Published
7 months agoon
ದೇವಭೂಮಿ: ನ. 7 (ಯುಎನ್ಐ) ಗುಜರಾತ್ ಕರಾವಳಿಯ ಅರೇಬಿಯನ್ ಸಮುದ್ರದ ಅಂತಾರಾಷ್ಟ್ರೀಯ ಸಮುದ್ರ ಗಡಿರೇಖೆಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (PMSA)ಅಧಿಕಾರಿ ಹಾರಿಸಿದ ಗುಂಡಿಗೆ ಭಾರತೀಯ ಮೀನುಗಾರ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರಲ್ಲಿ ಓರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯವಾಗಿದೆ. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದ ಥಾಣೆಯ ಮೀನುಗಾರ “ಜಲ್ಪರಿ” ಎಂಬ ಮೀನುಗಾರಿಕಾ ದೋಣಿಯಲ್ಲಿದ್ದ. ಆತನನ್ನು ಪಿಎಂಎಸ್ಎ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದಾರೆ. ದೋಣಿ ಅಕ್ಟೋಬರ್ 25 ರಂದು ಓಖಾದಿಂದ ಪ್ರಯಾಣಿಸಿತ್ತು ಎಂದು ದೇವಭೂಮಿ ದ್ವಾರಕಾ ಅಧೀಕ್ಷಕ ಪೊಲೀಸ್ ಸುನಿಲ್ ಜೋಶಿ ಮಾಹಿತಿ ನೀಡಿದ್ದಾರೆ.
ಅರಬ್ಬಿ ಸಮುದ್ರದಲ್ಲಿ 12 ನಾಟಿಕಲ್ ಮೈಲುಗಳ ಆಚೆ ಸಂಭವಿಸುವ ಘಟನೆಗಳ ಕುರಿತು ಗುಜರಾತ್ನ ವ್ಯಾಪ್ತಿಯನ್ನು ಹೊಂದಿರುವ ಪೋರಬಂದರ್ ನವಿ ಬಂದರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
ಭಾನುವಾರ 32 ವರ್ಷದ ಮೀನುಗಾರ ಶ್ರೀಧರ್ ರಮೇಶ್ ಚಾಮ್ರೆ ಅವರ ಮೃತದೇಹವನ್ನು ಓಖಾ ಬಂದರಿಗೆ ತರಲಾಯಿತು.
ಪ್ರಸ್ತುತ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ನಂತರವೇ ವಿವರಗಳನ್ನು ಹಂಚಿಕೊಳ್ಳಬಹುದು ಎಂದು ಭಾರತೀಯ ಕೋಸ್ಟ್ ಗಾರ್ಡ್ (ICG) ಹೇಳಿದೆ.
ಭಾರತದ ದೋಣಿ ಪಾಕಿಸ್ತಾನದ ಗಡಿಯೊಳಗೆ ಕಾನೂನುಬಾಹಿರವಾಗಿ ಬಂದಿದೆ. ಅಲ್ಲದೇ ಅವರಿಗೆ ಪಿಎಂಎಸ್ಎ ಎಚ್ಚರಿಗೆ ನೀಡಲು ಪ್ರಯತ್ನಿಸಿದೆ. ಇದನ್ನು ಮೀನುಗಾರರು ಗಮನಿಸದೇ ಗಡಿ ದಾಟಿ ಬಂದಿದ್ದಾರೆ. ಹಾಗಾಗಿ ಗುಂಡು ಹಾರಿಸಲಾಯಿತು ಎಂದು ಪಾಕಿಸ್ತಾನ ಹೇಳಿದೆ.
ಬೋಟ್ನಲ್ಲಿದ್ದ ಇತರ ಆರು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಸಾಗಣೆ ಅಥವಾ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಇರಬಹುದೇನೋ ಎಂಬ ಅನುಮಾನದ ಮೇಲೆ ಭದ್ರತಾ ಕಾಳಜಿಯಿಂದ PMSA ಅವರನ್ನು ಬಂಧಿಸಿದೆ ಪಾಕಿಸ್ತಾನ ಹೇಳಿದೆ.
ಆರು ಭಾರತೀಯರನ್ನು ಬಂಧಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯ ಬಗ್ಗೆ ಐಸಿಜಿ ಕೇಳಿದಾಗ, ಬಂಧನದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದೆ.