Connect with us


      
ದೇಶ

ಅಸ್ಸಾಂನಲ್ಲಿ ವರುಣನ ಅಬ್ಬರ; ಪ್ರವಾಹ ಸ್ಥಿತಿಯಲ್ಲಿ ಸಿಲುಕಿದ 4 ಲಕ್ಷ ಜನ!

Lakshmi Vijaya

Published

on

ದಿಸ್ ಪುರ್ : ಮೇ 18 (ಯು.ಎನ್.ಐ.) ಪೂರ್ವ ಮುಂಗಾರಿಗೆ ಬೆಚ್ಚಿಬಿದ್ದಿರೋ ಅಸ್ಸಾಂ ಮಳೆನೀರಲ್ಲಿ ಮುಳುಗುತ್ತಿದೆ. ಇದುವರೆಗೂ ಭಾರೀ ಮಳೆಯಿಂದ 4 ಲಕ್ಷಕ್ಕೂ ಹೆಚ್ಚು ಜನ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. 8 ಮಂದಿ ನಾಪತ್ತೆಯಾಗಿದ್ದಾರೆ. ಇದೇ ರೀತಿ ಮಳೆಯಾದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನೀರಿನ ಮಟ್ಟ ಏರಿಕೆಯಾದ ನಂತರ ವಿಶ್ವದ ಅತಿದೊಡ್ಡ ನದಿಗಳಲ್ಲಿ ಒಂದಾದ ಬ್ರಹ್ಮಪುತ್ರದ ಉದ್ದಕ್ಕೂ ಕನಿಷ್ಠ 1,500 ಹಳ್ಳಿಗಳು ಜಲಾವೃತವಾಗಿವೆ.ರಾಜ್ಯದ ಬಹುತೇಕ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಇಂದು ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಮಳೆಯಿಂದ 5 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ಪ್ರವಾಹ ಪರಿಸ್ಥಿತಿಯು ಗಂಭೀರವಾಗುತ್ತಿದೆ ಎಂದು ಅಸ್ಸಾಂನ ಜಲಸಂಪನ್ಮೂಲ ಸಚಿವ ಪಿಜುಶ್ ಹಜಾರಿಕಾ ತಿಳಿಸಿದ್ದಾರೆ.

ಹೊಜೈ ಜಿಲ್ಲೆಯಲ್ಲಿ ಸಿಲುಕಿದ್ದ 2,000 ಜನರನ್ನು ಭಾರತೀಯ ಸೇನೆಯ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ರೈಲು ಮತ್ತು ರಸ್ತೆ ಸಂಪರ್ಕಗಳೆರಡೂ ಕಡಿತಗೊಂಡಿದ್ದು ದಿಮಾ ಹಸಾವೊ ಜಿಲ್ಲೆಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.  ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ದೂರವಾಣಿ ಕರೆ ಮಾಡಿ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ದಿಮಾ ಹಸಾವೊದಲ್ಲಿ ಅಕ್ಕಿ, ಬೇಳೆ ಮತ್ತು ಔಷಧಗಳಂತಹ ಅಗತ್ಯ ವಸ್ತುಗಳನ್ನು ಏರ್‌ಡ್ರಾಪ್ ಮಾಡಲು ವಾಯುಪಡೆಯನ್ನು ಕೇಳಿಕೊಳ್ಳಲಾಗಿದೆ.  ಹವಾಮಾನ ಕಚೇರಿಯು ಅಸ್ಸಾಂ ಮತ್ತು ನೆರೆಯ ಮೇಘಾಲಯದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು ರೆಡ್ ಅಲರ್ಟ್ ಮತ್ತು ಈಶಾನ್ಯದ ಉಳಿದ ಭಾಗಗಳಿಗೆ ಬುಧವಾರ ಆರೆಂಜ್ ಅಲರ್ಟ್ ಘೋಷಿಸಿದೆ

Share