Connect with us


      
ಸಾಮಾನ್ಯ

ರಾಮಚಂದ್ರಿಯ ಊರಿನಲ್ಲಿ!

Kumara Raitha

Published

on

ರಾಧಿಕಾ ವಿಟ್ಲ

 

ಅಂಕಣಒಂದೂರಲ್ಲಿ ಒಂದಿನ

 

ಏನೆಂದರೆ ಏನೂ ಇಲ್ಲ!

ನನಗೆ ಅವಳು ಯಾರೆಂದು ಗೊತ್ತಿತ್ತಾ?

ಊಹೂಂ.

ಅವಳಿಗೆ ನಾನು?

ಊಹೂಂ, ಗೊತ್ತಿಲ್ಲ.

ಆದರೂ ಒಂದರೆ ಗಳಿಗೆಯ ಮಾತು, ನಗುವೇ ಸಾಕು. ಬೆಸೆಯುವ ಬಂಧ ಜೀವನವಿಡೀ ಅವರದೊಂದು ಚಿತ್ರವನ್ನು ನಮ್ಮ ಮನಸೊಳಗೆ ಅಚ್ಚೊತ್ತಿ ಬಿಡುತ್ತದೆ! ನೆನಪಾದಾಗಲೆಲ್ಲ ಮುಖದಲ್ಲೊಂದು ಚಂದದ ನಗು ಮೂಡಿಸುತ್ತದೆ.

ಬೆಳಗ್ಗೆ ೧೦ ಗಂಟೆಗೆಲ್ಲ ಹೊರಟು ಅವನನ್ನೇ ಹಿಂಬಾಲಿಸುತ್ತಿದ್ದೆ. ರೋಶನ್‌ ಸಿಂಗ್ ನನ್ನ ಆ ದಿನದ ಗೈಡ್.‌ ದಾರಿಯುದ್ದಕ್ಕೂ ಮಾತು.. ಮೌನ.. ಮಾತು. ಆಗಾಗ ಕಾಡಿನ ಮೌನದೊಳಗೆ ಮೌನವಾಗುತ್ತಿದ್ದ ನಾನು ಹಿಂದೆ ಉಳಿದುಬಿಟ್ಟು ಯಾವುದನ್ನೋ ನನ್ನ ಫ್ರೇಮಿನೊಳಗೆ ಬಂಧಿಸಲು ಹೊರಟಾಗ ಇದಕ್ಕಿದ್ದಂತೆ ಮಾತು ನಿಂತುಬಿಡುತ್ತಿತ್ತು. ಆಗೆಲ್ಲಾ ಆತ ಸ್ವಲ್ಪ ದೂರ ಮುಂದೆ ಹೋದವನು ಬಹುಶಃ ಅವನ ಮಾತಿಗೇನೂ ಉತ್ತರ ಬರುತ್ತಿಲ್ಲವಲ್ಲ ಅಂತ ಹಿಂತಿರುಗಿ ನೋಡಿ, ನಾನಿನ್ನೂ ಬಂದಿಲ್ಲ ಅಂತನಿಸಿ ಅಲ್ಲೇ ನಿಂತುಬಿಡುತ್ತಿದ್ದ. ನಾನು ಕ್ಯಾಮೆರಾ ನೇತಾಡಿಸಿಕೊಂಡು ಮುಂದಿದ್ದ ಆ ಕಾಲುದಾರಿಯಲ್ಲಿ ಹೆಜ್ಜೆ ಹಾಕಿದರೆ, ಅದ್ಯಾವುದೋ ಹುಲ್ಲುಕಡ್ಡಿಯನ್ನು ಬಾಯಲ್ಲಿಟ್ಟುಕೊಂಡು ಅನಂತ ದಿಟ್ಟಿಸುತ್ತಾ ಧ್ಯಾನದಲ್ಲಿರುತ್ತಿದ್ದು ಕಾಣುತ್ತಿತ್ತು. ನಾನು ಬಂದೆನೆಂದು ಗೊತ್ತಾದ ಕೂಡಲೇ ಧ್ಯಾನದಿಂದ ಎಚ್ಚೆತ್ತವನಂತೆ ಮುಂದೆ ನಡೆಯಲು ಶುರು ಮಾಡುತ್ತಿದ್ದ.

ಕಾಡು ಕಳೆದು ಬೋಳು ಬೆಟ್ಟದ ಮೇಲೆ ಬಂದಾಗ, ಚಳಿಗಾಲವಾದರೂ ಮಧ್ಯಾಹ್ನದ ಸದವಕಾಶ ಉಪಯೋಗಿಸಿಕೊಳ್ಳಬೇಕೆಂಬ ಹಠದಂತೆ ಸೂರ್ಯ ನೆತ್ತಿಯ ಮೇಲೆ ಚುರುಚುರು ಸುಡುತ್ತಿದ್ದ. ಚಳಿಗೆ ಮುದುರಿದ್ದ ಚರ್ಮಕ್ಕೆ ಬಿಸಿಲಿನ ಬಿಸಿ ತಾಗಿ ಒಂಥರಾ ಉರಿ. ಇಷ್ಟಾಗಿಯೂ ನನಗೆ ಅಂಥ ಸುಸ್ತಾಗಿಲ್ಲ ಎಂಬುದು ನನ್ನ ಮುಂದೆ ಹೋಗುತ್ತಿದ್ದ ಅವನಿಗೆ ಅರ್ಥವಾಗಿತ್ತು. “ಕತ್ತಲಾಗಲು ಇನ್ನೂ ಟೈಮಿದೆ ಅಲ್ವಾ, ಏನ್ಮಾಡೋಣ? ವಾಪಸ್ಸು ಹೋಗೋಣವಾ ಅಥವಾ ನಮ್ಮನೆಯಲ್ಲೊಂದು ಟೀ ಕುಡಿದು ಬರೋಣವಾ?” ಎಂದು ಪ್ರಶ್ನೆಯೆಸೆದು ನನ್ನತ್ತ ನೋಡಿದ. ನಾನು ಫೋನು ನೋಡಿದೆ, ಈಗಲೋ ಆಗಲೋ ಸ್ವಿಚ್‌ ಆಫ್‌ ಆಗುವ ಸ್ಥಿತಿಯಲ್ಲಿತ್ತು. ಗಂಟೆ ಮೂರಷ್ಟೇ ದಾಟಿತ್ತು.

“ನಿಮ್ಮೂರಿನ ಹೆಸರೇನು ಹೇಳಿದ್ರಿ? ಮರೆತೆ” ಅಂದೆ. “ಗುಯ್ಲಾನಿ” ಎಂದ.

“ನಡೀರಿ ಹೋಗೋಣ, ಎಲ್ಲಿದೆ ನಿಮ್ಮನೆ?” ನಾನು ಕೇಳಿದೆ. ಆತ ತಾನು ನಿಂತಲ್ಲಿಂದ ಕೈ ಮಾಡಿ ಎಡಕ್ಕೆ ತೋರಿಸಿ, ಆ ಬೆಟ್ಟದ ಕಡೆಗಿನ ಸಾಲಿನ ಕೊನೇ ಮನೆ” ಎಂದ. ನಾವು ರಾತ್ರಿ ವಾಪಸ್ಸು ತಲುಪಬೇಕಿದ್ದ ಜಾಗಕ್ಕೆ ಹೋಗುವ ದಾರಿ, ನಮ್ಮ ಬಲಕ್ಕಿದ್ದ ಇನ್ನೊಂದು ಬೆಟ್ಟವನ್ನೇರಿ ಇಳಿಯುತ್ತಿತ್ತು. ಆತ ತೋರಿದ ಕೈತುದಿಗೇ ಅಂಟಿ ಬಿಡುತ್ತವೋ ಎಂಬಂತೆ ಬೆಂಕಿಪೊಟ್ಟಣಗಳೆಲ್ಲ ಒಂದರ ಮೇಲೊಂದು ಪೇರಿಸಿಟ್ಟ ಹಾಗೆ ಪುಟ್ಟಪುಟ್ಟ ಮನೆಗಳು ಚಂದ ಕಂಡವು. “ಅಲ್ಲಿಗೆ ತಲುಪಲು ಒಂದಾದರೂ ಗಂಟೆ ಬೇಕು. ಹೋಗಲು ಇಳಿದರೆ ಆಯಿತು. ಆದರೆ ಬರಬೇಕಾದರೆ ಇನ್ನರ್ಧ ಗಂಟೆ ಹೆಚ್ಚೇ ಬೇಕು. ಏರುದಾರಿ” ಅಂತ ಮನಸ್ಸಲ್ಲೇ ನಾನು ಲೆಕ್ಕ ಹಾಕಿಕೊಂಡು, ಅವನ ಹಿಂದಿಂದೆ ಹೆಜ್ಜೆ ಹಾಕತೊಡಗಿದೆ. ಬೆಟ್ಟ ಮುಗಿದು ಊರ ಹಾದಿಯುದ್ದಕ್ಕೂ ಕುತೂಹಲದ ಜೀವಗಳು ನನ್ನನ್ನೊಮ್ಮೆ ನೋಡಿ, ಮುಗುಳ್ನಕ್ಕು, ನನ್ನ ಕೊರಳಲ್ಲಿ ನೇತು ಹಾಕಿದ್ದ ಕ್ಯಾಮರಾವನ್ನೂ ನೋಡಿ ನಾಚಿಕೊಳ್ಳುತ್ತಿದ್ದವು. ದೂರದಲ್ಲೊಂದು ಕಿರಿಗಣ್ಣು ನನ್ನ ನೋಡಿ ನಕ್ಕಂತೆ ಅನಿಸಿ ನಾನು ಬಿಟ್ಟ ಕಣ್ಣು ಬಿಟ್ಟು ಮತ್ತೆ ನೋಡಿದೆ.

ಬೊಚ್ಚುಬಾಯಿ ತುಂಬ ನಗು ತುಂಬಿಸಿಕೊಂಡ ಆಕೆಯ ಮಮತೆಯ ಭಾವ ಕಿರುಗಣ್ಣ ಸಂದಿಯಲ್ಲೂ ಇಣುಕಿದವು.

ಆಕೆ ನಾನು ನಡೆದು ಹೋಗುವ ಆ ಓಣಿಯ ಪಕ್ಕದಲ್ಲೇ ಇದ್ದ ಪುಟ್ಟ ಗದ್ದೆಯಿಂದ ಪಾಲಕ್‌ ಸೊಪ್ಪು ಕೀಳುತ್ತಿದ್ದಳು. ಅಲ್ಲೇ ಹಿಂದಿರುವ ಮನೆ ಆಕೆಯದೇ ಇರಬೇಕು. “ಛೇ, ಎಷ್ಟು ಚಂದ ಕಾಣುತ್ತಿದ್ದಾಳಲ್ಲ ಈಕೆ, ಒಂದು ಚಿತ್ರವಾದರೂ ಬೇಕಲ್ಲಾ” ಎಂದು ಮನಸ್ಸಲ್ಲೇ ಲೆಕ್ಕಾಚಾರ ಹಾಕುತ್ತಾ, “ರಾತ್ರಿ ಅಡುಗೆಗೆ ಈಗಲೇ ತಯಾರಿಯಾ?” ಎನ್ನುತ್ತಾ ಮಾತಿಗೆಳೆದೆ. ಆಕೆ ನಕ್ಕು, “ಹುಂ, ರೋಟಿ ಸಬ್ಜೀ ಮಾಡಬೇಕಲ್ಲಾ, ಮಗ ಸೊಸೆ ಗದ್ದೆ ಕೆಲಸ ಮುಗಿಸಿಕೊಂಡು ಬರುವಾಗ ಇಷ್ಟಾದರೂ ತಯಾರಿ ಮಾಡಿ ಇಡುವುದು. ಅವಳಿಗೆ ಸಹಾಯ ಆಗುತ್ತೆ” ಎಂದು ನಾನವಳ ಪಕ್ಕದ ಮನೆಯವಳೇ ಎಂಬಂತೆ ಸಹಜವಾಗಿ ಉತ್ತರಿಸಿದಳು.

“ಆಹಾ… ನೀವು ನಕ್ಕರೆ ಮಾತ್ರ ಬಾರೀ ಚಂದ ಕಾಣ್ತೀರಿ” ಎಂದೆ.

ಚಂದ ಎಂದ ಕೂಡಲೇ ನಾಚಿದ್ದೇ ಅಲ್ಲದೆ ಹೌಹಾರಿ, “ಅಯ್ಯೋ, ನಾನು ಚಂದವಾ?! ವಯಸ್ಸಾದ ಮೇಲೆ ಚಂದ ಎಲ್ಲ ಹೋಯ್ತು” ಎಂದಳು.

ಮಾಗಿದ ಜೀವದ ನಿರಿಗೆ ಮುಖ, ಬೊಚ್ಚುಬಾಯಿಯ ಮುಗ್ಧ ನಗು ನಿಜಕ್ಕೂ ಚಂದ ಕಾಣುತ್ತಿತ್ತು. “ಅರೆ, ವಯಸ್ಸಾದ ಮೇಲೆ ಚಂದ ಎಲ್ಲಿ ಹಾರಿ ಹೋಗುತ್ತೆ? ನನ್ನ ಕಣ್ಣಿಗೆ ತುಂಬ ಚಂದ ಕಾಣಿಸ್ತಾ ಇದೀರಿ ನೀವು. ಇದೇ ಖುಷಿಗೆ ಒಂದು ಫೋಟೋ ತೆಗೀತೀನಿ ಇರಿ. ನೀವೇ ನಿಮ್ಮ ಚಂದ ನೋಡಿ” ಎಂದು ತಮಾಷೆ ಮಾಡ್ತಾ ಆಕೆಯ ಉತ್ತರಕ್ಕೂ ಕಾಯದೆ ಚಕಚಕನೆ ಮೂರ್ನಾಲ್ಕು ಪಟ ತೆಗೆದೆ. ಆಕೆ ಇನ್ನೂ ನಾಚಿ ಕರಗಿಹೋದಳು.

“ಈಗ ನೋಡಿ ನಿಮ್ಮ ಪಟ. ಚಂದ ಇಲ್ವಾ ಹೇಳಿ” ಎಂದು ಕ್ಯಾಮೆರಾ ಅವಳ ಕಡೆ ಚಾಚಿದೆ.

ಆಕೆ ಕುತೂಹಲದಿಂದ ನನ್ನನ್ನೂ, ನಾನು ತೆಗೆದ ಪಟವನ್ನೂ ಇಷ್ಟಗಲ ಬೊಚ್ಚುಬಾಯಿ ಬಿಟ್ಟು ಕಣ್ಣರಳಿಸಿ ನೋಡಿ, ಹೌದಾ ಎಂಬಂತೆ ನನ್ನತ್ತ ನೋಡಿ ಮತ್ತೆ ಬೊಚ್ಚು ಬಾಯರಳಿಸಿ ನಕ್ಕಳು.

“ಅಲ್ಲಿ ನೋಡಿ, ನನ್ನ ಮೊಮ್ಮಕ್ಕಳು. ಅವರೆಲ್ಲ ತುಂಬ ಚಂದ ಇದ್ದಾರೆ. ನೀನು ಅವರ ಪಟ ತೆಗೆದರೆ ಈ ಅಜ್ಜಿ ಜೀವಕ್ಕೆ ಖುಷಿಯಾಗುತ್ತೆ” ಎಂದಳು. ಅದಕ್ಕೇನಂತೆ, ತೆಗೆಯೋಣ ಅಂತ ಮಕ್ಕಳ ಫೋಟೋ ಸೆಶನ್ನೂ ಆಯಿತು. ತನ್ನ ಫೋಟೋ ತೆಗೆಸಿಕೊಳ್ಳುವುದಕ್ಕಿಂತ ಹೆಚ್ಚಿನ ಖುಷಿ ಮೊಮ್ಮಕ್ಕಳ ಫೋಟೋ ತೆಗೆಯುವಾಗ ಆಕೆಯ ಮುಖದಲ್ಲಿ ಮಿಂಚಿದ್ದೂ ಕಂಡೆ.

“ಬನ್ನಿ, ಚಾ ಕುಡಿವ” ಆಕೆ ಕರೆದಳು. ನಾನು ಹೂಂ ಅನ್ನಲೂ ಆಗದೆ ಊಹೂಂ ಅನ್ನಲೂ ಆಗದೆ ಸಂದಿಗ್ಧದಲ್ಲಿರುವಾಗ, ನನ್ನ ಮುಂದಿದ್ದ ಆತ “ಬನ್ನಿ ನಮ್ಮ ಮನೇಲೇ ಚಾ ಕುಡಿಯುವಿರಂತೆ” ಅಂತ ನನಗೆ ಹೇಳಿ, ಆಕೆಯತ್ತ ತಿರುಗಿ, “ನಮ್ಮ ಮನೆಗೆ ಕರ್ಕೊಂಡು ಹೋಗ್ತಾ ಇದ್ದೆ. ಅಲ್ಲೇ ಚಾ ಕುಡೀತಾರೆ” ಅಂತೇಳಿ ನಕ್ಕ. ಆಕೆಯೂ ತಲೆಯಾಡಿಸಿದಳು.

ಒಂದೈದು ನಿಮಿಷದ ಸಂಭಾಷಣೆಯಾದ್ರೂ ಎಷ್ಟು ಚಂದವಿತ್ತಲ್ಲಾ ಅಂದುಕೊಳ್ಳುತ್ತಾ, ಛೇ, ಅವಳ ಹೆಸರು ಕೇಳಲೇ ಇಲ್ವಲ್ಲಾ ಅಂತ ನನ್ನನ್ನೇ ನಾನು ಹಳಿದುಕೊಳ್ತಾ, ಅವನ ಮನೆಯಲ್ಲೂ ಅವನಮ್ಮ ಮಾಡಿಕೊಟ್ಟ ಚಾ ಕುಡಿದು, ಗಂಟೆ ಐದು ಬಾರಿಸುತ್ತದೆ ಎಂಬುದನರಿತು, ಗಡಿಬಿಡಿಯಲ್ಲಿ ಅಲ್ಲಿಂದೆದ್ದು, ಮತ್ತೆ ಬ್ಯಾಗೇರಿಸಿ ಅವನ ಹಿಂದೆ ಹೊರಟೆ. ಒತ್ತಾಯದಿಂದ  ಅವನಮ್ಮ ಕಿತ್ತು ಕೊಟ್ಟ ಅವನ ಮನೆಯಂಗಳದ ಮುಸಂಬಿಯೂ ಈಗ ಬ್ಯಾಗ್‌ ಸೇರಿ, ಇನ್ನೂ ಹೆಚ್ಚು ಭಾರವಾಗಿ, ಏರುಹಾದಿಯಲ್ಲಿ ಉಸ್ಸೆನ್ನುತ್ತಾ ಹತ್ತುತ್ತಿದ್ದಾಗ, ಅವಳು ಇನ್ನೂ ಅಲ್ಲೇ ಇದ್ದಳು, ಮೊದಲು ಸಿಕ್ಕಲ್ಲೇ. ಅದೇ ಬೊಚ್ಚುಬಾಯಿ ನಗೆಯೊಂದಿಗೆ.

“ಚಾ ಕುಡಿದಾಯಿತಾ” ನನ್ನ ಸ್ವಂತ ಅಜ್ಜಿಯಷ್ಟೇ ಪ್ರೀತಿಯಿಂದ ಕೇಳಿದಳು.

“ಆಯ್ತು” ಅಂದೆ.

ನನ್ನ ಮುಂದೆ ಹೋಗುತ್ತಿದ್ದ ಆತ ಇನ್ನು ಮಾತಾಡ್ತಾ ನಿಲ್ಲಬೇಡಿ ಅನ್ನುವ ಮುಖಭಾವದಲ್ಲಿ, “ಇನ್ನೊಂದು ಗಂಟೇಲಿ ಕತ್ತಲಾಗುತ್ತೆ, ನಾವು ಆ ಕಾಡು ದಾಟಬೇಕು” ಎಂದು ಎಚ್ಚರಿಸಿದ.

“ಹಾಂ” ಎಂದು ನಾನು ನಕ್ಕೆ. ಮುಂದೆ ಹೆಜ್ಜೆ ಇಟ್ಟವಳು ಥಟ್ಟನೆ ನೆನಪಾಗಿ ಮತ್ತೆ ತಿರುಗಿ, “ನಿಮ್ಮ ಹೆಸರೇನು?” ಎಂದೆ.

“ರಾಮಚಂದ್ರಿ” ಎಂದಳು.

“ಅರೆ, ಹಿಂಗೂ ಒಂದು ಹೆಸರಿದೆಯಾ! ರಾಮಚಂದ್ರಿ! ಎಷ್ಟು ಚಂದ ಹೆಸರಿದು” ಅನ್ನುತ್ತಾ ಅಲ್ಲೇ ನಿಂತುಬಿಟ್ಟೆ.

ಆತ ಮುಂದೆ ಹೋಗ್ತಾ ಹೋಗ್ತಾ, “ಇಲ್ಲೆಲ್ಲಾ ಇಂಥ ಹೆಸರು ಕಾಮನ್ನು” ಅಂದ.

ಆಕೆಗೆ ಈವರೆಗೆ ಯಾರೂ ಹೇಳದಿದ್ದ ವಿಷಯವೊಂದನ್ನು ನಾನು ಹೇಳಿದೆ ಎಂಬಂತೆ ಆಕೆ, “ಹೌದಾ, ನನ್ನ ಹೆಸರು ಚಂದ ಇದೆಯಾ?” ಎಂದಳು.

“ರಾಮಚಂದ್ರ ಎಂಬ ಗಂಡು ಮಕ್ಕಳ ಹೆಸರು ಗೊತ್ತಿದೆ. ಆದ್ರೆ, ರಾಮಚಂದ್ರಿ ಎಂಬ ಹೆಣ್ಣು ಮಕ್ಕಳ ಹೆಸರನ್ನು ನಾನೀವರೆಗೆ ಕೇಳೇ ಇಲ್ಲ! ಅದಕ್ಕೇ ಹೇಳಿದೆ. ಸರಿ, ಬರ್ತೇನೆ, ಖುಷಿಯಾಯ್ತು ನಿಮ್ಮನ್ನ ಮಾತಾಡಿಸಿ” ಅನ್ನುತ್ತಾ ಗಡಿಬಿಡಿಯಿಂದ ತಿರುಗಿದರೆ, ಆಕೆ, “ನಿನ್ನ ಹೆಸರು?” ಎಂದಳು.

ಹೋಗ್ತಾ ಹೋಗ್ತಾ ಕೈಬೀಸಿ “ರಾಧಿಕಾ” ಎಂದು ಜೋರಾಗಿ ಹೇಳಿದೆ.

“ನನ್ನ ಹೆಸರನ್ನೇ ಚಂದ ಎಂದು ಹೇಳಿದ ನಿನಗೆ ಅದೆಷ್ಟು ಚಂದದ ಹೆಸರಿದೆ ಮಗಳೇ. ಸಾಕ್ಷಾತ್‌ ರಾಧಾರಾಣಿಯೇ ನೆನಪಾದಳು” ಎನ್ನುತ್ತಾ ಕೈಮುಗಿದಳು.

ಆಕೆಯ ಉತ್ತರಕ್ಕೆ ಮುಗಿದ ಕೈಗಳಿಗೆ ಏನೂ ತೋಚದೆ ನಾನೂ ಕೈಜೋಡಿಸಿ ಹೊರಟೆ. ಮರೆಯಾಗುವವರೆಗೂ ಆಕೆ ನೋಡುತ್ತಲೇ ಇದ್ದಳು.

ಯಾಕೆಂದರೆ ನಾನೂ ಮತ್ತೆ ಮತ್ತೆ ತಿರುಗಿ ನೋಡಿದ್ದೆ!

ಲೇಖಕರ ಪರಿಚಯ:

ರಾಧಿಕಾ ವಿಟ್ಲ ಅವರು ಕನ್ನಡನಾಡಿನ ಕರಾವಳಿಯವರು (ದಕ್ಷಿಣ ಕನ್ನಡ ಜಿಲ್ಲೆ) ಮೂಲತಃ ಪತ್ರಕರ್ತರು. ಇವರ ಬರೆಹಗಳಲ್ಲಿ ಕ್ಯಾಮೆರಾ ಕಣ್ಣಿನ ಸ್ಪಷ್ಟತೆ ಇರುತ್ತದೆ. ಇದು ಅತಿಶೋಕ್ತಿಯಲ್ಲ. ಇವರು ಅನನ್ಯ ಛಾಯಾಗ್ರಾಹಕರೂ ಹೌದು ಎಂಬುದು ಖಂಡಿತ ಕಾಕಾತಾಳೀಯ ಅಲ್ಲ. ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳನ್ನು ನೋಡುವುದು ಸೊಗಸು. ಇವರು ಪ್ರವಾಸಿ ಪ್ರಿಯೆ. ದೇಶ-ವಿದೇಶಗಳನ್ನು ಸದಾ ಸುತ್ತುವ, ಕಂಡಿದ್ದನ್ನು ದಾಖಲಿಸುವ ಪ್ರವೃತ್ತಿ ಉಳ್ಳವರು. ಇವರು “ಒಂದೂರಲ್ಲಿ ಒಂದಿನ” ಹೆಸರಿನಲ್ಲಿ ಬರೆಯುವ ಅಂಕಣ ರಾಷ್ಪ್ರದ ಹಳೆಯ – ಪ್ರತಿಷ್ಠಿತ ಯು.ಎನ್.ಐ. ನಲ್ಲಿ  ಪ್ರತಿ ಭಾನುವಾರದಂದು ಪ್ರಕಟವಾಗುತ್ತದೆ ಎಂದು ತಿಳಿಸಲು ಸಂತೋಷವಾಗುತ್ತದೆ.
Share