Connect with us


      




ಜಾನಪದ

ಜಿಎಸ್‍ಟಿ ಬಾಕಿ: ಗುಪ್ತಚರ ದಳದ ಡಿಜಿ ಆದೇಶ ಹೈಕೋರ್ಟ್ ತಡೆ

Vanitha Jain

Published

on

ಬೆಂಗಳೂರು: ಡಿಸೆಂಬರ್ 08 (ಯು.ಎನ್.ಐ.): ಆನ್‍ಲೈನ್ ಗೇಮಿಂಗ್ ಕಂಪೆನಿಯಾದ ಗೇಮ್ಸ್‍ಕ್ರಾಫ್ಟ್ ಟೆಕ್ನಾಲಜಿ ಬಾಕಿ ಉಳಿಸಿಕೊಂಡಿರುವ ಸುಮಾರು 419 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳುವ ಸಂಬಂಧ ಜಿಎಸ್‍ಟಿ ಗುಪ್ತಚರ ದಳದ ಮಹಾನಿರ್ದೇಶಕರ ಆದೇಶಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಗೇಮ್ಸ್‍ಕ್ರಾಫ್ಟ್ ಸಂಸ್ಥೆಯು 2017ರ ನವೆಂಬರ್‍ನಿಂದ 419 ಕೋಟಿ ರೂ. ಜಿಎಸ್‍ಟಿ ಶುಲ್ಕ ಪಾವತಿ ಮಾಡಲು ವಿಫಲವಾಗಿದೆ. ಹೀಗಾಗಿ, ಕಂಪೆನಿಯ ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆಯುವ ಸಂಬಂಧ ತಾತ್ಕಾಲಿಕ ಮತ್ತು ದೃಢೀಕೃತ ದೇಶಗಳನ್ನು ಕ್ರಮವಾಗಿ ನವೆಂಬರ್ 17 ಮತ್ತು 30ರಂದು ಜಿಎಸ್‍ಟಿ ಗುಪ್ತಚರ ದಳ ಹೊರಡಿಸಿತ್ತು.

ಜಿಎಸ್‍ಟಿ ಗುಪ್ತಚರ ಪಡೆಯ ಆದೇಶವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿರುವ ಗೇಮ್ಸ್‍ಕ್ರಾಫ್ಟ್ ಸಂಸ್ಥೆಯು ಮಧ್ಯಂತರದ ಭಾಗವಾಗಿ ₹130 ಕೋಟಿ ಸ್ಥಿರಾಸ್ತಿಯನ್ನು ಭದ್ರತೆಯನ್ನಾಗಿ ನೀಡಿದ್ದು, ಈ ಮೂಲಕ ತನ್ನ ಬ್ಯಾಂಕ್ ಖಾತೆಯ ಮೂಲಕ ಉದ್ಯೋಗಿಗಳು ಮತ್ತು ಇತರರಿಗೆ ವೇತನ ಪಾವತಿ ಮಾಡಲು ಅವಕಾಶಕ್ಕೆ ಕೋರಿತ್ತು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಆಕ್ಷೇಪ ಮತ್ತು ಗೇಮ್ಸ್‍ಕ್ರಾಫ್ಟ್ ಸಲ್ಲಿಸಿರುವ ದಾಖಲೆಗಳನ್ನು ಪರಿಗಣಿಸದೇ ಪ್ರತಿವಾದಿಗಳು ಆದೇಶ ಹೊರಡಿಸಿದ್ದಾರೆ. “ಅರ್ಜಿದಾರರು 419 ಕೋಟಿ ರೂಪಾಯಿ ಜಿಎಸ್‍ಟಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ. ಆದರೆ, ಅರ್ಜಿದಾರರ ಬ್ಯಾಂಕ್ ಖಾತೆಯಲ್ಲಿ 451 ಕೋಟಿ ರೂಪಾಯಿ ಇರುವುದನ್ನು ವಶಕ್ಕೆ ಪಡೆಯಲಾಗಿರುವುದಕ್ಕೆ ಯಾವುದೇ ಸಕಾರಣಗಳನ್ನು ನೀಡಲಾಗಿಲ್ಲ” ಎಂದು ಪೀಠ ಹೇಳಿದೆ.

ದೃಢೀಕೃತ ಆದೇಶದಲ್ಲಿ ಬಾಕಿಯ ಲೆಕ್ಕಾಚಾರವು ಸ್ಪಷ್ಟವಾಗಿ ಕಣ್ಮರೆಯಾಗಿದ್ದು, ಜಿಎಸ್‍ಟಿ ಗುಪ್ತಚರ ದಳ ಹೊರಡಿಸಿರುವ ಆದೇಶವು ವಿವೇಚನಾರಹಿತವಾಗಿದೆ ಎಂದು ಪೀಠ ಹೇಳಿದೆ. ಹೀಗಾಗಿ, ಬಾಕಿ, ವೇತನ ಪಾವತಿ, ಗ್ರಾಹಕರು/ಪೂರೈಕೆದಾರರಿಗೆ ಹಣ ಪಾವತಿಸಲು ಅರ್ಜಿದಾರ ಕಂಪೆನಿ ಗೇಮ್ಸ್‍ಕ್ರಾಫ್ಟ್‍ಗೆ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ, ಮುಂದಿನ ವಿಚಾರಣೆಯ ವೇಳೆಗೆ ಬ್ಯಾಂಕ್ ಖಾತೆಗಳ ದಾಖಲೆ ಹಾಗೂ ಭದ್ರತೆ ನೀಡಿರುವ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಸೃಷ್ಟಿಸುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಲು ನ್ಯಾಯಾಲಯ ಆದೇಶ ಮಾಡಿದೆ.
ಈ ಮಧ್ಯೆ, ಗೇಮ್ಸ್‍ಕ್ರಾಫ್ಟ್ ಸಂಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಜಿಎಸ್‍ಟಿ ಪ್ರಾಧಿಕಾರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿದೆ.

Share