Connect with us


      
ಕರ್ನಾಟಕ

ಆರೋಗ್ಯಕರ ಸಮಾಜ ನಿರ್ಮಾಣ;  ಮಾಧ್ಯಮದ ಜವಾಬ್ದಾರಿ ಹೆಚ್ಚು

Kumara Raitha

Published

on

ಬೆಂಗಳೂರು: ಜನೆವರಿ 11 (ಯು.ಎನ್.ಐ.) ಇತ್ತೀಚಿನ ವರ್ಷಗಳಲ್ಲಿ  ಸವಾಲುಗಳ ನಡುವೆ ಮಾಧ್ಯಮ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಪತ್ರಕರ್ತರ  ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ವಾರ್ತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್ ಅಭಿಪ್ರಾಯಪಟ್ಟರು.

ಅವರಿಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಳವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಒಂದು ಕಾಲಘಟ್ಟದ ಮಾಧ್ಯಮ ಈಗ ಬಹಳಷ್ಟು ಬದಲಾಗಿದೆ. ಪತ್ರಕರ್ತರು ಕೂಡ ಹೊಸ ನೈಪುಣ್ಯತೆಗೆ ತೆರೆದುಕೊಳ್ಳಬೇಕಿದೆ. ಇದು ಅತ್ಯಂತ ಅವಶ್ಯಕ ಎಂದ ಅವರು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮಾಡುತ್ತಿರುವ ಕೆಲಸ ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ನೆರವಿಗೆ ಗಟ್ಟಿಯಾಗಿ ನಿಂತು ಪರಿಹಾರ ಕೊಡಿಸಿದ್ದು ದಾಖಲೆ ಕಾರ್ಯ. ಅದಕ್ಕಾಗಿ ಸಂಘದ ಅಧ್ಯಕ್ಷ  ಶಿವಾನಂದ ತಗಡೂರು ಅವರು ಅಭಿನಂದನಾರ್ಹರು ಎಂದರು.

ಈ ಸಂಜೆ ಸಂಪಾದಕ ಟಿ.ವೆಂಕಟೇಶ್ ಅವರು ಮಾತನಾಡಿ, ಸದಾ ಸಮಾಜಮುಖಿಯಾಗಿ ಪತ್ರಕರ್ತರು ತೊಡಗಿಸಿಕೊಳ್ಳಬೇಕು. ಕೆಯುಡಬ್ಲ್ಯೂಜೆ ಮಾಡುತ್ತಿರುವ ಕೆಲಸಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಶಿವಾನಂದ ತಗಡೂರು ಅವರು ಅಧ್ಯಕ್ಷರಾದ ನಂತರ ಸಂಘ, ಪತ್ರಕರ್ತರ ಕ್ಷೇಮಕ್ಕಾಗಿ ಹೆಚ್ಚು ಕೆಲಸ ಮಾಡುತ್ತಿದೆ.  ನಮ್ಮೆಲ್ಲರಿಗೂ ಹೆಮ್ಮೆ ಎನಿಸುವ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದರು

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಕಲಬುರಗಿಗೆ ಬರಲಾಗದವರಿಗೆ ಇಂದು ಅಭಿನಂದನೆ ಜೊತೆಗೆ  ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ ಅವರು ಈ ಸಂಜೆ ಸಂಪಾದಕರಾದ ವೆಂಕಟೇಶ್ ಅವರು ತಮ್ಮ ಸಂಸ್ಥೆ ಅಭಿಮಾನಿ ಪ್ರಕಾಶನ ಹೆಸರಿನಲ್ಲಿ ಪ್ರಶಸ್ತಿಗಾಗಿ, ಒಂದು ಲಕ್ಷ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.

ನಾಡು ನುಡಿಗೆ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಕನ್ನಡದ ಕಟ್ಟಾಳು ಮ.ರಾಮಮೂರ್ತಿ ಅವರ  ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಈ ಸಂಜೆ ಸಂಪಾದಕ ಟಿ.ವೆಂಕಟೇಶ್ ಅವರಿಗೆ, ನಾಡಿಗೇರ ಕೃಷ್ಣರಾಯ ಅವರ ಹೆಸರಿನ ಪ್ರಶಸ್ತಿಯನ್ನು ಸಮಾಜಮುಖಿ ಸಂಪಾದಕ ಚಂದ್ರಕಾಂತ ವಡ್ಡು ಅವರಿಗೆ, ಅತ್ಯುತ್ತಮ ಛಾಯಾಗ್ರಾಹಕ   ಪ್ರಶಸ್ತಿಯನ್ನು ವಿಶ್ವನಾಥ್ ಸುವರ್ಣ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಂಪಿ ವಿವಿ ಯಿಂದ ಡಾಕ್ಟರೇಟ್ ಪದವಿ ಪಡೆದ ಪ್ರಜಾವಾಣಿ ನಿಕಟಪೂರ್ವ ಸಂಪಾದಕರಾದ ಪದ್ಮರಾಜ ದಂಡಾವತಿ ಅವರನ್ನು ಗೌರವಿಸಲಾಯಿತು.

ಕೆಯುಡಬ್ಲ್ಯೂಜೆ  ಉಪಾಧ್ಯಕ್ಷ ಮತ್ತಿಕೆರೆ ಜಯರಾಂ, ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಖಜಾಂಚಿ ಡಾ.ಉಮೇಶ್ವರ್, ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರ ಗಾಂಧಿ, ಪ್ರಧಾನ ಕಾರ್ಯದರ್ಶಿ ದೇವರಾಜ್ ಮತ್ತಿತರರು ಹಾಜರಿದ್ದರು.

Share