Connect with us


      
ಕರ್ನಾಟಕ

“ಬಿಜೆಪಿಯಿಂದ ದ್ವೇಷದ ರಾಜಕಾರಣ” – ಡಿಕೆಶಿ

Iranna Anchatageri

Published

on

ಬೆಂಗಳೂರು: ಏಪ್ರಿಲ್ 22 (ಯು.ಎನ್.ಐ.) ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ಸಿಗರನ್ನು ಕೋರ್ಟ್ ಗೆ ಅಲೆಸಬೇಕೆಂಬುದು ಅವರ ಉದ್ದೇಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಮಲ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್,  ‘ನಾವು ದೇಶದ ರೈತರ ಪರವಾಗಿ ಹೋರಾಟ ಮಾಡಿದ ವಿಚಾರವಾಗಿ ನಮ್ಮ ಮೇಲೆ ದೂರು ದಾಖಲಾಗಿದ್ದು, ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾರೆಂಟ್ ಆಗಿತ್ತು.

ದಾಖಲಾದ ದೂರಿನಲ್ಲಿ ದಿನಾಂಕ 20-01-21 ರಂದು ಫ್ರೀಡಂ ಪಾರ್ಕ್ ನಲ್ಲಿ 10 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದ್ದು, ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊದಲ ಆರೋಪಿ ನಾನಾಗಿದ್ದು, ಉಳಿದಂತೆ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮಂಜುನಾಥ್, ಶಫಿವುಲ್ಲಾ ಹಾಗೂ ಬಸನಗೌಡ ಬಾದರ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು.

ಪ್ರತಿಭಟನೆಯಲ್ಲಿ 10 ಸಾವಿರ ಜನ ಸೇರಿದ್ದರೂ ಕೇವಲ ನಮ್ಮ ಮೇಲೆ ಉದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ. ನಾವು ಕಾನೂನು ಗೌರವಿಸಿ ಜಾಮೀನು ಪಡೆದು ಬಂದಿದ್ದೇವೆ. ಅದು ಬೇರೆ ವಿಚಾರ. ಆದರೆ ಪ್ರತಿವೊಂದು ಪ್ರಕರಣದಲ್ಲೂ ನಮ್ಮ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿದೆ. ಮೇಕೆದಾಟು ಪಾದಯಾತ್ರೆ ಸಂಬಂಧ ರಾಮನಗರ, ಕನಕಪುರ, ಬೆಂಗಳೂರಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಮಗೆ ತೊಂದರೆ ನೀಡಿ, ಕೋರ್ಟ್ ಗೆ ಅಲೆಸಬೇಕು ಎಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಶ್ವರಪ್ಪ ಹಾಗೂ ರಾಘವೇಂದ್ರ ಅವರು ಸೆಕ್ಷನ್ 144 ಉಲ್ಲಂಘನೆ ಮಾಡಿದ್ದರಲ್ಲ, ಅಲ್ಲಿ ನ್ಯಾಯಾಲಯ, ಕಾನೂನು ಇರಲಿಲ್ಲವೇ? ಅಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲವೇ ಎಂದು ಪ್ರಶ್ನೆ ಮಾಡಿದ ಡಿಕೆಶಿ, ನಾವು ಹೋರಾಟ ಮಾಡಿದ ಪರಿಣಾಮದಿಂದ ಪ್ರಧಾನಮಂತ್ರಿಗಳು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದರು. ರಾಜ್ಯದಲ್ಲಿ ಇನ್ನೂ ಕಾಯ್ದೆ ಹಿಂಪಡೆದಿಲ್ಲ. ರೈತರ ಪರ ಧ್ವನಿ ಎತ್ತುವ ಕಾಂಗ್ರೆಸ್ ಧ್ವನಿ ಅಡಗಿಸುವ ಪ್ರಯತ್ನ ಇದಾಗಿದೆ ಎಂದರು.

ಇನ್ನು ಪಿಎಸ್ ಐ ನೇಮಕಾತಿ ಹಗರಣ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಹಗರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ನಾವೇ ಇದನ್ನು ಮೊದಲು ಬೆಳಕಿಗೆ ತಂದಿದ್ದೇವೆ. ಈ ಹಗರಣ ನಡೆದ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಗೃಹ ಸಚಿವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಫೋಟೋಗಳು ಬಂದಿವೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಪರೀಕ್ಷೆ ಬರೆದ 52 ಸಾವಿರ ಅಭ್ಯರ್ಥಿಗಳಿಗೆ ಮೋಸ ಆಗಿದೆ. ಪ್ರತಿ ಹುದ್ದೆಗೆ 70-80 ಲಕ್ಷ ಹಣ ಕೊಟ್ಟಿರುವ ವರದಿ ಬಂದಿದೆ. ಇದೊಂದು ಭ್ರಷ್ಟ ಸರ್ಕಾರ. ಈ ಸರ್ಕಾರ ಕೋವಿಡ್ ಬೆಡ್, ಔಷಧಿ, ನೇಮಕಾತಿ, ಮಠಗಳಿಂದಲೂ ಕಮಿಷನ್ ನಿಂದ ಹಿಡಿದು, ಬೆಂಗಳೂರು ಪಾಲಿಕೆ ಕಸ ಗುಡಿಸುವ ವಿಚಾರದವರೆಗೂ ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ’ ಎಂದು ಉತ್ತರಿಸಿದರು.

Share