Connect with us


      
ಅಂಕಣ

ಲಾಜಿಕ್‌ ಇಲ್ಲದ ಚಿತ್ರಕಥೆ ; ತಾಂತ್ರಿಕವಾಗಿ ಉತ್ತಮ

Kumara Raitha

Published

on

ಸಾತ್ವಿಕ್‌ ಹಂದೆ

ಅಂಕಣ: ಚೆದುರಿದ ಚಿತ್ರಗಳು ೨

ಈಗಾಗಲೇ ಹಲವಾರು ರೀತಿಯ ಮತ್ತು ದೃಷ್ಟಿಕೋನಗಳಿಂದ ಬರೆದ ಫಿಲ್ಮ್ ರಿವ್ಯೂಗಳನ್ನು ಓದಿರುತ್ತೀರಿ / ಕೇಳಿರುತ್ತೀರಿ . ಸ್ಕ್ರೀನ್ ಪ್ಲೇ ಹಾಗಿದೆ , ಎಡಿಟಿಂಗ್ ಹೀಗಿದೆ ಅಂತೆಲ್ಲಾ ಏನೇನೋ ಕಲ್ಪಿಸಿಕೊಂಡು ಸಿನಿಮಾ ನೋಡಲು ಉತ್ಸುಕರಾಗಿರುತ್ತೀರಿ. ಅಂತಹ ಯಾವ ಪೀಠಿಕೆಯೂ ಇಲ್ಲದೇ ನೇರ ಸಿನಿಮಾದ ಕಥಾವಸ್ತುವಿನ relevance ಬಗ್ಗೆ ಮಾತನಾಡೋಣ.

ದ್ವಿತೀಯಾರ್ಧದ ಕೊನೆಯ ಭಾಗದ ಒಂದು ದೃಶ್ಯ – ಸೆಂಟ್ರಲ್ ಕ್ಯಾಬಿನೆಟ್ ಮಿನಿಸ್ಟರ್ ಗುರುಪಾಂಡಿಯನ್ , ಪ್ರಧಾನಮಂತ್ರಿ ಮತ್ತಿತರರೊಂದಿಗೆ ಸದನದ ಚರ್ಚೆಯಲ್ಲಿ ಭಾಗವಹಿಸಿರುತ್ತಾನೆ . ಅವನನ್ನು ಕೊಲ್ಲಬೇಕೆಂದು ಪಾರ್ಲಿಮೆoಟಿಗೇ ನುಗ್ಗಿ ಪ್ರಧಾನಮಂತ್ರಿಗಳ ಸಮ್ಮುಖದಲ್ಲಿಯೇ ಕೊಲ್ಲುವ ಬಾಲಿಶವೆನಿಸುವ ಸನ್ನಿವೇಶವೊಂದಿದೆ.

ಇಂತಹ ಅರೆಬೆಂದ ಸನ್ನಿವೇಶಗಳು ಈ ಸಿನಿಮಾದಲ್ಲಿ ಸಾಕಷ್ಟಿವೆ . ಪಾರ್ಲಿಮೆoಟಿಗೊಂದು ಸೆಕ್ಯುರಿಟಿ ಪ್ರೋಟೋಕಾಲ್ ಇರೋದಿಲ್ವಾ ? ಯಾರನ್ನಾದರೂ ಸುಮ್ನೆ ಹಾಗೆ ಒಳಗೆ ಬಿಟ್ಕೊಳ್ತಾರಾ? ಅಂತೆಲ್ಲಾ ನೀವ್ ಪ್ರಶ್ನೆ ಕೇಳಿದ್ರೆ , ” ಲಾಜಿಕ್ ಹುಡುಕಬೇಡಿ ಸಾರ್ , ಸಿನಿಮಾವನ್ನು ಸಿನಿಮಾದ ತರಹ ನೋಡಿ” ಎಂಬ ಉತ್ತರಗಳು ಸಿಗಬಹುದು .

ಇನ್ನು ಪಂಚ್ ಡೈಲಾಗುಗಳು ಕೆ.ಜಿ.ಎಫ್- ಚ್ಯಾಪ್ತರ್ -೧ ನಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದವು , ಆದರೆ ಚಾಪ್ಟರ್-೨ನಲ್ಲಿ ದೈಲಾಗುಗಳ ಬಗ್ಗೆ ನನ್ನದು ಮಿಶ್ರ ಪ್ರತಿಕ್ರಿಯೆ . ಇಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಭರದಲ್ಲಿ ಏನೇನನ್ನೋ ಬರೆಯಲಾಗಿದೆ . ಉದಾಹರಣೆಗೆ – ಮೊದಲಬಾರಿಗೆ ರಾಕಿಭಾಯ್ ಪ್ರಧಾನಮಂತ್ರಿಗಳನ್ನು ಭೇಟಿಯಾಗಲು ದೆಹಲಿಗೆ ಬಂದಾಗ ಆತ ಒಬ್ಬ ಬಿಸಿನೆಸ್ ಮೆನ್ ಅನ್ನು ಅಚಾನಕ್ಕಾಗಿ ಮಾತನಾಡಿಸುವ ಸನ್ನಿವೇಶವೂoದಿದೆ. ಅದರಲ್ಲಿ ರಾಕಿಭಾಯ್ ತನ್ನನ್ನು ತಾನು ಪರಿಚಯಿಸಿಕೊಳ್ಳುವಾಗ ” ಐ ಆಮ್ ಸಿ. ಈ. ಓ ಆಫ್ ಇಂಡಿಯಾ ” ಎನ್ನುತ್ತಾನೆ . ಈ ತರಹದ ಡೈಲಾಗುಗಳು ತೀರಾ ಹೈಸ್ಕೂಲ್ ಮಕ್ಕಳಿಗಿಂತ ದೊಡ್ಡವರಿಗೆ ಅದ್ಯಾವ ರೀತಿಯಲ್ಲಿ ಇಷ್ಟವಾಗುತ್ತೋ ನನಗಂತೂ ಗೊತ್ತಿಲ್ಲ.

ಇವೆಲ್ಲಾ ಹಾಗಿರಲಿ , ನಾವು ಇಂತಹ ಸಿನಿಮಾವೊಂದನ್ನು ಕನ್ನಡ ಫಿಲ್ಮ್ ಇಂಡಸ್ಟ್ರಿಯ ಪ್ರತೀಕ ಎಂಬ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಿಂಬಿಸುತ್ತಿದ್ದೇವೆ . ಕಥೆ , ಚಿತ್ರಕಥೆ , ಸಂಭಾಷಣೆ ಇದ್ಯಾವುದೂ ರುಚಿಸದ ಅರಸಿಕರ ಮನಸ್ಸಿಗೂ ನಾಟುವ ಸಣ್ಣ ಬಡ್ಜೆಟ್ಟಿನ ಒಳ್ಳೆಯ ಸಿನಿಮಾಗಳು ನಮ್ಮಲ್ಲಿ ಇರುವಾಗ ಬರಿಯ ಮೇಕಿಂಗಿಗೆ ಇಷ್ಟೆಲ್ಲಾ ಬಿಲ್ಡಪ್ ಯಾಕೆ ಅಂತ ಗೊತ್ತಾಗ್ತಿಲ್ಲ .

ಇನ್ನು ಯಾವುದನ್ನೂ ಸುಖಾಸುಮ್ಮನೆ ತೆಗಳುವ ಜಾಯಮಾನದವನು ನಾನಲ್ಲ . ಹೀಗಾಗಿ, ಅದ್ಯಾಕೆ ಸಿನಿಮಾ ನೋಡಬೇಕೆಂಬುದನ್ನೂ ಹೇಳಿಯೇಬಿಡುತ್ತೇನೆ. ಕಮರ್ಷಿಯಲ್ ಸಿನಿಮಾಗಳಲ್ಲಿನ ಫಿಲ್ಮ್ ಎದಿಟಿಂಗಿನಲ್ಲಿ ಕೆಲವು ತಂತ್ರಗಾರಿಕೆಗಳ ಸರಿಯಾದ ಪ್ರಯೋಗ ತುಂಬಾ ಮುಖ್ಯವೆನಿಸುತ್ತದೆ. ಅವುಗಳಲ್ಲಿ ಮೊದಲನೆಯದು “ಟೈಮ್ ರೀಮ್ಯಾಪಿಂಗ್ ಅಥವಾ ಸ್ಪೀಡ್ ರಾಂಪಿಂಗ್ ” ಮತ್ತೊಂದು “ಕಟ್ಸ್ ಮತ್ತು ಫ್ಲೋ “. ಇನ್ನೂ ಹತ್ತು ಹಲವು ಅಂಶಗಳಿವೆ ಆದರೆ ನನ್ನ ಗ್ರಹಿಕೆಯ ಇತಿಮಿತಿ ಮತ್ತು ಅನುಕೂಲಕ್ಕಾಗಿ ಇವೆರಡನ್ನು ಮಾತ್ರ ಚರ್ಚೆಗೆ ಆಯ್ದುಕೊಂಡಿದ್ದೇನೆ .

ಟೈಂ ರಿಮ್ಯಾಪಿಂಗ್ ಅಥವಾ ಸ್ಪೀಡ್ ರಾಂಪಿಂಗ್ :
ನೀವು slow motion ನ್ನಿನಲ್ಲಿ ಓಡಿಬರುವ ಕಥಾನಾಯಕ ಹೊಡೆಯಲು ಕೈ ಎತ್ತಿದಾಗ ಮಾತ್ರ ಹೊಡೆತದ ಸ್ಪೀಡ್ ಹೆಚ್ಚಾಗುವುದನ್ನು ಸಿನಿಮಾಗಳಲ್ಲಿ ನೋಡಿರುತ್ತೀರಿ . ಈ ಟೆಕ್ನಿಕ್ ಗಳು ತುಂಬಾ ಹಳೆಯವು . ಹಾಗೆ ನೋಡಿದರೆ ಸಿನಿಮಾದ ಎಡಿಟಿಂಗ್ ರೂಲುಗಳೆಲ್ಲ ಸೈಲೆಂಟ್ ಸಿನಿಮಾಗಳ ಕಾಲಘಟ್ಟದಲ್ಲಿ ರೂಪುಗೊಂಡು ಇಂದಿಗೆ ಒಂದು advanced ಹಂತಕ್ಕೆ ಬಂದು ನಿಂತಿವೆ. ಈ ಸಿಂಪಲ್ ತಂತ್ರಗಾರಿಕೆಯನ್ನು ಉಪಯೋಗಿಸಿಕೊಂಡು ಸಿನಿಮಾದಲ್ಲಿ ಅದ್ಭುತ ಎಫೆಕ್ಟ್ ಗಳನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ವಿಚಾರದಲ್ಲಿ ಛಾಯಾಗ್ರಾಹಕನ ಪಾತ್ರವೂ ದೊಡ್ಡದಿರುತ್ತದೆ. ಹೀಗಾಗಿ ತಾಂತ್ರಿಕವಾಗಿ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ.

ಈ ಹಿಂದೆ ಜೇಮ್ಸ್ ಸಿನಿಮಾದ ಕೆಲ ಫೈಟ್ ಸೀಕ್ವೆನ್ಸ್ ಗಳು ಸಹ ಇದೇ ಮಾದರಿಯಲ್ಲಿ ಶೂಟ್ ಮಾಡಿ ಎಡಿಟ್ ಮಾಡಲಾಗಿತ್ತು. ಕೆಲವಂತೂ ಕಥಾನಾಯಕ ಹೊಡೆದದ್ದೂ ಗೊತ್ತಾಗುತ್ತಿರಲಿಲ್ಲ. ಕೊನೆಯಲ್ಲಿ ಒಂದು establishment ಶಾಟ್ ಇರುತ್ತಿತ್ತಷ್ಟೇ. ಇದು ಶೂಟಿಂಗ್ ಸಮಯದಲ್ಲಿ ಪುನೀತ್ ರಾಜಕುಮಾರ್ ರವರ ಅನುಪಸ್ಥಿತಿಯನ್ನು ಮರೆಮಾಚಲು ಮಾಡಿದ್ದೋ ಏನೋ ಗೊತ್ತಿಲ್ಲ. ಪ್ರಸ್ತುತ ಕೆ.ಜಿ.ಎಫ್ ಚ್ಯಾಪ್ಟರ್ ೨ ಸಿನಿಮಾದಲ್ಲಿ ಟೈಂ ಮತ್ತು ಸ್ಪೇಸ್ ಅನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ.

ಕಟ್ಸ್ ಮತ್ತು ಫ್ಲೋ:
ಈ ಸಿನಿಮಾದಲ್ಲಿ ಕವರೇಜ್ ಶಾಟ್ ಗಳ ದೊಡ್ಡ ರೆಪಾಸಿಟರಿ ಉಂಟು. ಸಂಭಾಷಣೆಯ ಮಧ್ಯೆ ಒಂದಷ್ಟು ನರೇಶನ್ ಆಗಿoದಾಗ್ಗೆ ಬಂದುಹೋಗುತ್ತವೆ . ಇಲ್ಲೆಲ್ಲಾ ಕವರೇಜ್ ಶಾಟ್ ಗಳ ಬಳಕೆ ಚೆನ್ನಾಗಿಯೇ ಆಗಿದೆ. ಹೀಗಾಗಿ ಕಟ್ ಗಳು ಸಹ ಅಚ್ಚುಕಟ್ಟಾಗಿದೆ. ಕವರೇಜ್ ಶಾಟುಗಳು ಒಂದು ಸನ್ನಿವೇಶವನ್ನು ಬೇರೊಂದು ಹಂತಕ್ಕೆ ಏರಿಸುವುದರಲ್ಲಿ ಅನುಮಾನವೇ ಇಲ್ಲ. ಈ ತಂತ್ರಗಾರಿಕೆ ಒಂದು ಸನ್ನಿವೇಶದ 360° ಫೀಲ್ ಕೊಡುತ್ತದೆ. ಈ ಕಾರಣಕ್ಕಾಗಿಯೇ ನಾನು ಕೆ ಜಿ ಎಫ್ ನ ಎರಡೂ ಚ್ಯಾಪ್ಟರ್ ಗಳನ್ನು ವರ್ಚುವಲ್ ರಿಯಾಲಿಟಿ ಸಿನಿಮಾಗಳಾಗಿ ವೀಕ್ಷಿಸಲು ಬಯಸುತ್ತೇನೆ . ಸಿನಿಮಾದ ಸೆಟ್ ಡಿಸೈನ್ ಅಷ್ಟು ಅದ್ಭುತವಾಗಿದೆ.

ಮೂಲ ಕಥೆಯ ಆಶಯದಲ್ಲಿ ಕೆಲವು fault lines ಗಳನ್ನು ನಾವು ಗಮನಿಸಬಹುದು. ಚ್ಯಾಪ್ಟರ್ ೧ರಲ್ಲಿ ಒಂದು ನಿರ್ದಿಷ್ಟ ಗುರಿಯೊಂದಿಗೆ ಕೆ.ಜಿ.ಎಫ್ ನ ಒಳನುಗ್ಗುವ ರಾಕಿ ಭಾಯ್ , ಪ್ರಸ್ತುತ ಚ್ಯಾಪ್ಟರ್ 2ನಲ್ಲಿ ಅರ್ಥವಿಲ್ಲದ ಸಾಹಸಗಳನ್ನು ಯತ್ನಿಸುತ್ತಾನೆ . ದೇಶದ ಪ್ರಧಾನ ಮಂತ್ರಿಗಳನ್ನು ಎದುರುಹಾಕಿಕೊಳ್ಳುವ ಕಥಾನಾಯಕ ಅದಕ್ಕೆ ಬೇಕಾದ ಬಂದೋಬಸ್ತನ್ನು ಮಾಡಿಕೊಳ್ಳುವ ಗೋಜಿಗೇ ಹೋಗಿಲ್ಲ . ಈ ಭಾಗಗಳೆಲ್ಲ ತೀರಾ ಟೊಳ್ಳೆನಿಸುತ್ತದೆ. ಒಟ್ಟಾರೆ ಫ್ಯಾನ್ ಗಳಿಗೆ ಒಂದು ಅದ್ಭುತ ಅನುಭವ ಅನಿಸುವ ಸಿನಿಮಾ, perfect ಅಂತೂ ಅಲ್ಲವೇ ಅಲ್ಲ.

ಕಲರ್ ಗ್ರೇಡಿಂಗ್ ಬಗ್ಗೆ ಹೇಳುವುದಾದರೆ, ಈಗಾಗಲೇ ಚ್ಯಾಪ್ಟರ್ 1ರಲ್ಲಿ ಗಮನಿಸಿದಂತೆ ವಾರ್ಮ್ ಅನಿಸುವ ಗ್ರೇಡ್ ಇದ್ದು, ಅದನ್ನು ಸಿನಿಮಾದ ಉದ್ದಕ್ಕೂ ಕಾಯ್ದುಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ನ ಸಮುದ್ರದಲ್ಲಿನ ಸನ್ನಿವೇಶದಲ್ಲಂತೂ ಕಲರ್ ಗ್ರೆಡಿಂಗಿನಿಂದಾಗಿ ಸಮುದ್ರದ ನೀರೆಲ್ಲಾ ರಕ್ತವರ್ಣಕ್ಕೆ ತಿರುಗಿದಂತೆ ಅನ್ನಿಸುತ್ತದೆ. ಇದು ಸಿನಿಮಾದಲ್ಲಿನ ರಕ್ತಪಾತದ ರೂಪಕವೂ ಇರಬಹುದು. ಸಿನಿಮಾದ ಮುಖ್ಯ ಹೈಲೈಟುಗಳೆಂದರೆ ರವೀನಾ ಟಂಡನ್ ಮತ್ತು ಸಂಜಯ್ ದತ್. ಇವರುಗಳು ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ. ಅಧೀರನ ಪಾತ್ರದ ಹುಟ್ಟಿನ ಬಗ್ಗೆ ಇನ್ನಷ್ಟು ಹೇಳಬಹುದಿತ್ತು ಏಕೆಂದರೆ ಆ ಪಾತ್ರದ ಬಗ್ಗೆ ಅಷ್ಟು ಕುತೂಹಲಗಳು ಇದ್ದವು.

ಈ ಮೇಲ್ಕಂಡ ವಿವರಣೆಗಳ ಸಾರಾಂಶ ಇಷ್ಟೇ.
1. ಈ ಸಿನಿಮಾ ವಿ.ಆರ್ ಸಿನಿಮಾ ಆಗಿದ್ದಿದ್ರೆ ಇನ್ನೂ ಹತ್ತು ಬಾರಿ ನೋಡಬಹುದಿತ್ತು. ಸಿನಿಮಾದ ಸೆಟ್ ಡಿಸೈನ್ ಹಾಗಿದೆ.
2. ಕಥೆಯಲ್ಲಿ ಲಾಜಿಕ್ ಇಲ್ಲ , ಹೀಗಾಗಿ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ.
3. ಈ ಸಿನಿಮಾದ ವೀಡಿಯೋ ಎಡಿಟರ್ಗಳು ನಿಜಕ್ಕೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ, ಅದಕ್ಕೆ ಸಾಕ್ಷಿ ಎಂಬಂತೆ ಸಿನಿಮಾ ಟೆಕ್ನಿಕಲ್ ಆಗಿ ಚೆನ್ನಾಗಿಯೇ ಮೂಡಿಬಂದಿದೆ.

Share