Connect with us


      




ನ್ಯಾಯಾಲಯ

ದಂಡಿನಶಿವ್ರ ಕರ್ನಾಟಕ ಪಬ್ಲಿಕ್ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಲು ಹೈಕೋರ್ಟ್ ನಿರ್ದೇಶನ

Kumara Raitha

Published

on

ಬೆಂಗಳೂರು: ಡಿಸೆಂಬರ್ 09 (ಯು.ಎನ್.ಐ.) ತುಮಕೂರಿನ ತುರುವೇಕೆರೆ ತಾಲೂಕು ದಂಡಿನಶಿವ್ರ ಹೋಬಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8ರಿಂದ 10ನೇ ತರಗತಿಗೆ ಕೂಡಲೇ ಇಂಗ್ಲೀಷ್ ಶಿಕ್ಷಕರನ್ನು ನೇಮಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯ ಡಿ ಟಿ ಲಕ್ಷ್ಮಿನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶ ಮಾಡಿದೆ.
ಅರ್ಜಿದಾರ ಪರ ವಕೀಲರು “ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8, 9 ಮತ್ತು 10ನೇ ತರಗತಿಗಳಲ್ಲಿ ಒಟ್ಟು 166 ವಿದ್ಯಾರ್ಥಿಗಳಿದ್ದಾರೆ. ಆದರೆ, ಇಂಗ್ಲಿಷ್ ವಿಷಯ ಬೋಧಿಸಲು ಶಿಕ್ಷಕರು ಇಲ್ಲ. ಶಿಕ್ಷಕರು ಸರಿಯಾಗಿ ಪಾಠ ಮಾಡದಿದ್ದರೆ ಇಂಗ್ಲಿಷ್ ವಿಷಯದ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ತೋರಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ. ಇಂಗ್ಲಿಷ್ ಶಿಕ್ಷಕರ ನೇಮಕಾತಿಗೆ ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ಸರ್ಕಾರ ಪರಿಗಣಿಸಿಲ್ಲ” ಎಂದು ಪೀಠದ ಗಮನಸೆಳೆದರು.
ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಶಿಕ್ಷಕರು ಇಲ್ಲದಿದ್ದರೆ 166 ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕರ್ನಾಟಕ ಪಬ್ಲಿಕ್ ಶಾಲೆ 8, 9 ಮತ್ತು 10ನೇ ತರಗತಿಗಳಿಗೆ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದಲ್ಲಿ ಸರಿಯಾಗಿ ಪಾಠ ಮಾಡುವುದನ್ನು ಖಾತರಿಪಡಿಸಬೇಕು. ಇದೇ ತಿಂಗಳ ಕೊನೆಯ ವಾರದಲ್ಲಿ ಅನುಪಾಲನಾ ವರದಿಯ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿತು.

Share