Published
5 months agoon
By
Vanitha Jainಬೆಂಗಳೂರು: ಡಿಸೆಂಬರ್ 07 (ಯು.ಎನ್.ಐ.): ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನೂತನ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರಿಗೆ ಅನುದಾನ ಬಿಡುಗಡೆ ಮಾಡಲು ತಿಳಿಸುವಂತೆ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಂಗಳವಾರ ಹೈಕೋರ್ಟ್ ನಿರ್ದೇಶಿಸಿದೆ.
ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು “ಪ್ರಕರಣದ ಗಂಭೀರತೆಯ ಕುರಿತು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸಂಬಂಧಪಟ್ಟ ಸರ್ಕಾರದ ಇಲಾಖೆಗೆ ಮನವರಿಕೆ ಮಾಡಿಕೊಡುವ ಮೂಲಕ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ತಡವಾಗದಂತೆ ನೋಡಿಕೊಳ್ಳಬೇಕು. ಹಾಲಿ ಕಟ್ಟಡ ಶಿಥಿಲವಾಗಿದ್ದು, ಅದು ಕುಸಿದು ಸಮಸ್ಯೆಯಾದರೆ ಅನಗತ್ಯ ಸಮಸ್ಯೆ ಎದುರಾಗಲಿದೆ” ಎಂದು ಎಚ್ಚರಿಸಿದೆ.
“ನ್ಯಾಯಾಲಯಗಳ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂಬುದನ್ನು ನಾವು ನೆನಪಿಸಲು ಬಯಸುತ್ತೇವೆ. ನ್ಯಾಯಿಕ ಕಾರ್ಯನಿರ್ವಹಣೆ ರಾಜ್ಯದಲ್ಲಿ ಅತ್ಯಂತ ಪ್ರಮುಖ ಎಂದು ನಾವು ಭಾವಿಸಿದ್ದೇವೆ. ಹಣಕಾಸಿನ ಕೊರತೆಯ ನೆಪವೊಡ್ಡಿ ನೂತನ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದೆ ತನ್ನ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನುಣಿಚಿಕೊಳ್ಳಲಾಗದು. ಹಣಕಾಸು ಇಲಾಖೆಯು ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿಲುವನ್ನು ಮೆಚ್ಚಲಾಗದು” ಎಂದು ಹೇಳಿರುವ ಪೀಠವು ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.
ಹಾಲಿ ನ್ಯಾಯಾಲಯದ ಕಟ್ಟಡದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಛಾವಣಿ ಶಿಥಿಲಾವಸ್ಥೆಯಲ್ಲಿದೆ ಎಂಬುದು ಸೇರಿದಂತೆ ಸಮಸ್ಯೆಗಳನ್ನು ಉಲ್ಲೇಖಿಸಿ ಕಳೆದ ವರ್ಷದ ಮಾರ್ಚ್ 3ರಂದು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ಸಲ್ಲಿಸಿದ್ದರು.