Published
6 months agoon
By
UNI Kannadaನವದೆಹಲಿ, ಜ 6(ಯುಎನ್ ಐ) ದೇಶದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಕೊರೊನಾ ವೈರಸ್ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 90,928 ಹೊಸ ಕೊರೊನಾ ಪಾಸಿಟಿವ್ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
ಅದೇ ರೀತಿ, ಕಳೆದ 24 ಗಂಟೆಗಳಲ್ಲಿ 325 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದರೆ, 19,206 ಮಂದಿ ಕೋವಿಡ್ನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಇದುವರೆಗೆ ದೇಶಾದ್ಯಂತ ಒಟ್ಟು 3,43,41,009 ಮಂದಿ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಇದುವರೆಗೆ ಕೊರೊನಾ 4,82,876 ಮಂದಿಯನ್ನು ಬಲಿ ತೆಗೆದುಕೊಂಡಿದೆ. ದೇಶದಲ್ಲಿ ಪ್ರಸ್ತುತ 2,85,401 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಪ್ರಸ್ತುತ ಕೋವಿಡ್ ದೈನಂದಿನ ಪಾಸಿಟಿವಿಟಿ ದರ ಶೇ 6.43 ರಷ್ಟಿದೆ. ಡಿಸೆಂಬರ್ 28 ರಂದು 9,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 90,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.