Published
6 months agoon
ಚೆನ್ನೈ: ನ. 7 (ಯುಎನ್ಐ) ತಮಿಳುನಾಡು ಮತ್ತು ಅದರ ಉಪನಗರ ಪ್ರದೇಶಗಳಲ್ಲಿ ಭಾನುವಾರವೂ ಭಾರೀ ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಅಧಿಕಾರಿಗಳು ಎರಡು ನಗರ ಜಲಾಶಯಗಳನ್ನು ತೆರೆಯಲು ಸಿದ್ಧತೆ ನಡೆಸಿದ್ದು, ಜನರಿಗೆ ಪ್ರವಾಹ ಎಚ್ಚರಿಕೆಯನ್ನು ನೀಡಿದ್ದಾರೆ.
ಚೆನ್ನೈ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ಚೆಂಬರಂಬಾಕ್ಕಂ ಮತ್ತು ಪುಝಲ್ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲು ಗೇಟ್ಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಜಲಸಂಪನ್ಮೂಲ ಅಧಿಕಾರಿಗಳು ಪ್ರವಾಹದ ಎಚ್ಚರಿಕೆಯನ್ನು ನೀಡಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಇರಿಸಲು ಕಾಂಚೀಪುರಂ ಮತ್ತು ತಿರುವಳ್ಳೂರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಯ ಹಲವಾರು ಪಟ್ಟಣಗಳಲ್ಲಿ ಶನಿವಾರ ಬೆಳಗ್ಗೆಯಿಂದ ಎಡಬಿಡದೆ ಮಳೆಯಾಗುತ್ತಿದೆ. ಮೈಲಾಪುರದಲ್ಲಿ 226 ಮಿ.ಮೀ, ಅಂಬತ್ತೂರು ಮತ್ತು ಚೆನ್ನೈನ ಸಿವಪ್ಪು ಸಂಭವಂನಲ್ಲಿ 205 ಮಿ.ಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಐದು ದಿನಗಳವರೆಗೆ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ರಾಜ್ಯದ ಉನ್ನತ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಮುಂಗಾರು ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು. ನಿರಂತರ ಮಳೆ ಹಿನ್ನೆಲೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನುಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂತ್ರಸ್ತರಿಗೆ ನೆರವಾಗಲು ರಾಷ್ಟ್ರೀಯ ವಿಕೋಪ ರಕ್ಷಣಾ ಪಡೆಯ ನಾಲ್ಕು ತುಕಡಿಗಳನ್ನು ನಿಯೋಜಿಸಲಾಗಿದೆ. ಇವುಗಳ ಪೈಕಿ ಚೆಂಗಲ್ಪೇಟ್ ಮತ್ತು ತಿರುವಳ್ಳುರ್ಗೆ ತಲಾ ಒಂದು, ಎರಡು ತಂಡಗಳನ್ನು ಮಧುರೈನಲ್ಲಿ ನಿಯೋಜಿಸಲಾಗಿದೆ.