನ ಹೊಂದಾಣಿಕೆಗಳಲ್ಲಿ ಬಂದಾಗಿ‌ ಹೋಗಿದೆ.

ಕನ್ನಡದಲ್ಲೇ, ಈ ನಮೂನೆಗೆ, ಸೂರಿ ತನ್ನದೇ ವಿಶಿಷ್ಟ ಛಾಪಿನ ಸಿನಿಮಾವಳಿಯನ್ನು ಹೆಣೆದಿದ್ದಾರೆ.  ಮತ್ತೊಮ್ಮೆ ಈ ನಮೂನೆಯ ಸಿನೆಮಾ ಕಟ್ಟುವಿಕೆಯ ದಾರಿ ಹಿಡಿದ ನಿರ್ದೇಶಕನ ಮುಂದಿರುವ ಸವಾಲು ಎಂದರೆ: ಭಿನ್ನ ಬಗೆಯ ಸಿನೆಮಾವನ್ನು ಹ್ಯಾಗೆ ಕಟ್ಟುವುದು? ತನ್ನತನವನ್ನು ಹ್ಯಾಗೆ ಸಾಬೀತು ಮಾಡುವುದು?

ನಿರ್ದೇಶಕ ರಾಜ್ ಶೆಟ್ಟಿ ಈ ಸವಾಲನ್ನು ಸ್ವೀಕರಿಸಿ ‘ಗರುಡಗಮನ ವೃಷಭವಾಹನ’ ಕಟ್ಟಿದ್ದಾರೆ. ಸಿನೆಮಾ ಕಸುಬಿನ ಭಾಷೆಯನ್ನು ತನ್ನದೇ ನಿರೂಪಣಾ ಶೈಲಿಗೆ ಬಗ್ಗಿಸಿಕೊಂಡು, ವಿಶಿಷ್ಟತೆ ತೋರುವಲ್ಲಿ ಯಶಸ್ವಿಯಾಗಿದ್ದಾರೆ.

ಯಶಸ್ಸಿಗೆ ಕಾರಣಗಳು:

1) ಕತೆಯಲ್ಲಿ ಮಂಗಳೂರಿನ ಮಂಗಳಾದೇವಿ ಪರಿಸರದ ದೈನಂದಿನ ಬದುಕಿನ ವಿವರಗಳನ್ನು ಅದರೆಲ್ಲ ಜೀವಂತಿಕೆಯಲ್ಲಿ ಹಿಡಿದಿಟ್ಟಿರುವುದು. ಇದು ಕಥನಕ್ಕೆ ಹೊಸತನ ತಂದುಕೊಟ್ಟಿದೆ.

2) ಕಥನದ ಹೊಸತನವನ್ನು ಸಾಕಾರಗೊಳಿಸಲು ಬೇಕಾದ ಬಿಗುವಾದ, ಸ್ಥಳೀಯತೆಯನ್ನು ರಕ್ತಮಾಂಸಗಳಲ್ಲಿ ತುಂಬಿಕೊಂಡ, ಚಿತ್ರಕತೆಯ ರಚನೆ. ಚಿತ್ರಕತೆಯು ಒಂದು ಸಿನೆಮಾದ ಶಕ್ತ ದೃಷ್ಯ ಭಾಷೆಗೆ ಬೇಕಾದ ಭದ್ರ ಬುನಾದಿ ಎಂಬುದನ್ನು ಚಿತ್ರಕತೆ ಕಟ್ಟಿರುವ ರಾಜ್ ಶೆಟ್ಟಿಯವರು ಬಹಳ ನುರಿತತೆಯಲ್ಲಿ ಅರಿತಿದ್ದಾರೆ. ಈ ಸಿನೆಮಾದ ಅರ್ಧ ಕಸುವಿರುವುದೇ, ಚಿತ್ರಕತೆಯಲ್ಲಿ.

3) ಚಿತ್ರಕಥೆಯನ್ನು ದೃಷ್ಯಪ್ರದರ್ಶನದಲ್ಲಿ ಕಟ್ಟುವುದಕ್ಕೆ, ಅದಕ್ಕೆ ತಕ್ಕುದಾದ ಕ್ಯಾಮೆರ ಮತ್ತು ಸಂಕಲನ ಕಸುಬುದಾರಿಕೆ ಮತ್ತು (ಆಧುನಿಕ ಸಿನೆಮಾಗಳಲ್ಲಿ) ಧ್ವನಿಗ್ರಹಣ ಕಸುಬುದಾರಿಕೆಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಆಯಾ ಕಲಾವಿದರಿಗೆ ಚಿತ್ರಕತೆಯ ಒಳನೋಟವು ಪೂರ್ಣ ದಕ್ಕಿದರೆ ಮಾತ್ರ ಅವರು ತಮ್ಮ ಕಸುಬಿನ ನಿಪುಣತೆ ತೋರಬಲ್ಲರು ಮತ್ತು‌ ನಿರ್ದೇಶಕ ಇಚ್ಛಿಸಿದ್ದನ್ನು ಕಟ್ಟಬಲ್ಲರು. ಕ್ಯಾಮೆರ ನಿರ್ದೇಶನ- ಸಂಕಲನಗಳನ್ನು ನಿಭಾಯಿಸಿರುವ ಪ್ರವೀಣ್ ಶ್ರೀಯಾನ್, ಧ್ವನಿಕಲೆಯನ್ನು ಕಟ್ಟಿರುವ -ಶಂಕರನ್, ಹರಿಹರನ್, ಆದರ್ಶ್ ಜೋಸೆಫ್,ಅರವಿಂದ ಮೆನನ್, ಅಮೃತ್ ಶಂಕರ್, ಶಣ್ಮುಗಂ-ತಂಡವು ರಾಜ್ ಶೆಟ್ಟಿಯವರ ಸ್ವಪ್ನ ಸಾಕಾರ ತಂಡವಾಗಿದೆ. ಪ್ರೇಕ್ಷಕರು ಥಿಯೇಟರಿನ ಪರದೆಯ ಮೇಲೆ ಕಾಣುವ ದೃಷ್ಯದ ಪ್ರಭಾವ ಶಕ್ತಿಗೆ ಇವರ ಕೊಡುಗೆ ಅಸಾಮಾನ್ಯವಾಗಿದೆ.

3) ಕಥನಾ ಪಾತ್ರಗಳನ್ನು  ಜೀವಂತಗೊಳಿಸುವ ನಟರ ಆಯ್ಕೆ ಹಾಗು ಅವರು ಅದನ್ನು ಯಶಸ್ವಿಗೊಳಿಸುವ ಅಭಿನಯ ನಿಯಂತ್ರಣದಲ್ಲಿ ನಿರ್ದೇಶಕನ ಪಾತ್ರವು ಹಿರಿದಾಗಿರುತ್ತದೆ. ಎರಡು ಕೇಂದ್ರ ಪಾತ್ರಗಳಲ್ಲಿ ಬಹಳ ಮುಖ್ಯವಾದ ಒಂದು ಪಾತ್ರವನ್ನು ರಾಜ್ ತಾವೇ ಹೆಗಲಿಗೆ ಹಾಕಿಕೊಂಡಿದ್ದಾರೆ-ಅವರ ಅಭಿನಯದ ನೈಪುಣ್ಯವನ್ನು ಅವರು ಹಿಂದಿನ ಸಿನೆಮಾಗಳಲ್ಲಿ ತೋರಿದ್ದರು, ಈ ಸಿನೆಮಾದಲ್ಲಿ ಅದನ್ನು ಇನ್ನಷ್ಟೂ ಎತ್ತರದಲ್ಲಿ ತೋರಿದ್ದಾರೆ; ವೃಷಭ್ ಶೆಟ್ಟಿಯವರ ನಿಯಂತ್ರಿತ ಅಭಿನಯ ಅದಕ್ಕೆ ಪೂರಕವಾಗಿದೆ; ಬಾಕಿ ನಟರ ಆಯ್ಕೆ ಹಾಗು ನಿರ್ದೇಶನದಲ್ಲಿ ರಾಜ್ ತಮ್ಮ ಉಳಿದ ಕಸುವಿನ ಪ್ರದರ್ಶನ ನೀಡಿದ್ದಾರೆ.

ಇಷ್ಟು ಶ್ರದ್ಧೆಯ ಕಸುಬಿನ ನಿಪುಣತೆ ತೋರಿದರೆ, ಪ್ರೇಕ್ಷಕರನ್ನು ಆವರಿಸುವ ಒಂದು ದೃಷ್ಯಪಠ್ಯವನ್ನು ಕಟ್ಟಬಹುದು- ರಾಜ್ ಶೆಟ್ಟಿ ಇಷ್ಟನ್ನು ಲಕ್ಷಣವಾಗಿ ಮಾಡಿದ್ದಾರೆ. ಆ ಮೂಲಕ ಸಿನೆಮಾ ಕಲೆಯ ದೃಷ್ಯಭಾಷೆಯ ಸೃಜನಶೀಲ ಪ್ರಯೋಗದ ಹಿರಿಮೆಯ ಝಲಕ್ ತೋರಿದ್ದಾರೆ. ಈ ಸಿನೆಮಾ ಇಷ್ಟಕ್ಕಾಗಿ ಬಹಳ ಹಿಡಿಸುತ್ತದೆ.

ಒಂದು ಜಾಣ ಕಸುಬುದಾರಿಕೆಯ ಸಿನೆಮಾವು ಯಾವಾಗಲೂ ಅತ್ತ್ಯುತ್ತಮ ಕಲಾಕೃತಿಯಾಗಿರುವುದಿಲ್ಲ. ಅದಕ್ಕೆ ಬಹಳ ಘನವಾದ ಜೀವನದರ್ಶನದ ಹುಡುಕಾಟದ ಹಂಬಲ ಬೇಕಾಗುತ್ತದೆ; ಕಲೆಯನ್ನು ಕಟ್ಟುವ ಕಾಯಕದಲ್ಲೇ ಅದನ್ನು ಕಲಾಕಾರರು ಸಾಕಾರಗೊಳಿಸಿಕೊಳ್ಳುವ ಕಠಿಣ ಮಾರ್ಗಿಗಳಾಗಿರುತ್ತಾರೆ. ಈ ಸಿನೆಮಾದ ಎರಡು ದೃಷ್ಯ ಕಟ್ಟುಗಳು- ಒಂದು ಶಿವ ಪಾತ್ರದ ಉದ್ಭವದ ನಿರೂಪಣೆ, ಮತ್ತೊಂದು ಕೊನೆಯ ದೃಷ್ಯಕಟ್ಟು- ಆ ಬಗೆಯ ಕಠಿಣ ಮಾರ್ಗದ ಒಂದು ಸಣ್ಣ ಕಿಡಿಯನ್ನು ತೋರುತ್ತವೆ; ಆದರೆ, ಅವು ಚಿತ್ರದ ದೃಷ್ಯಕಟ್ಟುವಿಕೆಯ ದರ್ಶನ ಹುಡುಕಾಟವಾಗಿವೆ ಎಂಬುದಕ್ಕೆ ಉಳಿದ 141 ನಿಮಿಷಗಳಲ್ಲಿ ಯಾವುದೇ ಶಕ್ತ ದೃಷ್ಯಕಟ್ಟುವಿಕೆ ಕಾಣುವುದಿಲ್ಲ. ಅಂಥ ಒಂದು ದರ್ಶನ ಕಾಣ್ಕೆಯ ಉದ್ದೇಶವು ಈ ಸಿನೆಮಾಕ್ಕೆ ಇಲ್ಲ.

ಲೇಖಕರು: ಫಣಿರಾಜ್

Share