Connect with us


      




ದೇಶ

ಸಿಡಿಎಸ್ ಬಿಪಿನ್ ರಾವತ್, ಇತರ ಉನ್ನತ ಅಧಿಕಾರಿಗಳಿದ್ದ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಪತನ

Bindushree Hosuru

Published

on

ಚೆನ್ನೈ: ಡಿ, 8 (ಯುಎನ್ಐ) ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಪತನಗೊಂಡಿದೆ ಎಂದು ವರದಿಯಾಗಿದೆ.

ತಮಿಳುನಾಡಿನ ಕೊಯಮತ್ತೂರು ಮತ್ತು ಸೂಲೂರು ನಡುವೆ ಅಪಘಾತಕ್ಕೀಡಾದ ಮಿ-ಸಿರೀಸ್ ಚಾಪರ್‌ನಲ್ಲಿ ರಾವತ್ ಅವರಲ್ಲದೆ, ಅವರ ಸಿಬ್ಬಂದಿ ಮತ್ತು ಕೆಲವು ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 14 ಜನರು ಇದ್ದರು ಎಂದು ತಿಳಿದುಬಂದಿದೆ.

ಸೂಲೂರು ಐಎಎಫ್ ನೆಲೆಯಿಂದ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಕಾಲೇಜಿಗೆ (ಡಿಎಸ್‌ಸಿ) ತೆರಳುತ್ತಿದ್ದಾಗ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

“ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ IAF Mi-17V5 ಹೆಲಿಕಾಪ್ಟರ್ ಇಂದು ತಮಿಳುನಾಡಿನ ಕೂನೂರು ಬಳಿ ಅಪಘಾತಕ್ಕೀಡಾಗಿದೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ” ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ವರದಿಗಳ ಪ್ರಕಾರ, ಹೆಲಿಕಾಪ್ಟರ್ ಕ್ರ್ಯಾಶ್ ಲ್ಯಾಂಡಿಂಗ್ ನಂತರ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ಬಗ್ಗೆ ಸ್ಥಳೀಯ ಆಡಳಿತ ಮಂಡಳಿಯವರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿದ್ದಾರೆ.

ಇಲ್ಲಿಯವರೆಗೆ, ಹೆಲಿಕಾಪ್ಟರ್‌ನ ಸುಟ್ಟ ಅವಶೇಷಗಳಿಂದ ನಾಲ್ಕು ಸುಟ್ಟ ದೇಹಗಳನ್ನು ಹೊರತೆಗೆಯಲಾಗಿದೆ. ಜನರಲ್ ರಾವತ್ ಸೇರಿದಂತೆ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

IAF Mi-17V5 ಹೆಲಿಕಾಪ್ಟರ್‌ನಲ್ಲಿರುವ ವ್ಯಕ್ತಿಗಳ ಹೆಸರು- CDS ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್ (ಪತ್ನಿ), ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಎನ್.ಕೆ.ಗುರ್ಸೇವಕ್ ಸಿಂಗ್, ಎನ್.ಕೆ.ಜಿತೇಂದ್ರ ಕುಮಾರ್, L/NK ವಿವೇಕ್ ಕುಮಾರ್, ಎಲ್/ಎನ್ಕೆ ಬಿ ಸಾಯಿ ತೇಜ, ಹವಾಲ್ದಾರ್ ಸತ್ಪಾಲ್.

ಈ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಸ್ಥಳಕ್ಕೆ ಧಾವಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

Share