Connect with us


      
ರಾಜಕೀಯ

ಜೈಲಿಗೆ ಹಾಕಿದ್ರೂ ಪಾದಯಾತ್ರೆ ಮಾಡೇ ಮಾಡ್ತೀವಿ… ಆರ್. ಧೃವ ನಾರಾಯಣ

UNI Kannada

Published

on

ಮೈಸೂರು, ಜ ೭(ಯುಎನ್ ಐ) ಸರ್ಕಾರದ ವೀಕೆಂಡ್ ಲಾಕ್ ಡೌನ್ ದುರುದ್ದೇಶದಿಂದ ಕೂಡಿದೆ. ಪಾದಯಾತ್ರೆ ಮೊಟಕು ಗೊಳಿಸುವ ಏಕೈಕ ಕಾರಣಕ್ಕೆ ಲಾಕ್ಡೌನ್ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಆರೋಪಿಸಿದರು. ಮೈಸೂರಿನಲ್ಲಿ ಮಾತನಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ ಆರ್.ದೃವನಾರಾಯಣ್, ನೆರೆ ರಾಷ್ಟ್ರ, ನೆರೆ ರಾಜ್ಯಗಳಲ್ಲೂ ಸೋಂಕು ಇದೆ. ಆದರೆ ಎಲ್ಲಿಯೂ ಕರ್ಫ್ಯೂ, ಲಾಕ್ಡೌನ್ ನಂತಹ ನಿರ್ಬಂಧ ಇಲ್ಲ. ಆದ್ರೆ ಪಾದಯಾತ್ರೆ ತಡೆಯುವ ದುರುದ್ದೇಶ ಸರ್ಕಾರಕ್ಕಿದೆ. ಹಾಗಾಗಿ ನಿರ್ಬಂಧ ಮಾಡುವ ಕೆಲಸ ಮಾಡ್ತಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಹೊಡೆತ ಬೀಳುತ್ತೆ. ಕೂಲಿ ಕಾರ್ಮಿಕರು ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇದೀಗ ಮತ್ತೆ ಲಾಕ್ ಡೌನ್ ಮಾಡುವುದರಿಂದ ಅವರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಹಾಗಾಗಿ ಕೂಡಲೇ ಸರ್ಕಾರ ಕರ್ಫ್ಯೂ ವಾಪಸ್ಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಭದ್ರತಾ ವೈಫಲ್ಯಕ್ಕೆ ಪಂಜಾಬ್ ಮುಖ್ಯಮಂತ್ರಿ ನಿರ್ಲಕ್ಷ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್. ಧ್ರುವನಾರಾಯಣ್, ಪಂಜಾಬ್ ನಿಂದ ಮೋದಿ ವಾಪಸ್ಸ್ ಹೋಗಲು ಸಮಾವೇಶದ ಖಾಲಿ ಚೇರುಗಳೇ ಕಾರಣ. ಅದರ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶದ ಒಬ್ಬ ದಲಿತ ಮುಖ್ಯಮಂತ್ರಿಯ ಮೇಲೆ ಆರೋಪ ಮಾಡಿದ್ದಾರೆ. ಭದ್ರತಾ ವೈಫಲ್ಯಕ್ಕೆ ಎಸ್ಪಿಜಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ. ಸುಖಾಸುಮ್ಮನೆ ಪಂಜಾಬ್ ಮುಖ್ಯಮಂತ್ರಿ ಮೇಲೆ ಆರೋಪ ಮಾಡೋದು ತಪ್ಪು. ಅಸಲಿಗೆ ಸಮಾವೇಶದ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಬರಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ರಸ್ತೆ ಮೂಲಕ ಬಂದಿದ್ದಾರೆ. ಇದಕ್ಕೆ ಯಾರನ್ನೂ ಹೊಣೆ ಮಾಡುವ ಅಗತ್ಯವಿಲ್ಲ ಎಂದರು.

ಮೇಕೆದಾಟು ಪಾದಯಾತ್ರೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಜ.೯ರಂದು ಕೇವಲ ಮುಖಂಡರು ಮಾತ್ರ ಪಾದಯಾತ್ರೆ ಮಾಡ್ತೀವಿ. ಜ.೧೦ರಿಂದ ಕಾರ್ಯಕರ್ತರು ಭಾಗಿಯಾಗ್ತಾರೆ. ಚಾಮರಾಜನಗರ, ಮೈಸೂರು ಭಾಗದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಈಗಾಗಲೇ ೧ ಲಕ್ಷ ಮಾಸ್ಕ್ ರೆಡಿ ಮಾಡಲಾಗಿದ್ದು, ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ. ಜೈಲಿಗೆ ಹಾಕಿದ್ರೂ ಪಾದಯಾತ್ರೆ ಮಾಡ್ತೇ ಮಾಡ್ತೀವಿ ಎಂದು ಆರ್.ಧ್ರುವನಾರಾಯಣ್ ಹೇಳಿದರು.

Share