Connect with us


      
ವಿದೇಶ

ಟ್ಯಾಂಕರ್ ಪಲ್ಟಿ; ಬಿದ್ದ ಇಂಧನ ತುಂಬಿಕೊಳ್ಳುವಾಗ ಸ್ಫೋಟ – 50 ಸಾವು

Iranna Anchatageri

Published

on

ಹೈಟಿ, ಡಿಸೆಂಬರ್ 15 (ಯು.ಎನ್.ಐ.) ಕೆರಿಬಿಯನ್ ರಾಷ್ಟ್ರದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಇಂಧನ ತುಂಬಿದ್ದ ಟ್ಯಾಂಕರ್ ವೊಂದು ಡಿಢೀರನೇ ಪಲ್ಟಿಯಾಗಿತ್ತು. ಈ ಸುದ್ದಿ ತಿಳಿದ ಸುತ್ತಮುತ್ತಲಿನ ಜನರು ಕ್ಯಾನ್ ತೆಗೆದುಕೊಂಡು ಕೆಳಗಡೆ ಬಿದ್ದಿದ್ದ ತೈಲ ತುಂಬಿಕೊಳ್ಳಲು ಆರಂಭಿಸಿದರು. ಈ ವೇಳೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿ 50 ಮಂದಿ ಅಸುನೀಗಿದ್ದಾರೆ. ಅಲ್ಲದೆ, 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಕೆರಿಬಿಯನ್ ರಾಷ್ಟ್ರದ ಕೇಪ್ ಹೈಟಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಅನಾಹುತದಲ್ಲಿ ಕೆಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೆ ನೀಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಹೈಟಿಯಲ್ಲಿ ವಿದ್ಯುತ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಅಲ್ಲದೆ, ಇಂಧನ ಮಾಫಿಯಾ ಸಹ ಅವ್ಯಾಹತವಾಗಿ ನಡೆಯುತ್ತಿದೆ. ಗ್ಯಾಸೋಲಿನ್ ಕೂಡ ಅತ್ಯಂತ ದುಬಾರಿ. ಈ ಹಿನ್ನೆಲೆಯಲ್ಲಿ ಆಗಾಗ್ಗೆ ತೈಲ ಟ್ಯಾಂಕರ್ ಗಳನ್ನು ದರೋಡೆ ಮಾಡುವ ಘಟನೆಗಳು ಇಲ್ಲಿ ಸಂಭವಿಸುತ್ತಿರುತ್ತವೆ. ವಿದ್ಯುತ್ ಕೊರತೆಯನ್ನು ನೀಗಿಸಿಕೊಳ್ಳಲು ಜನರು ಜನರೇಟರ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದಕ್ಕೆ ಇಂಧನ ಬೇಕಾಗುತ್ತದೆ. ಟ್ಯಾಂಕರ್ ಪಲ್ಟಿಯಾದ ಬಳಿಕ ಈ ಸುದ್ದಿ ನಗದರಲ್ಲಿ ಕಾಡ್ಗಿಚ್ಚನಂತೆ ಹಬ್ಬಿತು. ಉಚಿತವಾಗಿ ತೈಲ ಸಿಗುತ್ತದೆ ಎಂದು ನಂಬಿದ ಜನ, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ, ದುರದೃಷ್ಟವಶಾತ್ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.

Share