Connect with us


      




ನ್ಯಾಯಾಲಯ

ಅಕ್ರಮ ಕಟ್ಟಡ ತೆರವು: ನ್ಯಾಯಾಲಯಕ್ಕೆ ಕಾರ್ಯ ವಿಧಾನವನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಿದ ಗೌರವ್ ಗುಪ್ತ

Kumara Raitha

Published

on

ಬೆಂಗಳೂರು: ಡಿಸೆಂಬರ್ 09 (ಯು.ಎನ್.ಐ.) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ಪತ್ತೆ, ತೆಗೆದುಕೊಂಡಿರುವ ಕ್ರಮ ಮತ್ತು ಅವುಗಳ ನೆಲಸಮಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತ ಗೌರವ್ ಗುಪ್ತ ಕರ್ನಾಟಕ ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಬೆಂಗಳೂರು ದಕ್ಷಿಣ ವಲಯದಲ್ಲಿ ಮೂರು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ತಿಳಿಸಲಾಗಿದೆ. ನಿಮ್ಮನ್ನು ಎಚ್ಚರಿಸಿ ನಗರದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಿಮಗೆ ಅರಿವು ಮೂಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ, ನಿಮ್ಮ ಕೆಲಸ ಕಾಗದದ ಮೇಲೆ ಮಾತ್ರವಲ್ಲ ವಾಸ್ತವದಲ್ಲಿ ಬಿಂಬಿತವಾಗಬೇಕು” ಎಂದು ಬಿಬಿಎಂಪಿ ವಕೀಲರಿಗೆ ತಿಳಿಸಿತು.
“ಅಕ್ರಮ ಕಟ್ಟಡ ನೆಲಸಮ ಮಾಡುವಾಗ ಯಾವ ಕಟ್ಟಡ ಯಾರಿಗೆ ಸೇರಿದ್ದು ಎಂಬುದನ್ನು ತಿಳಿಸಬೇಕು. ಈ ಕುರಿತು ಒಂದೆರಡು ಉದಾಹರಣೆಗಳನ್ನು ನೀಡಬೇಕು. ಆಗ ನೀವು ಕ್ರಮಕೈಗೊಂಡಿದ್ದೀರಿ ಎಂಬುದು ನಮಗೆ ಅರಿವಾಗಲಿದೆ” ಎಂದಿತು.
“ಅಕ್ರಮ ಕಟ್ಟಡಗಳ ಪತ್ತೆ, ಈ ಸಂಬಂಧ ಕೈಗೊಂಡಿರುವ ಕ್ರಮ, ಕಾರ್ಯವಿಧಾನದ ಕುರಿತ ಮಾಹಿತಿಯನ್ನು ಒಳಗೊಂಡ ಪ್ರಮಾಣ ಪತ್ರವನ್ನು ಖುದ್ದು ಹಾಜರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸಲ್ಲಿಸಿದ್ದಾರೆ. ಬಿಬಿಎಂಪಿ ಕಾಯಿದೆಯ ಸೆಕ್ಷನ್ 313ರ ಅಡಿ 1,31,745 ಕಟ್ಟಡಗಳ ಸಮೀಕ್ಷೆ ನಡೆಸಲಾಗಿದ್ದು, ದಾಖಲಾತಿಗಳ ಬಗ್ಗೆ ಅನುಮಾನ ಮೂಡಿರುವ 16,286 ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ಕಾನೂನಿನ ಪ್ರಕಾರ ಅಗತ್ಯ ಕ್ರಮಕೈಗೊಂಡು ಅಂತಿಮ ಆದೇಶವನ್ನು ಹೊರಡಿಸಬೇಕು. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿ, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ಬಿಬಿಎಂಪಿ ಕೋರಿಕೆಯಂತೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

Share