Connect with us


      




ಆರೋಗ್ಯ

ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಚಿಂತನೆ ಇಲ್ಲ

UNI Kannada

Published

on

ಬೆಂಗಳೂರು, ಜ ೪(ಯುಎನ್ ಐ) ರಾಜ್ಯದಲ್ಲಿ ಕೊರೊನಾ ಹಾಗೂ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಲು ಇಂದು ಸಂಜೆ ತಾಂತ್ರಿಕ ಸಮಿತಿ ಹಾಗೂ ಟಾಸ್ಕ್ ಪೋರ್ಸ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಶೇಕಡಾ ೦.೪ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರ ನಿನ್ನೆ ಒಂದೇ ದಿನದಲ್ಲಿ ಶೇಕಡಾ ೧.೬ಕ್ಕೆ ಏರಿಕೆಯಾಗಿರುವುದು ಮೂರನೇ ಅಲೆಯ ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
೧೫ ರಿಂದ ೧೮ ವಯೋಮಾನದವರಿಗೆ ನಿನ್ನೆಯಿಂದ ಆರಂಭಗೊಂಡಿರುವ ಲಸಿಕಾ ಅಭಿಯಾನದಲ್ಲಿ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ ೪ ಲಕ್ಷದ ೨೨ ಸಾವಿರದ ೧೫೨ ಮಂದಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ಶೇಕಡಾ ೬೬ ರಷ್ಟು ಸಾಧನೆ ಮಾಡಲಾಗಿದೆ. ಮುಂದಿನ ಹತ್ತರಿಂದ ಹದಿನೈದು ದಿನಗಳಲ್ಲಿ ರಾಜ್ಯದಲ್ಲಿರುವ ೧೫ ರಿಂದ ೧೮ ವಯೋಮಾನದ ೪೩ ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಲಾಕ್‌ಡೌನ್ ಮಾಡುವ ಆಲೋಚನೆ ಸಧ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಇದೇ ಸಂದರ್ಭದಲ್ಲಿ ಡಾ. ಸುಧಾಕರ್ ಸ್ಪಷ್ಟಪಡಿಸಿದರು.

Share