Connect with us


      
ಕರ್ನಾಟಕ

ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಕ್ರಮ ನೇಮಕಾತಿ

Iranna Anchatageri

Published

on

ಬೆಳಗಾವಿ (ಸುವರ್ಣ ವಿಧಾನಸೌಧ) ಡಿಸೆಂಬರ್ 14 (ಯು.ಎನ್.ಐ.) ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಕ್ರಮ ಕುರಿತಂತೆ ಕರ್ನಾಟಕ ವಿಧಾನಮಂಡಲ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ. ಬೋಧನಾ ಸಿಬ್ಬಂದಿ ನೇಮಕಾತಿ, ಪದೋನ್ನತಿ, ಹಾಗೂ ವೇತನ ನಿಗದಿ ವಿಚಾರದಲ್ಲಿ ಆಘಾತಕಾರಿ ಅಂಶಗಳನ್ನು ಸಮಿತಿ ಬಹಿರಂಗಪಡಿಸಿದೆ.
ಕಾಂಗ್ರೆಸ್ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ರಚನೆಯಾಗಿತ್ತು. ಈ ಸಮಿತಿಯಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್, ಸತೀಶ್ ರೆಡ್ಡಿ ಕಾಂಗ್ರೆಸ್ ನ ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ ಹಾಗೂ ಜೆಡಿಎಸ್ ನ ಎಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ ಮತ್ತು ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಆಯನೂರು ಮಂಜುನಾಥ್ ಸೇರಿದಂತೆ ಹಲವರು ಸಮಿತಿಯ ಸದಸ್ಯರಾಗಿದ್ದರು.
ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಸಹಾಯ ಪ್ರಾಧ್ಯಾಪಕರು, ಸಹ ಪ್ರಾಧ್ಯಪಕರು ಮತ್ತು ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕಾತಿಗಳನ್ನು ಅಖಿಲ ಭಾರತ ಜಾಹೀರಾತು ಮತ್ತು ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಾಡಬೇಕೆಂದು ಯುಜಿಸಿ ನಿಯಮಾವಳಿಗಳಿವೆ. ಆದರೆ, ರಾಜ್ಯದಲ್ಲಿ ನಡೆದ 67 ನೇಮಕಾತಿಗಳಲ್ಲಿ ಮಾದರಿ ಸೂತ್ರಗಳನ್ನು ಪಾಲಿಸದಿರುವುದನ್ನು 2016-17ನೇ ಸಾಲಿನ ಭಾರತದ ಲೆಕ್ಕ ನಿಯಂತ್ರಣ ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೇ 2013ರಲ್ಲಿ 22 ತಾತ್ಕಾಲಿಕ ಪ್ರಾಧ್ಯಾಪಕರನ್ನು ವಿವಿ ಸಕ್ರಮಗೊಳಿಸಿತು. ಈ ಬಗ್ಗೆ ಜಾಹೀರಾತು ನೀಡಲಾಗಿಲ್ಲ. ಆಯ್ಕೆ ಸಮಿತಿ ರಚಿಸದೇ ಸಹಾಯಕ ಪ್ರಾಧ್ಯಾಪಕರನ್ನು ನೇರ ನೇಮಕಾತಿ ಮಾಡಿದೆ. ಅಲ್ಲದೆ, ಸಕ್ರಮಗೊಂಡ 22ರಲ್ಲಿ 18 ತಾತ್ಕಾಲಿಕ ಉಪನ್ಯಾಸಕರು ಆ ಹುದ್ದೆಗೆ ಅಗತ್ಯವಿದ್ದ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿಲ್ಲ. ಈ ಕಾನೂನು ಬಾಹಿರ ನೇಮಕಾತಿಗೆ ಸಂಬಂಧಿಸಿದಂತೆ ವಿವಿಯ ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಕಠಿಣ ಶಿಸ್ತಿನ ಕ್ರಮತೆಗೆದುಕೊಳ್ಳಬೇಕು. ಹಾಗೂ ನೇಮಕಗೊಂಡ 22 ಸಹಾಯಕ ಪ್ರಾಧ್ಯಾಪಕರನ್ನು ಸೇವೆಯಿಂದ ವಜಾ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ.
ಕಲಬುರಗಿ ಪೂಜ್ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ವರ್ಕ್ ಶಾಪ್ ಸೂಪರಿಂಟೆಂಡೆಂಟ್ ಮತ್ತು ಟ್ರೈನಿಂಗ್ ಆಂಡ್ ಪ್ಲೇಸ್ ಮೆಂಟ್ ಅಧಿಕಾರಿ ಹುದ್ದೆಗಳನ್ನು ರಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಅರ್ಜಿಗಳನ್ನು ಆಹ್ವಾನಿಸದೆ, ಆಯ್ಕೆ ಸಮಿತಿ ರಚಿಸದೆ ಅದೇ ಕಾಲೇಜಿನಲ್ಲಿ ಅನುದಾನ ರಹಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅಲ್ಲದೆ ನೇಮಕಗೊಂಡ ಅಧಿಕಾರಿ ಪಿಎಚ್ ಡಿ ಪದವಿಯನ್ನು ಸಹ ಪಡೆದಿಲ್ಲ.
ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2009 ಹಾಗೂ 2010ರಲ್ಲಿ 17 ಉಪನ್ಯಾಸಕರುಗಳನ್ನು ಸಕ್ರಮಗೊಳಿಸಲಾಗಿತ್ತು. ಅಲ್ಲದೆ, ಎಲ್ಲ ಉಪನ್ಯಾಸಕರುಗಳ ವೇತನವನ್ನು ಗುತ್ತಿಗೆ ಆಧಾರವಾಗಿ ನೇಮಕಗೊಂಡ ದಿನದಿಂದ ಪಿಂಚಣಿ ಲಾಭಗಳನ್ನು ನೀಡಲಾಯಿತು. ಆದರೆ, ಇದೆಲ್ಲ ಯುಜಿಸಿ ನಿಯಮದ ಅಕ್ರಮವಾಗಿದೆ.
ಇನ್ನು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಕಾಲೇಜು ಹಾಗೂ ರಾಣೆಬೆನ್ನೂರಿನ ಆರ್ ಐ ಇ ಎಸ್ ಕಾಲೇಜಿನಲ್ಲಿ 12 ಉಪನ್ಯಾಸಕರುಗಳನ್ನು ಸಕ್ರಮಗೊಳಿಸಿ ನಿವೃತ್ತಿ ಅಥವಾ ಸಾವಿನಿಂದ ಉಂಟಾದ ಖಾಲಿ ಹುದ್ದೆಗಳ ಮೇಲೆ ಯುಜಿಸಿ ವೇತನ ಶ್ರೇಣಿಯನ್ನು ವಿಸ್ತರಿಸಲಾಗಿತ್ತು. ಅಲ್ಲದೆ ಈ ನೇಮಕಾತಿ ವಿಚಾರದಲ್ಲಿ ಅರ್ಜಿ ಆಹ್ವಾನಿಸಿಲ್ಲ. ಆಯ್ಕೆ ಸಮಿತಿಯನ್ನು ರಚನೆ ಮಾಡದೇ ಇರುವುದನ್ನು ಸಮಿತಿ ಪತ್ತೆ ಹಚ್ಚಿದೆ.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಎರಡು ಉಪನ್ಯಾಸಕರ ಹುದ್ದೆಯಲ್ಲಿ ಕನಿಷ್ಠ ಅಗತ್ಯತೆ ಪ್ರತಿಯಾಗಿ ಬಿಎಸ್ ಸಿ ಮತ್ತು ಎಂಟೆಕ್ ಪದವಿ ಪಡೆದಿದ್ದ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಆ ಅಭ್ಯರ್ಥಿ ಪಡೆದಿದ್ದ ಮಗಧ ವಿವಿಯ ಪ್ರಮಾಣ ಪತ್ರ ಸುಳ್ಳಾಗಿತ್ತು. ಆದಾಗ್ಯೂ ಅಭ್ಯರ್ಥಿಯ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ.
ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರದಿದ್ದರೂ ನೇಮಕಾತಿ ಮಾಡಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಸಹಾಯಕ ಪ್ರಾಧ್ಯಾಪಕರ 5 ಹುದ್ದೆಗಳನ್ನು 2012ರಲ್ಲಿ ಭರ್ತಿ ಮಾಡಿತ್ತು. ಆಯ್ಕೆಯಾದ ಐವರಲ್ಲಿ ಇಬ್ಬರು ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಗೊಳ್ಳಲು ಅಗತ್ಯವಿದ್ದ ಕನಿಷ್ಠ 8 ವರ್ಷಗಳ ಬೋಧನಾ ಅನುಭವವನ್ನು ಹೊಂದಿಲ್ಲ. ಅಲ್ಲದೆ, ಗ್ರಂಥಪಾಲಕರ ಹುದ್ದೆ ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿಗಳ ವಿರುದ್ಧವಾಗಿ ನೇಮಕ ಮಾಡಿಕೊಳ್ಳಲಾಗಿದೆ.
ಇಷ್ಟೇ ಅಲ್ಲದೆ, ಮೈಸೂರು ವಿವಿಯ ರೀಡರ್ ಗೆ ಪ್ರಾಧ್ಯಾಪಕರಾಗಿ ಪದೋನ್ನತಿ, ಇದೇ ವಿವಿಯ ಗ್ರಂಥಪಾಲಕ ಸಹಾಯಕರನ್ನು ಸಹಾಯಕ ಗ್ರಂಥಪಾಲಕರನ್ನಾಗಿ ನಿಯಮಬಾಹಿರ ಪದೋನ್ನತಿ, ಐದು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಗ್ರೇಡ್ – 1 ಪ್ರಾಂಶುಪಲರನ್ನಾಗಿ ಪದೋನ್ನತಿ, ಮೈಸೂರಿನ ಬಸುದೇವ ಸೊಮಾನಿ ಪದವಿ ಕಾಲೇಜಿನಲ್ಲಿ ಒಬ್ಬ ಉಪನ್ಯಾಸಕರಿಗೆ ಮೂರು ಮುಂಗಡ ವೇತನವೃದ್ಧಿ, ಬೆಂಗಳೂರು ಹಾಗೂ ಹಂಪೆಯ ಕನ್ನಡ ವಿವಿಯಲ್ಲಿ 6.25 ಕೋಟಿ ರೂಪಾಯಿ ಬಾಡಿಗೆ ಭತ್ಯೆ ವಿಚಾರಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ವಿಚಾರಗಳಲ್ಲಿ ಯುಜಿಸಿ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ ಎಂದು ಸಮಿತಿ ಶಿಫಾರಸು ಮಾಡಿದೆ.

Share