Connect with us


      
ಕರ್ನಾಟಕ

“ರಾಜ್ಯಪಾಲರ ಭಾಷಣ ನೀರಸ” – ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ

Iranna Anchatageri

Published

on

ಬೆಂಗಳೂರು: ಫೆಬ್ರವರಿ 14 (ಯು.ಎನ್.ಐ.) ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇಂದು ಭಾಷಣ ಮಾಡಿದರು. ಬಳಿಕ ಈ  ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, ರಾಜ್ಯಪಾಲರ ಭಾಷಣದಲ್ಲಿ ಹೊಸತೇನಿಲ್ಲ. ರಾಜ್ಯದ ಜನತೆಗೆ ಇದರಿಂದ ನಿರಾಶೆ ಉಂಟಾಗಿದೆ ಎಂದು ಟೀಕೆ ವ್ಯಕ್ತಪಡಿಸಿದರು.

ಜಂಟಿ‌ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರ ಭಾಷಣದಲ್ಲಿ ಇರಬೇಕಾದ ಮೂಲ ಉದ್ದೇಶವೇ ಇರಲಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಬೊಮ್ಮಾಯಿ ಸರ್ಕಾರಕ್ಕೆ ಅಗೌರವ ತರಿಸಿದೆ. ರಾಜ್ಯಪಾಲರ ಭಾಷಣದಲ್ಲಿ ಹೊಸತನವಿಲ್ಲ. ರಾಜ್ಯದ ಸಾಧನೆಯ ಬಗ್ಗೆ ಏನೇನೂ ಇಲ್ಲ. ಬದಲಾಗಿ ಅಧಿಕಾರಿಗಳು ಕೊಟ್ಟ ಮಾಹಿತಿಯನ್ನು ಕಟ್ ಆಂಡ್ ಪೇಸ್ಟ್ ಮಾಡಲಾಗಿದೆ. ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿಸಬೇಕು. ಆಲಮಟ್ಟಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಿಯೂ ಆ ಬಗ್ಗೆ ವಿಸ್ತಾರವಾಗಿ ಮಾಹಿತಿ‌ ನೀಡಿಲ್ಲ. ಮಹದಾಯಿ, ಮೇಕೆದಾಟು ಬಗ್ಗೆ ರಸ್ತೆಗಳಲ್ಲಿ ಚರ್ಚೆಯಾಗಿದೆ  ಆದರೆ, ರಾಜ್ಯಪಾಲರ ಭಾಷಣದಲ್ಲಿ ಈ ಬಗ್ಗೆ ಚಕಾರವೇ ಎತ್ತಿಲ್ಲ. ಈ ಮೂಲಕ ಜನರ ಚಿಂತನೆಗಳನ್ನ ಅಲಕ್ಷಿಸಲಾಗಿದೆ ಎಂದು ರಾಜ್ಯಪಾಲರ ಭಾಷಣಕ್ಕೆ ಹೆಚ್.ಕೆ.ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯಪಾಲರ ಭಾಷಣ ನೀರಸವಾಗಿತ್ತು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಒಂದೇ ಒಂದು ಮನೆ ಕೊಟ್ಟಿಲ್ಲ ಲಕ್ಷಾಂತರ ಮನೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ ಅದು ಶುದ್ಧ ಸುಳ್ಳು. 40% ಕಮಿಷನ್ ಆರೋಪದ ಬಗ್ಗೆ ಉಲ್ಲೇಖವಿಲ್ಲ. ಉದ್ಯೋಗದ ಬಗ್ಗೆ ಉಲ್ಲೇಖವಿಲ್ಲ. ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಅದ್ರ ಬಗ್ಗೆ ಮಾಹಿತಿ ಇಲ್ಲ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಘನ ಘೋರ ಅನ್ಯಾಯವಾಗಿದೆ. ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದ್ದಾರೆ.  ಜನರಿಗೆ ದಾರಿ ತಪ್ಪಿಸಿದ್ದಾರೆ. ಈ ಸರ್ಕಾರ ಯಾರ ಪರವೂ ಇಲ್ಲ, ಜನಪರವೂ ಇಲ್ಲ ರೈತರ ಪರವೂ ಇಲ್ಲ, ಯುವಕರ ಪರವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share