Connect with us


      




ಕರ್ನಾಟಕ

ವಿಧಾನಮಂಡಲ ಅಧಿವೇಶನದ ಸಂಭ್ರಮದಲ್ಲಿ ಕುಂದಾನಗರಿ

Kumara Raitha

Published

on

ವಿಧಾನಮಂಡಲ ಅಧಿವೇಶನದ ಸಂಭ್ರಮದಲ್ಲಿ ಕುಂದಾನಗರಿ

ಬೆಂಗಳೂರು: ವರ್ಷವಿಡೀ ಆಹ್ಲಾದಕರ ಹವಾಮಾನವಿರುವ ಮಲೆನಾಡು, ಕುಂದಾನಗರಿ ಈಗ ಮತ್ತಷ್ಟೂ ವರ್ಣರಂಜಿತವಾಗಿದೆ. ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವುದಕ್ಕೆ ನಗರದ ಜನತೆ ಸಂಭ್ರಮಿಸುತ್ತಿದ್ದಾರೆ.

ಕೊರೊನಾ, ಮತ್ತಿತರ ಕಾರಣಗಳಿಂದ ಬೆಳಗಾವಿಯಲ್ಲಿ ಕಳೆದ ಮೂರು ವರ್ಷಗಳಿಂದ ವಿಧಾನಮಂಡಲದ ಅಧಿವೇಶನ ನಡೆದಿರಲಿಲ್ಲ. ಈ ಬಾರಿ ಇಲ್ಲಿನ ಭವ್ಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದಾಗ ಮತ್ತೆ ಅಪಸ್ವರ ಗಟ್ಟಿಯಾಗಿಯೇ ಕೇಳಿಬಂತು.

ಬಿಜೆಪಿಯ ಒಂದಷ್ಟು ಮಂದಿ ಶಾಸಕರು, ಸಚಿವರು ಸಹ ಒಮೈಕ್ರಾನ್ ಕಾರಣವೊಡ್ಡಿ ಬೆಳಗಾವಿಯಲ್ಲಿ ಪ್ರಸ್ತಕ ಸಂದರ್ಭದಲ್ಲಿ ಅಧಿವೇಶನ ನಡೆಸುವುದನ್ನು ವಿರೋಧಿಸಿದರು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದಲೂ ಕೆಲವರು ಅಪಸ್ವರ ಎತ್ತಿದರು.ನೌಕರರ ವರ್ಗವೂ ಕೋವಿಡ್ ಕಾರಣವೊಡ್ಡಿ ಸದ್ಯದ ಸ್ಥಿತಿಯಲ್ಲಿ ಇಲ್ಲಿ ಅಧಿವೇಶನ ನಡೆಸುವುದು ಬೇಡ ಎಂದು ಸಲಹೆ ಇತ್ತರು.

ಯಾರೇನೇ ಹೇಳಿದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಚಲ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದಕ್ಕೆ ಸಕಾರಣಗಳೂ ಇವೆ. ಒಂದನೇಯದು ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಭಾಗದ ಹಾವೇರಿಯ ಶಿಗ್ಗಾಂವ ಕ್ಷೇತ್ರದವರು. ಅವರಿಗೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಮನದಟ್ಟಾಗಿವೆ. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವುಗಳನ್ನು ಸಾಧ್ಯವಾದಷ್ಟೂ ಪರಿಹರಿಸುವ ಹಂಬಲವೂ ಅವರಿಗಿದೆ ಎಂದು ಅವರ ಆಪ್ತವಲಯದವರು ಹೇಳುತ್ತಾರೆ.

ಬೆಳಗಾವಿ ಭಾಗಕ್ಕೆ ಅಗತ್ಯವಾದ ಸರ್ಕಾರಿ ಕಚೇರಿಗಳು ಸುವರ್ಣ ವಿಧಾನಮಂಡಲಕ್ಕೆ ಸ್ಥಳಾಂತರವಾಗಬೇಕೆಂಬ ಬೇಡಿಕೆ ಇನ್ನೂ ಬಾಕಿ ಉಳಿದಿದೆ. ಅದು ಈ ಅಧಿವೇಶನದ ನಂತರ ಸಾಧ್ಯವಾಗಬಹುದು ಎಂಬ ನಿರೀಕ್ಷೆಯೂ ಉತ್ತರ ಕರ್ನಾಟಕದ ಜನತೆಗಿದೆ.

Share