Connect with us


      
ಕರ್ನಾಟಕ

ಪಂಚರಾಜ್ಯ ಫಲಿತಾಂಶ: ವಿಧಾನಸಭೆಯಲ್ಲೂ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ

Iranna Anchatageri

Published

on

ವಿಧಾನಸಭೆ/ಬೆಂಗಳೂರು: ಮಾರ್ಚ್ 10 (ಯು.ಎನ್.ಐ.) ದೇಶದ ಐದು ರಾಜ್ಯಗಳಾದ ಪಂಜಾಬ್, ಉತ್ತರಪ್ರದೇಶ, ಮಣಿಪುರ, ಗೋವಾ, ಉತ್ತರಾಖಂಡ್ ನಲ್ಲಿ ಇಂದು ಮತ ಎಣಿಕೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದರೆ, ಇತ್ತ ಪಂಜಾಬ್ ನಲ್ಲಿ ಗದ್ದುಗೆಯಲ್ಲಿದ್ದ ಕಾಂಗ್ರೆಸ್, ತನ್ನ ಅಧಿಕಾರವನ್ನು ಕಳೆದುಕೊಳ್ಳುವಂತಾಗಿದೆ. ಈ ಪಂಚ ರಾಜ್ಯಗಳ ಫಲಿತಾಂಶ ಇಂದು ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಧ್ವನಿಸಿತು.

ಕೆಳಮನೆ ಸದನ ಪ್ರಾರಂಭವಾಗುತ್ತಿದ್ದಂತೆ ಪ್ರಶ್ನೋತ್ತರವನ್ನು ಸಭಾಧ್ಯಕ್ಷರು ಕೈಗೆತ್ತಿಕೊಂಡರು. ಈ ವೇಳೆ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಕಾಂಗ್ರೆಸ್ ನೆನಪಿಲ್ಲದೆ, ಬೇರೆ ಯಾರೂ ನೆನಪಿಲ್ಲ ಅವರಿಗೆ ಅನ್ನುತ್ತಾ ಒಳಪ್ರವೇಶ ಮಾಡಿದರು. ಈ ವೇಳೆ ಬಿಜೆಪಿ ಸದಸ್ಯರು, ಖಾದರ್ ಅವರೇ ಕಾಂಗ್ರೆಸ್ ಕಥೆ ಮುಗೀತಲ್ಲಾ, ಜೈ ಶ್ರೀರಾಮ್ ಎಂದು ಕೂಗಿದರು. ಅಲ್ಲದೆ, ಉತ್ತರ ಪ್ರದೇಶ ಬಿಡಿ ಪಂಜಾಬ್ ನಲ್ಲೂ ಹಾಗೇ ಆಗೋದು ಎಂದು ಕಾಂಗ್ರೆಸ್ ಸದಸ್ಯರ ಕಾಲೆಳೆದರು.  ಇತಿಹಾಸ ಮತ್ತೆ ಪುನಃ ನಿರ್ಮಾಣವಾಗುತ್ತದೆ ಎಂದು ಯು.ಟಿ.ಖಾದರ್ ಪ್ರತ್ಯುತ್ತರ ನೀಡಿದರು.

ಈ ವೇಳೆ ಸಚಿವ ಈಶ್ವರಪ್ಪ ಮಾತನಾಡಲು ಮುಂದಾದಾಗ, ಈಶ್ವರಪ್ಪನವರಂತೂ ಸಿಎಂ ಆಗಲ್ಲ, ಯಾಕೆ ಇಷ್ಟು ಮಾತಾಡ್ತಾರೋ… ಏನಾದ್ರೂ ಬದಲಾವಣೆ ಆಗೋ ಹಾಗಿದ್ಯಾ ಎಂದು ಈಶ್ವರಪ್ಪ ಅವರನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೆರಳಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಸದನದಲ್ಲಿ ಜೈ ಹನುಮಾನ್ ಎಂದು ಘೋಷಣೆ ಕೂಗಿದರು. ಬಳಿಕ ಪ್ರಶ್ನೋತ್ತರ ವೇಳೆ ಮುಂದುವರಿಯಿತು.

Share