Connect with us


      




ಕೃಷಿ

ಈ ಬಾರಿ ಮಾವು ಫಸಲು ಕಡಿಮೆ ಸಾಧ್ಯತೆ

Kumara Raitha

Published

on

ಬೆಂಗಳೂರು: ಡಿಸೆಂಬರ್ 15 ( ಯು.ಎನ್.ಐ.) ಅತಿ ಹೆಚ್ಚು ಮಾವು ಬೆಳೆಯುವ ಬಯಲು ಸೀ ಮೆ ಪ್ರದೇಶಗಳಾದ ಕೋಲಾರ, ಶ್ರೀನಿವಾಸಪುರ ಭಾಗಗಳು ಸೇರಿದಂತೆ ರಾಜ್ಯಾದ್ಯಂತ ಈ ವರ್ಷ ವಾಡಿಕೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. ಇದರ ಪರಿಣಾಮ ಈ ಬಾರಿ ಮಾವು ಬೆಳೆಯ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಸಂಬಂಧ ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ರಾಜ್ಯ ಮಾವು ಅಭಿವೃದ್ಧಿ ನಿಗಮವು ತಜ್ಞರ ಬೆಳೆ ಸಮೀಕ್ಷೆ ಆರಂಭಿಸಿದೆ. ಹೆಚ್ಚು ಮಳೆಯಿಂದ ಒಟ್ಟಾರೆ ತಂಡಿಯ ವಾತಾವರಣವಿರುತ್ತದೆ. ಇದರಿಂದ ಚಳಿ ಹೆಚ್ಚಾಗುವ ಸಾಧ್ಯತೆಯಿದೆ. ಚಳಿ ಹೆಚ್ಚಾದರೆ ಮಾವು ಗುಣಮಟ್ಟದ ಹೂವು ಬಿಡುತ್ತದೆ. ಆದರೆ ಈ ಬಾರಿ ಮಳೆ ಹೆಚ್ಚಾದ್ದರಿಂದ ಮರಗಳಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ ನೈಟ್ರೋಜನ್ ಪ್ರಮಾಣ ಕೂಡ ಹೆಚ್ಚಾಗಲಿದೆ. ಇದರಿಂದ ಮಾವು ಹೂವು ಬಿಡುವ ಅವಧಿಯಲ್ಲಿ ಚಿಗುರೊಡೆಯುವ ಸಾಧ್ಯತೆಯಿದೆ ಎಂದು ತೋಟಗಾರಿಕಾ ತಜ್ಞ ಹಿತ್ತಲಮನಿ ವಿವರಿಸಿದರು.

ಈ ಹಿನ್ನೆಲೆಯಲ್ಲಿ ಮಾವಿನ ಮರಗಳಲ್ಲಿ ಹೂವು ಬರುವುದೋ ಅಥವಾ ಚಿಗುರುವುದೋ ಎಂಬ ಬಗ್ಗೆ ಅನುಮಾನವಿದೆ. ಕಳೆದ ವರ್ಷದ ಮಾವು ಬೆಳೆ ಹಾಗೂ ಈ ಬಾರಿಯ ವಾತಾವರಣದ ಮೇಲೆ 2022ನೇ ಸಾಲಿನ ಮಾವಿನ ಫಸಲನ್ನು ಇಳಿ ಹಂಗಾಮು ಎಂದು ಪರಿಗಣಿಸಬಹುದು ಎಂದವರು ಹೇಳಿದರು.
ಹೆಚ್ಚು ತೇವಾಂಶದಿಂದಾಗಿ ಈ ಬಾರಿ ಸೆಪ್ಟೆಂಬರ್-ಅಕ್ಟೋಬರ್‍ನಲ್ಲಿ ಮಾವಿನ ಮರ/ಗಿಡಗಳು ಚಿಗುರಿದ್ದವು. ಜನವರಿ-ಫೆಬ್ರವರಿಗೆ ಹೂವು ಬಿಡಬೇಕು. ಆದರೆ ಇದೀಗ ಹೂವು ಬರುತ್ತದೆಯೋ ಇಲ್ಲವೇ ಮತ್ತೆ ಚಿಗುರು ಬರುತ್ತದೆಯೋ ಕಾದು ನೋಡಬೇಕು. ಅಕಾಲಿಕ ಸಮಯದಲ್ಲಿ ಚಿಗುರೊಡೆದರೆ ಉತ್ತಮ ಇಳುವರಿ ಸಿಗುವುದಿಲ್ಲ. ರಾಜ್ಯದಲ್ಲಿ ಬೆಳೆ ಸಮೀಕ್ಷೆ ಪ್ರಕಾರ 1.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ಸಮೀಕ್ಷೆಯಾಗದ ಬೆಳೆಯೂ ಸಾಕಷ್ಟು ಪ್ರಮಾಣದಲ್ಲಿದೆ.
ದೇಶದ ಮಾವು ಬೆಳೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತಿತರ ರಾಜ್ಯಗಳಲ್ಲೂ ಮಾವಿನ ಉತ್ಪಾದನೆಯಲ್ಲಿ ಈ ಬಾರಿ ಏರು ಪಾರಾಗುವ ಸಾಧ್ಯತೆಯಿದೆ.
—–
ಮಾವು ಬೆಳೆಯುವ ಸ್ಥಳಗಳು: ರಾಜ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಮಾವು ಬೆಳೆಯುವ ಸ್ಥಳಗಳೆಂದರೆ ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ರಾಮನಗರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಬೀದರ್, ಕೊಪ್ಪಳ, ಬಾಗಲಕೋಟ, ಚಿತ್ರದುರ್ಗ, ರಾಣೆಬೆನ್ನೂರು, ದಾವಣಗೆರೆ.
————
ತಂಡಿಯ ವಾತಾವರಣ ಹೂವುಗಳನ್ನು ಉತ್ಪತ್ತಿ ಮಾಡಲು ನೆರವಾಗುತ್ತದೆ. ಮೊಗ್ಗುಗಳು ತಯಾರಾಗಿ ಸುಪ್ತವಾಗಿ ಕುಳಿತಿರುತ್ತವೆ. ಚಳಿಗಾಲ ಮುಗಿದ ನಂತರ ಹೂಗಳು ಅರಳಿ ಹೊರಗೆ ಬರುತ್ತವೆ. ಬರಿ ಚಳಿಯಿದ್ದರೆ ಒಂದು ರೀತಿ ಮಾವಿಗೆ ಅನುಕೂಲವಾದರೆ, ಚಳಿಯ ಜತೆಗೆ ಮರಗಳು ನೀರು ತುಂಬಿಕೊಂಡಿದ್ದರೆ ಅದು ಬೇರೆ ರೀತಿ ಅನಾನುಕೂಲವಾಗುತ್ತದೆ. ಹೀಗಾಗಿ ಈ ಮಳೆಗಾಲ ಮಾವು ಬೆಳೆಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳೆರಡೂ ಇವೆ. ಇದೆಲ್ಲದರ ಆಧಾರದ ಮೇಲೆ ಈ ಬಾರಿಯ ಮಾವು ಇಳಿ ಹಂಗಾಮಾಗುವ ಸಾಧ್ಯತೆಯಿದೆ.
ಡಾ. ಎಸ್.ವಿ. ಹಿತ್ತಲಮನಿ, ಮಾವು ಬೆಳೆ ತಜ್ಞರು
—–
ಈ ಬಾರಿ ಮಾವು ಬೆಳೆಯ ಸಾಧಕ-ಬಾಧಕಗಳನ್ನು ಅರಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸುತ್ತಿದ್ದೇವೆ. ಉತ್ತಮ ಬೆಳೆ ಬರುವ ಸಾಧ್ಯತೆ ಕಂಡು ಬಂದರೆ ಕೂಡಲೇ ರಾಷ್ಟ್ರೀಯ ಮಟ್ಟದಲ್ಲಿ ಮಾವು ವರ್ತಕರ ಸಭೆ ನಡೆಸಿ ಮಾರಾಟಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.
ಕೆ.ವಿ. ನಾಗರಾಜ್, ಅಧ್ಯಕ್ಷರು, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
—-
ಈ ಬಾರಿ ಕೋಲಾರ, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲೆಡೆಯೂ ಭರ್ಜರಿ ಮಳೆಯಾಗಿದೆ. ಮಾವು ಬೆಳೆಗೆ ಮಳೆ ಹೆಚ್ಚಾದರೆ ಬೂದಿ ರೋಗ ಬರುತ್ತದೆ. ಕಡಿಮೆಯಾದರೂ ಇಳುವರಿ ಬರುವುದಿಲ್ಲ. ಈಗ ಎಷ್ಟೇ ಮಳೆ ಬಿದ್ದರೂ ದೊಡ್ಡ ಮಟ್ಟದ ನಷ್ಟವನ್ನು ಪರಿಗಣಿಸಲಾಗದು. ಆದರೆ ಹೂವು ಬಿಟ್ಟಾಗ, ಕಾಯಿ, ಹಣ್ಣು ಬಿಡುವ ಅವಧಿಯಲ್ಲಿ ಇಂತಹ ದೊಡ್ಡ ಪ್ರಮಾಣದ ಮಳೆ ಬಿದ್ದರೆ ಪೂರ್ತಿ ಬೆಳೆ ಹಾಳಾಗುತ್ತದೆ. ಕಳೆದ ಬಾರಿ ಮಾವು ಫಸಲು  ಉತ್ತಮವಾಗಿತ್ತು. ಆದರೆ ಉತ್ತಮ ಮಾರುಕಟ್ಟೆಯಾಗಲಿ, ಬೆಲೆಗಳಾಗಲಿ ಸಿಗದೆ ಸಾಕಷ್ಟು ನಷ್ಟ ಹೊಂದಿದ್ದೇವೆ. ಈ ಬಾರಿಯೂ ಇದೇ ರೀತಿ ಮಾವು ಬೆಳೆಗೆ ತೊಂದರೆಯಾದರೆ ರೈತರಿಗೆ ಉಳಿಗಾಲವಿಲ್ಲ. ಹೀಗಾಗಿ ಸರಕಾರ ಈಗಲೇ ಮಾವು ಬೆಳೆಯ ಸಂಬಂಧ ಪರಿಹಾರ ಕಂಡುಕೊಳ್ಳುವುದು ಉತ್ತಮ.
-ಚೆನ್ನಾರೆಡ್ಡಿ, ಮಾವು ಬೆಳೆಗಾರರು, ಶ್ರೀನಿವಾಸಪುರ

Share