Connect with us


      
ಸಿನೆಮಾ

ಸಾಮಾಜಿಕತೆ ಹೆಸರಿನಲ್ಲಿ ಮಾಡುವ ಸಿನೆಮಾಗಳು ಪ್ರಶಸ್ತಿ ಸಲುವಾಗಿ ಆಗಿರುತ್ತವೆ

Kumara Raitha

Published

on

‌ರಾಷ್ಟ್ರದ ಪ್ರತಿಷ್ಠಿತ ಫಿಲ್ಮ್‌ ಸೊಸೈಟಿಗಳಲ್ಲಿ ಒಂದಾದ ಸುಚಿತ್ರಾ ಫಿಲ್ಮ್‌ ಸೊಸೈಟಿ ಸ್ಥಾಪಕರಲ್ಲಿ ಒಬ್ಬರಾದ ಹೆಚ್. ಎನ್.  ನರಹರಿ ರಾವ್‌ ೧೩ನೇ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದ ಕಲಾತ್ಮಕ ನಿರ್ದೇಶಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಸಿನೆ ವಿಮರ್ಶಕರೂ ಆಗಿರುವ ಇವರನ್ನು ಯು.ಎನ್.‌ಐ. ಪ್ರತಿನಿಧಿ ಕುಮಾರ ರೈತ ಸಂದರ್ಶಿಸಿದ್ದಾರೆ.

ಯು.ಎನ್.ಐ. ಪ್ರತಿನಿಧಿ: ಬಹುತೇಕ ಭಾರತೀಯ ಸಿನೆಮಾ ವಿಮರ್ಶೆಗಳಲ್ಲಿ ತಾಂತ್ರಿಕ ವಿಷಯಗಳ ಪ್ರಸ್ತಾಪವೇ ಇರುವುದಿಲ್ಲ ಏಕೆ ? ವಿಮರ್ಶಕರಿಗೆ ತಾಂತ್ರಿಕ ವಿಷಯದ ಬಗ್ಗೆ ಗೊತ್ತಿಲ್ಲದಿರುವುದು ಕಾರಣ ಅಂತೀರಾ ಅಥವಾ ಸಿನೆಮಾ ವಿಮರ್ಶೆಯಲ್ಲಿ ಇದರ ಪ್ರಸ್ತಾಪವೇ ಬೇಕಿಲ್ಲ ಅಂತೀರಾ ?

ನರಹರಿ ರಾವ್‌: ಸಿನೆಮಾದ ಬೇರೆಬೇರೆ ವಿಭಾಗಗಳ ತಾಂತ್ರಿಕ ವಿಚಾರಗಳ ಬಗ್ಗೆ ಆಳವಾದ ಮಾಹಿತಿ ಇರಬೇಕು. ಹಾಗೆ ಇದ್ದಾಗಷ್ಟೇ ಬರೆಯಲು ಸಾಧ್ಯವಾಗುತ್ತದೆ. ಬಹಳಷ್ಟು ವಿಮರ್ಶಕರು ಅಭಿನಯದ ಬಗ್ಗೆಯೇ ಬರೆಯುತ್ತಾರೆ. ಇನ್ನೊಂದು ವಿಚಾರ ಎಲ್ಲ ಪತ್ರಿಕೆಗಳವರೂ ಹೊರಗಿನ ಪರಿಣಿತ ವಿಮರ್ಶಕರಿಂದ ಬರೆಸುವುದಿಲ್ಲ. ಅದೂ ಅಲ್ಲದೇ ಸಿನೆಮಾಗಳ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ಸ್ಥಳಾವಕಾಶ ಕಡಿಮೆ. ಜೊತೆಗೆ ಕಡಿಮೆ ಸಂಭಾವನೆಯೂ ಕೂಡ ಕಾರಣ. ಹೀಗಾಗಿ ತಿಳಿದವರು ಪತ್ರಿಕೆಗಳಿಗೆ ಬರೆಯಲು ಹೋಗುವುದು ಸಹ ಕಡಿಮೆ. ಹಿಂದೆ ಕೆ.ಎಸ್.‌ ನಾರಾಯಣಸ್ವಾಮಿ, ಸೀತಾರಾಮ್‌, ವೈಕುಂಠ ರಾಜು, ರಾಮಚಂದ್ರ ರಾವ್‌ ಅವರೆಲ್ಲ ಸಿನೆಮಾದ ಎಲ್ಲ ವಿಭಾಗಗಳ ಬಗ್ಗೆಯೂ ಉತ್ತಮವಾಗಿ ವಿಮರ್ಶೆ ಬರೆಯುತ್ತಿದ್ದರು. ಈಗ ಅಂಥ ಪ್ರವೃತ್ತಿ ಕಡಿಮೆ.

ಯು.ಎನ್.ಐ. ಪ್ರತಿನಿಧಿ: ಸಾಮಾಜಿಕ ನೆಲೆಗಟ್ಟಿನಲ್ಲಿ ಸಿನೆಮಾವನ್ನು ವಿಮರ್ಶಿಸಿದಾಗ ಯಾವ ಅಂಶಗಳನ್ನು ನೀವು ಪ್ರಮುಖವಾದದ್ದು ಎಂದು ಪರಿಗಣಿಸುತ್ತೀರಿ ?

ನರಹರಿ ರಾವ್:‌ ನನಗೆ ಅನಿಸುತ್ತೆ ಸಿನೆಮಾಕ್ಕೆ ಸಬ್ಜೆಕ್ಟ್ ಇದೆಯಲ್ಲ, ಅದು ಎಂಥದ್ದಾದರೂ ಆಗಿರಬಹುದು. ಸಣ್ಣದೊಂದು ಘಟನೆಯೂ ಆಗಿರಬುಹುದು. ಅದನ್ನು ನೀವು ಹೇಗೆ ಪ್ರೆಸೆಂಟ್‌ ಮಾಡ್ತೀರಿ ಎನ್ನುವುದೇ ಮುಖ್ಯ. ಇದಕ್ಕೆ ಉದಾಹರಣೆಯಾಗಿ ಸಾಕಷ್ಟು ಸಿನೆಮಾಗಳನ್ನು ಕೊಡಬಹುದು. ಆದರೆ ಕಥೆ ಹೇಳಲು ಹೋದರೆ ಏನೂ ಇರುವುದಿಲ್ಲ. ಇರಾನಿಯನ್‌ ಫಿಲ್ಮ್‌ ನಲ್ಲಿ ಅಷ್ಟೊಂದು ನಿರ್ಬಂಧಗಳಿವೆ. ಸೆನ್ಸಾರ್‌ ಶಿಪ್‌ ಸಹ ತುಂಬ ಬಿಗಿ. ಇಂಥ ಸಂದರ್ಭದಲ್ಲಿಯೂ ಅವರು ಸಣ್ಣಸಣ್ಣ ವಿಷಯಗಳನ್ನು ತೆಗೆದುಕೊಂಡು ಅದ್ಬುತವಾಗಿ ಸಿನೆಮಾ ಮಾಡ್ತಾರೆ. ಇದಕ್ಕೆ ಸೃಜನಶೀಲತೆ ಭಾರಿ ಮುಖ್ಯ. ಉದಾಹರಣೆಗೆ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರು ಸಣ್ಣಸಣ್ಣ ವಿಷಯಗಳನ್ನು ತೆಗೆದುಕೊಂಡು ಕಥೆ ಬರೆದಿದ್ದಾರೆ. ಹಾಗೆ ಇರಾನಿಯನ್‌ ಸಿನೆಮಾ ನಿರ್ದೇಶಕರೂ ಮಾಡುತ್ತಾರೆ. ಸಮಾಜದ ಮೇಲೆ ಪರಿಣಾಮ ಬೀರುತೋ ಇಲ್ಲವೋ ಎಂಬುದರ ಕಡೆ ಅವರು ಅಷ್ಟು ಗಮನ ನೀಡುವುದಿಲ್ಲ. ತೆಗೆದುಕೊಳ್ಳುವ ಕಥೆಯನ್ನು ಎಷ್ಟು ಪರಿಣಾಮಕಾರಿಯಾಗಿ ಮಂಡಿಸ್ತೀರಿ ಅಥವಾ ನಿರೂಪಿಸ್ತೀರಿ ಎಂಬುದಷ್ಟೇ ಮುಖ್ಯ.

ಯು.ಎನ್.ಐ. ಪ್ರತಿನಿಧಿ: ಫೆಸ್ಟಿವಲ್‌ ಸರ್ಕ್ಯೂಟ್‌ ನಲ್ಲಿ ನಿಮ್ಮನ್ನು ಕಾಡಿದ ಸಿನೆಮಾ ಯಾವುದು ?

ನರಹರಿ ರಾವ್:‌ ವೈಲ್ಡ್‌ ಲೈಫ್‌ ಅಂತ ಒಂದು ಸಿನೆಮಾ ಬಂದಿತ್ತು. ಅದು ಕಥಾ ಸಂಕಲನ. ಆ ಸಿನೆಮಾದಲ್ಲಿ ಸಾಮಾಜಿಕತೆ ಏನಿಲ್ಲ. ಬರೀ ಸೇಡು ತೀರಿಸಿಕೊಳ್ಳುವ  ಕಥೆಗಳು. ಹಿಂಸೆ ಇದೆ. ಆದರೆ ಆ ಸಿನೆಮಾದ ಪ್ರತಿಯೊಂದು ಶಾಟ್‌ ಸಹ ಗಮನಾರ್ಹ. ಹೀಗೆ ಮೂರು ನಾಲ್ಕು ಕಥೆಗಳನ್ನು ತೆಗೆದುಕೊಂಡು ಪರಿಣಾಮಕಾರಿಯಾಗಿ ಸಿನೆಮಾ ಮಾಡುವುದು ತುಂಬ ಕಷ್ಟ. ಅಂಥಾ ಹಿಂಸೆ ಇದ್ದರೂ ಕೂಡ ಸಿನೆಮಾ ನೋಡಿಸಿಕೊಂಡು ಹೋಗುತ್ತದೆ. ಇದು ಸೃಜನಶೀಲತೆಯಿಂದಷ್ಟೇ ಆಗುವ ಕಾರ್ಯ. ಈ ಸಲ ಕೂಡ ಬೆಂಗಳೂರು ಚಿತ್ರೋತ್ಸವದಲ್ಲಿ ಇಂಥ ಗಮನಾರ್ಹ ಸಿನೆಮಾಗಳಿವೆ. ಡ್ರೈವ್‌ ಮೈ ಕಾರ್‌ ಅಂತ ಒಂದು ಸಿನೆಮಾ ಇದೆ. ಅದಕ್ಕೆ ಆಸ್ಕರ್‌ ಕೂಡ ಬರಬಹುದು ಎಂಬ ನಿರೀಕ್ಷೆ ಇದೆ. ಮೊದಲು ಆ ಸಿನೆಮಾ ನಮಗೆ ಸಿಕ್ಕಿರಲಿಲ್ಲ. ಮಾಮಿ ರದ್ದಾದ ಮೇಲೆ ಅದು ಸಿಕ್ಕಿದೆ. ಆ ಸಿನೆಮಾ ಕಥೆ ಶುರುವಾಗುವುದು ಅರ್ಧ ಸಿನೆಮಾ ಮುಗಿದ ಮೇಲೆ. ಏಕೀಗೆ ಎಲ್ಲರೂ ಈ ಸಿನೆಮಾ ಹೊಗಳ್ತಿದ್ದಾರಲ್ಲ ಅಂತ ನನಗೆ ಆಶ್ಚರ್ಯವಾಗಿತ್ತು. ಪ್ಯಾರಸೈಟ್‌ ಸರಳವಾದ ಕಥೆ. ಅದರಲ್ಲಿ ಏನು ಸಾಮಾಜಿಕತೆ ಇದೆ ? ಯಾವ ಸಾಮಾಜಿಕತೆಯೂ ಅದರಲಿಲ್ಲ. ಇಂಡಿಯಾದಲ್ಲಿ ಸಾಮಾಜಿಕತೆ ಹೆಸರಿನಲ್ಲಿ ಮಾಡುವ ಸಿನೆಮಾಗಳು ಪ್ರಶಸ್ತಿ ಸಲುವಾಗಿ ಆಗಿರುತ್ತವೆ ಹೊರತು ನೋಡಿ ಸಂತೋಷಪಡುವಂಥದ್ದೂ ಅದರಲ್ಲಿ ಏನೂ ಇರುವುದಿಲ್ಲ. ಇಶ್ಯೂ ಬೇಸ್ಡ್‌ ಸಿನೆಮಾಕ್ಕೆ ಇಂಡಿಯಾದಲ್ಲಿ ಅವಾರ್ಡ್‌ ಬರುತ್ತೆ.

ಯು.ಎನ್.ಐ. ಪ್ರತಿನಿಧಿ: ನಿಮ್ಮ ಪ್ರಕಾರ ವರ್ಚುಯಲ್ ರಿಯಾಲಿಟಿ , ಕಾನ್ವೆಂಷನಲ್ ಸಿನಿಮಾಗಳ ಮುಂದುವರಿದ ಭಾಗ ಆಗಬಹುದೇ ? ಇದರ ಸಾಧಕ ಬಾಧಕಗಳ ಬಗ್ಗೆ ಮಾತನಾಡುವುದಾದರೆ…

ನರಹರಿ ರಾವ್:‌ ಬಾಹುಬಲಿಯಂಥ ಸಿನೆಮಾಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಅಲ್ಲಿ ಸಾಫ್ಟ್‌ ವೇರ್‌ ತಂತ್ರಜ್ಞಾನವೇ ವಿಜೃಂಭಿಸಿರುತ್ತದೆ. ಇಂಥ ಸಾಫ್ಟ್‌ ವೇರಿಗೆ ೯೫ ಲಕ್ಷಕ್ಕಿಂತಲೂ ಹೆಚ್ಚು ಬೆಲೆಯಿದೆ. ಅದರಲ್ಲಿ ನೀವು ಏನು ಬೇಕಾದರೂ ಸೃಷ್ಟಿಸಬಹುದು. ಒಂದು ಸಲ ತೆರೆ ಮೇಲೆ ಬಂದಿದ್ದರೆ ಅಥವಾ ಪೋಟೋ ಇದ್ದರೆ ಅದನ್ನು ಬಳಸಿಕೊಳ್ಳಬಹುದು. ಇದರಿಂದ ನಟನಟಿಯರಿಲ್ಲದೆಯೂ ಸಿನೆಮಾ ಮಾಡಬಹುದು. ಮುಂದೆ ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎಂದು ಹೇಳುವುದು ಕಷ್ಟ.

ಯು.ಎನ್.‌ಐ. ಪ್ರತಿನಿಧಿ: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನೀವು ಆರ್ಟ್‌ ಡೈರೆಕ್ಟರ್‌ ಆಗಿದ್ದೀರಿ. ಇದರ ಜವಾಬ್ದಾರಿಗಳೇನು ?

ನರಹರಿ ರಾವ್:‌ ಎಷ್ಟರ ಮಟ್ಟಿಗೆ ಸಿನೆಮಾ ಆಯ್ಕೆ ಮಾಡ್ತೀರಾ ಅನ್ನೋದೆ ಮುಖ್ಯ.  ತುಂಬ ಗಂಭೀರವಾದ ಸಿನೆಮಾಗಳು ಇದ್ದಾಗ ಅವುಗಳು ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಜನಪ್ರಿಯ ಮಾದರಿ ಸಿನೆಮಾಗಳನ್ನೇ ಇಷ್ಟಪಡುವವರೂ ನೋಡುವಂಥ ಸಿನೆಮಾಗಳು ಸಹ ಇರಬೇಕು. ಒಟ್ಟಾರೆ ಹೇಳುವುದಾದರೆ ಸಿನೆಮಾ ಆಯ್ಕೆ ಮಾಡುವಾಗ ಅವುಗಳಲ್ಲಿ ಎಲ್ಲ ಬಗೆಯ ಪ್ರೇಕ್ಷಕರಿಗೂ ಇಷ್ಟವಾಗುವಂಥವು ಇರಬೇಕು ಅಷ್ಟೆ. ಅದು ಅಲ್ಲದೇ ಸರ್ಕಾರದ ಹಣ ಬಳಸುವಾಗ ಭಾರಿ ಎಚ್ಚರಿಕೆಯಿಂದಲೂ ಇರಬೇಕು.

ಯು.ಎನ್.‌ಐ. ಪ್ರತಿನಿಧಿ: ಈ ಬಾರಿಯ ಸಿನೆಮೋತ್ಸವದಲ್ಲಿ ನೀವೇ ಭಾರಿ ಇಷ್ಟಪಟ್ಟು ಆಯ್ಕೆ ಮಾಡಿದ ಸಿನೆಮಾಗಳು ಯಾವುವು ?

ನರಹರಿ ರಾವ್:‌ ಫಿಲ್ಮ್‌  ಕ್ರಿಟಿಕ್ಸ್‌ ವೀಕ್‌ ಅಂತ ಇದೆ. ಆಸ್ಕರ್‌ ಸ್ಪೆಕ್ಟ್ರಮ್‌ ವಿಭಾಗವೂ ಇದೆ. ಇವೆಲ್ಲದರ ವಿವರ ಸಿನೆಮೋತ್ಸವ ವೆಬ್‌ ಸೈಟಿನಲ್ಲಿ ಸಿಗುತ್ತದೆ. ಇದರಲ್ಲಿ ಅಮೆರಿಕನ್‌ ಸಿನೆಮಾ ಇಲ್ಲ. ಮೊದಲು ಆಸ್ಕರ್‌ ಶುರುವಾಗಿದ್ದು ೧೯೨೯ ರಲ್ಲಿ. ಆಗ ಸೈಲೆಂಟ್‌ ಸಿನೆಮಾಗಳಿದ್ದವು. ಆಗ ಸನ್‌ ರೈಸ್‌ ಎನ್ನುವ ಮೂಕಿ ಚಿತ್ರಕ್ಕೆ ಮೊದಲ ಆಸ್ಕರ್‌ ಬಂತು. ಅದನ್ನು ನಿರ್ದೇಶಿಸಿದವರು ಎಫ್.‌ ಡಬ್ಲ್ಯು ಮಾರ್ನ್‌. ಈತ ಜರ್ಮನ್‌ ಫಿಲ್ಮ್‌ ಮೇಕರ್.‌ ಆತನನ್ನು ಕರೆಸಿ ಸಿನೆಮಾ ಮಾಡಿದರು. ಈ ಸಿನೆಮಾವನ್ನು ಈ ಸಲ ತೋರಿಸ್ತಿದ್ದೀವಿ. ಅದರ ಜೊತೆಗೆ ಇತ್ತೀಚೆಗೆ ಬಂದ ಸಿನೆಮಾಗಳನ್ನೂ ತೋರಿಸ್ತಿದ್ದೀವಿ. ಬ್ಯಾಟಲ್‌ ಆಫ್‌ ಆಲ್ಜಿಯೋರ್ಸ್‌ ಅಂತ ತೋರಿಸ್ತಿದ್ದೀವಿ. ಕೆಲವರಿಗೆ ಹಳೆಯ ಸಿನೆಮಾಗಳನ್ನು ನೋಡಬೇಕು ಎಂಬ ಅಪೇಕ್ಷೆ ಇರುತ್ತದೆ.  ಕಂಟ್ರಿ ಫೋಕಸ್‌ ನಲ್ಲಿ ಫ್ರೆಂಚ್‌ ಸಿನೆಮಾ ಇದೆ. ರೆಟ್ರಾಸ್ಪೆಕ್ಟೀವ್‌ ನಲ್ಲಿ ಟಿಂಡ್ರೋಮ್‌ ಅಂತ ಒಂದು ಸಿನೆಮಾ ಇದೆ

ಯು.ಎನ್.ಐ. ಪ್ರತಿನಿಧಿ: ಸಿನೆಮಾ ಚಳವಳಿ ಪರಂಪರೆಯೇ ಇದೆ. ಇದರಿಂದ ಬೇರೆಬೇರೆ ಕ್ಷೇತ್ರಗಳ ಸಾಧಕರು ಪ್ರಭಾವಿತರಾಗಿ ಸಿನೆಮಾ ಮಾಡಿದ್ದಾರೆ. ಇಂಥ ಪರಂಪರೆ ಈಗಲೂ ಮುಂದುವರಿದಿದೆ ಎನಿಸುತ್ತದೆಯೇ ?

ನರಹರಿ ರಾವ್:‌ ಈಗ ಸಿನೆಮಾ ಚಳವಳಿ ಇಲ್ಲ. ಅದು ನಿಂತೋಗಿದೆ. ಮುಂಚೆ ಎಲ್ಲ ಸಿನೆಮಾಗಳು ಲಭ್ಯವಾಗುತ್ತಿರಲಿಲ್ಲ. ವಿದೇಶಿ ರಾಯಭಾರಿ ಕಚೇರಿಗಳ ನೆರವಿನ ಮೂಲಕ ತರಿಸಬೇಕಿತ್ತು. ಕುರುಸೋವಾ, ಲ್ಯಾಟಿನ್‌ ಅಮೆರಿಕಾ, ಬ್ರೆಜಿಲ್‌ ಸಿನೆಮಾಗಳು ನಮಗೆ ಸಿಗ್ತಾ ಇರಲಿಲ್ಲ. ಆಗೆಲ್ಲ ಅಂಥ ಸಿನೆಮಾಗಳನ್ನು ಫಿಲ್ಮ್‌ ಸೊಸೈಟಿ ಮೂಲಕವೇ ನೋಡಬೇಕಿತ್ತು. ಬೇರೆ ವಿಧಿಯೇ ಇರಲಿಲ್ಲ. ಈಗ ಅಂಥ ಪರಿಸ್ಥಿತಿ ಇಲ್ಲ. ಜಗತ್ತಿನ ಯಾವುದೇ ಮೂಲೆಯ ಉತ್ತಮ ಸಿನೆಮಾವನ್ನು ವೈಯಕ್ತಿಕ ಹಂತದಲ್ಲಿಯೇ ಆಸಕ್ತ ವ್ಯಕ್ತಿ ನೋಡಬಹುದು. ತುಂಬ ಅಂದರೆ ತುಂಬ ಬದಲಾವಣೆಯಾಗಿದೆ. ಇದಕ್ಕೆಲ್ಲ ತಂತ್ರಜ್ಞಾನ ಕಾರಣ. ಈ ತಂತ್ರಜ್ಞಾನ ಸಿನೆಮಾ ನಿರ್ಮಾಣಕ್ಕೆ ಭಾರಿ ನೆರವು ನೀಡುತ್ತಿದೆ. ಆಸಕ್ತಿ ಇರುವ, ಒಂದಷ್ಟು ಹಣಕಾಸು ಅಥವಾ ಹಣಕಾಸು ನೆರವು ದೊರೆಯುವ ಯಾರು ಬೇಕಾದರೂ ಸಿನೆಮಾ ಮಾಡಬಹುದು. ಮುಂಚೆ ಇಂಥ ಪರಿಸ್ಥಿತಿ ಇರಲಿಲ್ಲ. ಸಿನೆಮಾ ನಿರ್ಮಾಣ ಎನ್ನುವುದು ಕೆಲವರ ಕೈಯಲಷ್ಟೆ ಇತ್ತು. ಈಗ ಚಿತ್ರ ನಿರ್ಮಾಣ ಮಾಡುವ ಮತ್ತು ಹಂಚುವ ಪರಿಕಲ್ಪನೆ ಬದಲಾಗಿದೆ. ಇವೆರಡೂ ಈಗ ಸುಲಭವಾಗಿದೆ.

ಯು.ಎನ್.‌ಐ. ಪ್ರತಿನಿಧಿ: ೀ ಬಾರಿಯ ಸಿನೆಮೋತ್ಸವದಲ್ಲಿ ಆಯ್ಕೆಯಾದ ಸಿನೆಮಾಗಳ ಪಟ್ಟಿ ದೊಡ್ಡದಿದೆಯೇ

ನರಹರಿ ರಾವ್:‌ ಇಲ್ಲ. ಈ ಬಾರಿ ಈ ಪಟ್ಟಿ ದೀರ್ಘವಾಗಿಲ್ಲ. ಸಿನೆಮಾಗಳ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ. ಅತ್ಯುತ್ತಮ ಸಿನೆಮಾ ತೋರಿಸೋಣ ಎಂಬ ನಿರ್ಧಾರ ತೆಗೆದುಕೊಂಡೆ. ಆದ್ದರಿಂದ ಸಿನೆಮೋತ್ಸವಕ್ಕೆ ಬಂದ ಆಸಕ್ತರು  ಯಾವುದೇ ಸಿನೆಮಾಕ್ಕೆ ಹೋದರೂ ಅದು ಅತ್ಯುತ್ತಮ ಎನಿಸಬೇಕು. ಆ ರೀತಿ  ಆಯ್ಕೆ ಮಾಡಲಾಗಿದೆ. ಈ ದಿಶೆಯಲ್ಲಿ ಆಲೋಚನೆ ಬದಲಾಗಿದೆ.

ಯು.ಎನ್.‌ಐ. ಪ್ರತಿನಿಧಿ: ಕನ್ನಡವೂ ಸೇರಿದಂತೆ ಭಾರತದ ಬೇರೆಬೇರೆ ಭಾಷೆಗಳಲ್ಲಿ ಉತ್ತಮ ಚಿತ್ರಗಳ ಸಂಖ್ಯೆ ಆಶಾದಾಯಕವಾಗಿದೆಯೇ ?

ನರಹರಿ ರಾವ್:‌ ಮನರಂಜನಾ ಸಿನೆಮಾಗಳನ್ನೇ ವಿಭಿನ್ನವಾಗಿ ಪ್ರೆಸೆಂಟ್‌ ಮಾಡುವಂಥ ಯುವ ನಿರ್ದೆಶಕರ ಸಂಖ್ಯೆ ಹೆಚ್ಚಾಗುತ್ತಿದೆ. ಗಂಭೀರ ಸಿನೆಮಾಗಳನ್ನು ಸಹ ಹೆಚ್ಚಿನ ಜನ ನೋಡುವಂತೆ ನಿರ್ಮಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಉದಾಹರಣೆಗೆ ಕನ್ನಡದಲ್ಲಿ ತಿಥಿ ಸಿನೆಮಾ. ಗ್ರೌಂಡ್‌ ಲೆವೆಲಿಗೆ ಹೋಗಿ ಒಂದೊಳ್ಳೆ ಸಿನೆಮಾ ಮಾಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಸಿನೆಮಾಗಳು ನಿರ್ಮಾಣವಾಗುತ್ತಿವೆ. ಈ ಸಿನೆಮಾಗಳಲ್ಲಿ ಆಯ್ಕೆ ಮಾಡಿದವುಗಳನ್ನು ಸಿನೆಮೋತ್ಸವದಲ್ಲಿ ನೋಡಬಹುದು. ಆದ್ದರಿಂದ ಪರಿಸ್ಥಿತಿ ಆಶಾದಾಯಕವಾಗಿದೆ.

ಯು.ಎನ್.‌ಐ. ಪ್ರತಿನಿಧಿ: ಇರಾನಿನಲ್ಲಿ ಇರುವ ನಿರ್ಬಂಧಗಳ ನಡುವೆ ಅತ್ಯುತ್ತಮ ಸಿನೆಮಾಗಳನ್ನು ಮಾಡುವ ನಿರ್ದೇಶಕರಿದ್ದಾರೆ. ಆದರೆ ಭಾರತದಲ್ಲಿ ಆ ಮಾದರಿಯ ಸಿನೆಮಾ ನಿರ್ದೇಶಕರ ಸಂಖ್ಯೆ ತುಂಬ ಕಡಿಮೆ. ಅಂಥವರು ಈಗ ಆಕ್ಟೀವ್‌ ಆಗಿಲ್ಲ ಏಕೆ ?

ನರಹರಿ ರಾವ್:‌ ಹೌದು. ಆ ಮಾದರಿಯ ನಿರ್ದೇಶಕರ ಸಂಖ್ಯೆ ಕಡಿಮೆ. ಇದಕ್ಕೆಲ್ಲ ಆಯಾ ಕಾಲಘಟ್ಟಗಳ ಪರಿಸ್ಥಿತಿ ಕಾರಣ. ಇದಕ್ಕೆ ಉದಾಹರಣೆಯಾಗಿ ಹಿಂದಿನ ಸೋವಿಯೆತ್‌ ಯೂನಿಯನ್‌ ಅಂದರೆ ರಷ್ಯಾದ ಅವಿಭಜಿತ ದೇಶಗಳು ಮತ್ತು ರಷ್ಯಾದ ಪ್ರಭಾವವಿದ್ದ ರೋಮೆನಿಯಾ, ಹಂಗೇರಿ ಇತ್ಯಾದಿ ದೇಶಗಳಿಂದ ಅಲ್ಲಿನ ಸರ್ಕಾರದ ಹದ್ದಿನ ಕಣ್ಣಿನ ನಡುವೆಯೂ ಅತ್ಯುತ್ತಮ ಚಿತ್ರಗಳು ನಿರ್ಮಾಣವಾಗುತ್ತಿತ್ತು. ಅಂಥ ಚಿತ್ರಗಳು ಈಗ ಬರುತ್ತಿಲ್ಲ. ಆದರೆ  ಏಶಿಯನ್‌ ರಾಷ್ಟ್ರಗಳಿಂದ ಉತ್ತಮ ಸಿನೆಮಾಗಳು ಬರುತ್ತಿವೆ. ಉದಾಹರಣೆಗೆ ಇಂಡೋನೇಶಿಯಾ, ಜಪಾನ್‌, ಕೊರಿಯಾ. ಇತ್ಯಾದಿ ದೇಶಗಳಿಂದ ಪ್ರೇರಣಾದಾಯಕವಾದ ಸಿನೆಮಾಗಳು ಬರುತ್ತಿವೆ.

Share