Published
6 months agoon
ಬೆಂಗಳೂರು: ಜನೆವರಿ 02 (ಯು.ಎನ್.ಐ.) ಕೊರೊನಾ ಸಂಕಷ್ಟದ ನಂತರ ಕನ್ನಡ ನಾಡು ಅನೇಕ ಆಂತಕಗಳನ್ನು ಎದಿರುಸುತ್ತಿದೆ. ಈ ಹೊಸ ಸವಾಲುಗಳಿಗೆ ಹೊಸ ಹೋರಾಟದ ಮಾರ್ಗ ಅನಿವಾರ್ಯವಾಗಿದೆ ಎಂದು ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ಅಭಿಪ್ರಾಯಪಟ್ಟರು.
ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘವು ಅಯೋಜಿಸಿದ್ದ ಕಾರ್ಖಾನೆಯ ಸಾಧಕರಿಗೆ ಅಭಿನಂದನೆ ಮತ್ತು ರಮಾ ಫಣಿಭಟ್ ಗೋಪಿ `ಭಾವಲೋಕ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಭಾನುವಾರ ಅವರು ಮಾತನಾಡಿದರು.
“ಕನ್ನಡದ ಬಗ್ಗೆ ಅಪಾರ ಪ್ರೀತಿ ಇರುವ ಕನ್ನಡ ಸಂಘಟನೆಗಳು ಬದಲಾದ ಸನ್ನಿವೇಶದಲ್ಲಿ ಕನ್ನಡ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದನ್ನು ಗ್ರಹಿಸುವಲ್ಲಿ ವಿಫಲವಾಗಿವೆ. ಈಗ ಕನ್ನಡ ಸಂಘಟನೆಗಳು ಸಾಂಪ್ರದಾಯಿಕ ಪ್ರತಿಭಟನೆಯ ಮಾರ್ಗಗಳನ್ನು ಬಿಟ್ಟು ಹೊಸ ಸಾಧ್ಯತೆಯನ್ನು ಕಂಡುಕೊಳ್ಳಬೇಕಿದೆ,” ಎಂದು ಅವರು ಸಲಹೆ ಮಾಡಿದರು.
ಮಲಯಾಳಂ ಸಾಹಿತಿ ರಾಮನ್ ತಳಿ ಸುಧಾಕರನ್ ಮಾತನಾಡಿ, “ಕಾರ್ಮಿಕ ನಾಯಕನಾಗಲು ಸ್ಥಳೀಯ ಭಾಷೆಯ ಅರಿವು ಅಗತ್ಯವೆಂದು ಕೇರಳದಿಂದ ಬಂದ ನಾನು ಕಾರ್ಮಿಕರೊಡನೆ ಸಂವಹನ ಮಾಡಲು ಕನ್ನಡ ಕಲಿತೆ. ಆ ಕನ್ನಡ ಕಲಿಕೆ ನನ್ನನ್ನು ಕಾರ್ಮಿಕ ನಾಯಕನನ್ನಾಗಿ ಮಾಡಿತು. ಅದೇ ಕನ್ನಡ ಸಂಪರ್ಕ ಮುಂದುವರಿದು ಕನ್ನಡ ಸಾಹಿತ್ಯದ ಅನನ್ಯತೆಯನ್ನು ಮಲಯಾಳಂಗೆ ಪರಿಚಯಿಸಲು ಪ್ರಚೋದಿಸಿತು. ಈ ನನ್ನ ಕನ್ನಡ ಅನುವಾದದ ಕಾಯಕ ಇಂದು ನನಗೆ `ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿದೆ. ಸ್ಥಳೀಯ ಭಾಷೆ, ಸಂಸ್ಕೃತಿ ಯೊಂದಿಗೆ ಬೆರೆತರೆ ಅವರಿಗೆ ಮಾನ್ಯತೆ ಸಿಗುವುದರ ಜತೆಗೆ ನಾಡಿನ ಪ್ರಗತಿಗೆ ಕೈಜೋಡಿಸಿದ ತೃಪ್ತಿ ಸಿಗುತ್ತದೆ. ಈ ತೃಪ್ತಿಯನ್ನು ಪಡೆಯಲು ಎಲ್ಲ ಕನ್ನಡೇತರರು ಕನ್ನಡ ಕಲಿಯಬೇಕು,” ಎಂದು ಸೂಚಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, “ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘವು ಸಾಹಿತ್ಯ ಮತ್ತು ಕನ್ನಡ ಪರಿಚಾರಿಕೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿರುವುದು ಎಲ್ಲಾ ಸಂಘಟನೆಗಳಿಗೆ ಅನುಕರಣೀಯವಾಗಿದೆ. ಸಂಘಟನೆಯ ಮಹತ್ವವನ್ನು ಅರಿತಿರುವ ಕಾರ್ಮಿಕರು ಕನ್ನಡ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಕನ್ನಡದ ಉತ್ಕರ್ಷಕ್ಕೆ ಸಹಕರಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ರಾಜೇಶ್, ಚಂದ್ರಶೇಖರಪ್ಪ, ಎಚ್ಎಎಲ್ ಲಲಿತಕಲಾ ಸಂಘದ ಕಾರ್ಯದರ್ಶಿ ಎಸ್. ರಾಜು ಹಾಸನ್ ಮತ್ತಿತರರು ಭಾಗವಹಿಸಿದ್ದರು.
ಧಾರವಾಡ-ಬೆಳಗಾವಿ ರೈಲು ಯೋಜನೆ ಶೀಘ್ರದಲ್ಲಿ ಪ್ರಾರಂಭ : ಸಿಎಂ
ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ: 819 ಕೋಟಿ ರೂ. ಲೂಟಿ!
ಬೆಳಗಾವಿ ಭೀಕರ ಅಪಘಾತ: ಮೃತ ಕಾರ್ಮಿಕರಿಗೆ 5 ಲಕ್ಷ ರೂ. ಪರಿಹಾರ
ಅಂಜನಾದ್ರಿ ಬೆಟ್ಟದಲ್ಲಿ ಜುಲೈನಲ್ಲಿ ಕಾಮಗಾರಿ ಪ್ರಾರಂಭಿಸಲು ಸಿಎಂ ಬೊಮ್ಮಾಯಿ ಸೂಚನೆ
ಎಸ್. ಎಂ. ಕೃಷ್ಣ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ
ತಿಂಗಳಲ್ಲಿ 15 ದಿನ ಅರಣ್ಯದಲ್ಲಿರಿ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ತಾಕೀತು