Connect with us


      




ದೇಶ

ವಾಯುಮಾರ್ಗ ಬಳಕೆಗೆ ಅನುಮತಿಸುವಂತೆ ಪಾಕ್​ಗೆ ಮನವಿ ಮಾಡಿಕೊಂಡ ಭಾರತ

Bindushree Hosuru

Published

on

ನವದೆಹಲಿ: ನ. 4 (ಯುಎನ್ಐ) ಗೋಫಸ್ಟ್ ಏರ್‌ಲೈನ್‌ನ ಶ್ರೀನಗರದಿಂದ ಶಾರ್ಜಾ ವಿಮಾನಯಾನಕ್ಕೆ ಪಾಕಿಸ್ತಾನ ಮಾರ್ಗವಾಗಿ ಕ್ಲಿಯರೆನ್ಸ್ ನೀಡುವಂತೆ, ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಶ್ರೀನಗರದಿಂದ ಶಾರ್ಜಾಗೆ ಹೋಗಲು ವಿಮಾನವನ್ನು ತನ್ನ ವಾಯುಪ್ರದೇಶದಲ್ಲಿ ಬಳಸಲು ಪಾಕಿಸ್ತಾನ ಅನುಮತಿಸಿಲ್ಲ. ಹಾಗಾಗಿ ಯುಎಇನ ಶಾರ್ಜಾಗೆ ಹೋಗಲು ಅತ್ಯಂತ ದೀರ್ಘ ಮಾರ್ಗದ ಮೂಲಕ ಹೋಗಬೇಕಾಗಿದೆ. ಈ ಹಿಂದೆ ಗೋ ಏರ್ ಎಂದು ಕರೆಯಲ್ಪಡುವ ಗೋ ಫರ್ಸ್ಟ್, ಅಕ್ಟೋಬರ್ 23 ರಿಂದ ಶ್ರೀನಗರ ಮತ್ತು ಶಾರ್ಜಾ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಿತ್ತು. ಕಳೆದ ತಿಂಗಳು ಕಣಿವೆಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೇವೆಯನ್ನು ಉದ್ಘಾಟಿಸಿದರು.

ಅಕ್ಟೋಬರ್ 23, 24, 26 ಮತ್ತು 28 ರಂದು ಶ್ರೀನಗರ-ಶಾರ್ಜಾ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸಲು ಪಾಕಿಸ್ತಾನದ ಅಧಿಕಾರಿಗಳು ಗೋಫಸ್ಟ್ ವಿಮಾನಗಳಿಗೆ ಓವರ್‌ಫ್ಲೈಟ್ ಕ್ಲಿಯರೆನ್ಸ್ ನೀಡಿದ್ದರು ಎಂದು ಮೂಲವೊಂದು ತಿಳಿಸಿದೆ.

ಮೂಲಗಳ ಪ್ರಕಾರ, ಪಾಕಿಸ್ತಾನವು ಅಕ್ಟೋಬರ್ 31 ರಿಂದ ನವೆಂಬರ್ 30 ರ ಅವಧಿಗೆ ಅದೇ ವಿಮಾನಕ್ಕೆ ಅನುಮತಿಯನ್ನು ತಡೆಹಿಡಿದಿದೆ ಎಂದು ತಿಳಿದುಬಂದಿದೆ.

ಮಂಗಳವಾರದಂದು ಪಾಕಿಸ್ತಾನವು ತನ್ನ ವಾಯುಪ್ರದೇಶದ ಮೂಲಕ ವಿಮಾನವನ್ನು ಹಾದುಹೋಗಲು ಅನುಮತಿಸಲಿಲ್ಲ. ಹೀಗಾಗಿ ಗುಜರಾತ್‌ ಮೂಲಕ ಹೋಗಬಹುದಾದ ದೀರ್ಘ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈ ಮಾರ್ಗದ ಮೂಲಕ ಹೋದ್ರೆ, ಸುಮಾರು 40 ನಿಮಿಷ ಹೆಚ್ಚು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ದೀರ್ಘ ಮಾರ್ಗದಲ್ಲಿ ಹೆಚ್ಚಿನ ಇಂಧನ ಬಳಕೆಯಾಗುತ್ತದೆ. ಇದರಿಂದ ಟಿಕೆಟ್ ದರಗಳನ್ನು ಹೆಚ್ಚಿಸ ಬೇಕಾಗುತ್ತದೆ. ಅಥವಾ ಈ ತಡೆರಹಿತ ಸೇವೆಯನ್ನು ಏಕ-ನಿಲುಗಡೆ ಸೇವೆಗೆ ಪರಿವರ್ತಿಸಬೇಕಾಗುತ್ತದೆ. ಆದ್ದರಿಂದ, ಈ ಸೇವೆಯಲ್ಲಿ ಟಿಕೆಟ್ ಕಾಯ್ದಿರಿಸಿದ ಸಾಮಾನ್ಯ ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಮಾನಕ್ಕೆ ಓವರ್‌ಫ್ಲೈಟ್ ಕ್ಲಿಯರೆನ್ಸ್ ನೀಡುವಂತೆ ಭಾರತವು ಪಾಕಿಸ್ತಾನಕ್ಕೆ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಹಾರಾಟಕ್ಕೆ ಅನುಮತಿ ನಿರಾಕರಿಸಿದ್ದಕ್ಕೆ ಪಾಕಿಸ್ತಾನ ಸರ್ಕಾರ ಇನ್ನೂ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರಕ್ಕೆ ನಾಲ್ಕು ಬಾರಿ ಕಾರ್ಯನಿರ್ವಹಿಸುವ ವಿಮಾನವು ಅಕ್ಟೋಬರ್ 23 ಮತ್ತು ಅಕ್ಟೋಬರ್ 31 ರ ನಡುವೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿದಾಗ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ ಎಂದು ಅವರು ಹೇಳಿದರು.

ಗೋ ಫಸ್ಟ್ ಈ ವಿಷಯದ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ಅಥವಾ ಪ್ರತಿಕ್ರಿಯೆಯನ್ನು ನೀಡಿಲ್ಲ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 2009 ರಲ್ಲಿ ಶ್ರೀನಗರ-ದುಬೈ ವಿಮಾನಯಾನವನ್ನು ಪ್ರಾರಂಭಿಸಿತು. ಆದರೆ ಕಡಿಮೆ ಬೇಡಿಕೆಯಿಂದಾಗಿ ಸ್ವಲ್ಪ ಸಮಯದ ನಂತರ ಅದನ್ನು ನಿಲ್ಲಿಸಲಾಯಿತು.

Share