Connect with us


      
ಜಾನಪದ

ಸುಧಾ ಭಾರದ್ವಾಜ್ ಜಾಮೀನು ವಿಚಾರ: ಬಾಂಬೆ ಹೈಕೋರ್ಟ್ ಆದೇಶ ವಜಾಗೊಳಿಸಿದ ಸುಪ್ರೀಂಕೋರ್ಟ್

Vanitha Jain

Published

on

ನವದೆಹಲಿ, ಡಿಸೆಂಬರ್ 7(ಯು.ಎನ್.ಐ) 2018ರ ಭೀಮಾ ಕೊರೆಗಾಂವ್ ಮತ್ತು ಎಲ್ಗಾರ್ ಪರಿಷದ್ ಪ್ರಕರಣ ಸಂಬಂಧ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಇಲಾಖೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಸಮರ್ಪಕವಾದ ಕಾರಣವಿಲ್ಲದೇ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಯುಯು ಲಲಿತ್, ಎಸ್‍ಆರ್ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ಹೇಳಿದೆ.

2018ರಿಂದ ಪುಣೆಯಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ಸುಧಾ ಅವರಿಗೆ ತನಿಖಾಧಿಕಾರಿ ನಿಗದಿತ ಅವಧಿಗೆ ಆರೋಪಪಟ್ಟಿ ಸಲ್ಲಿಸದ ಕಾರಣಕ್ಕೆ ಬಾಂಬೆ ಹೈಕೋರ್ಟ್ ಡಿಫಾಲ್ಟ್ ಜಾಮೀನು ಮಂಜೂರು ಮಾಡಿತ್ತು.

ಈ ಆದೇಶವನ್ನು ನೀಡಿದ ನ್ಯಾಯಮೂರ್ತಿಗಳಾದ ಎಸ್‍ಎಸ್ ಶಿಂಧೆ ಮತ್ತು ಎನ್‍ಜೆ ಜಮಾದಾರ್ ಅವರ ಪೀಠವು ಡಿಸೆಂಬರ್ 8 ರಂದು ಪ್ರಕರಣವನ್ನು ಪುನಃ ಕೈಗೆತ್ತಿಕೊಳ್ಳಲು ಮತ್ತು ಅವರ ಜಾಮೀನು ಮತ್ತು ಬಿಡುಗಡೆಯ ದಿನಾಂಕದ ಷರತ್ತುಗಳನ್ನು ನಿರ್ಧರಿಸಲು ನಿರ್ದೇಶನ ನೀಡಿದೆ.

ಡೀಫಾಲ್ಟ್ ಜಾಮೀನು ನೀಡುವ ಸಂದರ್ಭದಲ್ಲಿ 1967ರ ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ರ ಕೆಲವು ಸೆಕ್ಷನ್‍ಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರು ತನಿಖಾ ಸಂಸ್ಥೆಯ ಸಲ್ಲಿಕೆಯನ್ನು ಪರಿಗಣಿಸುವಂತೆ ಎನ್‍ಐಎ ಪರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಮನವಿ ಮಾಡಿದರು. ಆದರೆ ಇವರ ಈ ವಾದವನ್ನು ಸುಪ್ರೀಂಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ.

ಪ್ರಕರಣದಲ್ಲಿ ಬಂಧಿತರಾದ 16 ಕಾರ್ಯಕರ್ತರು ಮತ್ತು ಶಿಕ್ಷಣತಜ್ಞರಲ್ಲಿ ಡೀಫಾಲ್ಟ್ ಜಾಮೀನು ಪಡೆದವರಲ್ಲಿ ಸುಧಾ ಭಾರದ್ವಾಜ್ ಮೊದಲಿಗರಾಗಿದ್ದಾರೆ. ಕವಿ, ಸಾಮಾಜಿಕ ಕಾರ್ಯಕರ್ತ ವರವರ ರಾವ್ ಪ್ರಸ್ತುತ ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೆಸ್ಯೂಟ್ ಪಾದ್ರಿ ಸ್ಟಾನ್ ಸ್ವಾಮಿ ಅವರು ವೈದ್ಯಕೀಯ ಜಾಮೀನಿಗಾಗಿ ಕಾಯುತ್ತಿರುವಾಗ ಈ ವರ್ಷ ಜುಲೈ 5 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Continue Reading
Share