Connect with us


      




ಕರ್ನಾಟಕ

“ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಘಟನೆ ಹುಬ್ಬಳ್ಳಿಯಲ್ಲೂ ನಡೆದು ಹೋಗ್ತಿತ್ತು” – ಆರಗ ಜ್ಞಾನೇಂದ್ರ

Iranna Anchatageri

Published

on

ಶಿವಮೊಗ್ಗ: ಏಪ್ರಿಲ್ 18 (ಯು.ಎನ್.ಐ.) ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಇದುವರೆಗೆ 80 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಸ್ಟೇಟಸ್ ನಲ್ಲಿ ಏನೋ ಹಾಕ್ದ ಅನ್ನುವ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. ಆದರೆ, ಆಮೇಲೆ ಸಾವಿರಾರು ಜನರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ. ಕಲ್ಲು ಹೊಡೆಯುವುದು, ಪೊಲೀಸ್ ವಾಹನ ಜಖಂ ಮಾಡೋದು… ಸಿಕ್ಕ ಸಿಕ್ಕಾಗೆ ಅರಾಜಕತೆ ನಿರ್ಮಾಣ ಮಾಡುವ ಕೆಲಸವನ್ನು ಒಂದು ಗುಂಪು ಮಾಡಿದೆ. ಗಲಭೆಯಲ್ಲಿ ಅನೇಕ ಪೊಲೀಸರಿಗೂ ಗಾಯವಾಗಿದೆ ಎಂದು ಹೇಳಿದರು.

ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್ ಎಲ್ಲರೂ ಹೋಗಿ ಗಾಯಗೊಂಡವರನ್ನು ಮಾತನಾಡಿಸಿರುವುದಾಗಿ ತಿಳಿಸಿದ ಗೃಹ ಸಚಿವರು, ಆದರೂ ಕೂಡಾ ಪೊಲೀಸರು ಬಹಳ ಸಂಯಮದಿಂದ ವರ್ತಿಸಿದ್ದಾರೆ. ಸುಮಾರು ಒಂದು ಗಂಟೆಯೊಳಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇಲ್ಲದಿದ್ದರೆ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಘಟನೆ ಹುಬ್ಬಳ್ಳಿಯಲ್ಲು ನಡೆದು ಹೋಗ್ತಿತ್ತು. ಈಗಾಗಲೇ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಅನೇಕ ಜನರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ನಿನ್ನೆಯಿಂದ ಕಾರ್ಯಾಚರಣೆ ಮಾಡ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಬಂಧನ ಆಗುತ್ತಿದೆ. ಈಗಾಗಲೇ 80 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದೊಂದು ದುರದೃಷ್ಟಕರವಾದ ಸಂಗತಿ. ಕೋಮುವಾದ ಇದರ ಹಿಂದೆ ಇದೆ. ಯಾರೋ ಕೆಲವರ ಪ್ರಚೋದನಕಾರಿಯಿಂದ ಇದು ಆಗುತ್ತಿದೆ. ಎಲ್ಲಾ ಸಮುದಾಯದವರು ಸಹ ಸಂಯಮ‌ ವಹಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಎಲ್ಲಾ ಧರ್ಮದವರು ಒಟ್ಟಾಗಿ ಒಂದಾಗಿ‌ ಈ ದೇಶದಲ್ಲಿ ಬದುಕಬೇಕು. ಈ ದೃಷ್ಟಿಯಿಂದ ಎಲ್ಲಾ ಧರ್ಮದ ಹಿರಿಯರು ಕುಳಿತು ಮಾತನಾಡಬೇಕು. ಯಾರು ಇಂತಹ ವಿಚಿದ್ರಕಾರಿ ಶಕ್ತಿ ಇದ್ದಾರೋ ಅವರಿಗೆ ಪಾಠ ಹೇಳುವ ಕೆಲಸ ಮಾಡಬೇಕು. ಪೊಲೀಸರಿಗೆ ಬೆದರಿಕೆ ಹಾಕ್ತಿದ್ದಾರೆ, ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ. ಸುಮಾರು 8 ಜನಕ್ಕಿಂತ ಹೆಚ್ಚು ಪೊಲೀಸರಿಗೆ ಗಾಯವಾಗಿದೆ. ಸುಮಾರು 8-10 ಪೊಲೀಸ್ ವಾಹನಗಳು ಸೇರಿದಂತೆ ಖಾಸಗಿ ವಾಹನಗಳು ಜಖಂ ಆಗಿವೆ. ದೇವಸ್ಥಾನಕ್ಕೆ ಕಲ್ಲು ಎಸೆದು ಪುಡಿ ಮಾಡಿದ್ದಾರೆ ಎಂದು ತಿಳಿಸಿದರು.

ಸ್ಟೇಟಸ್ ಹಾಕಿದವನನ್ನು ವಶಕ್ಕೆ ಪಡೆದು, ಆತನ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಸಚಿವರು, ಹಳೆ ಹುಬ್ಬಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಅವರನ್ನು ಬಿಡುವುದಿಲ್ಲ. ಸರಿಯಾದ ಶಿಕ್ಷೆ ಆಗೇ ಆಗುತ್ತದೆ. ದೇಶದಾದ್ಯಂತ ಕೆಲವು ವಿಚಿದ್ರಾಕಾರಿ ಶಕ್ತಿಗಳು ವ್ಯವಸ್ಥಿತವಾಗಿ ಇಂತಹ ದುಷ್ಕೃತ್ಯ ನಡೆಸಿವೆ. ಖಂಡಿತ ಅವರ ವಿರುದ್ಧ ಕ್ರಮ ಆಗುತ್ತದೆ ಎಂದು ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

Share