Connect with us


      
ಕರ್ನಾಟಕ

ಕಾರ್ಮಿಕ ಅದಾಲತ್ 2.0: ರಾಜ್ಯದಾದ್ಯಂತ ಅರ್ಜಿ ಸಲ್ಲಿಕೆ ಆರಂಭ

Iranna Anchatageri

Published

on

ಬೆಂಗಳೂರು: ಜುಲೈ 16 (ಯು.ಎನ್.ಐ.) ರಾಜ್ಯ ಕಾರ್ಮಿಕ ಇಲಾಖೆ ಶ್ರಮಿಕ ವರ್ಗದ ಬಾಕಿ ಅರ್ಜಿಗಳನ್ನು ಕಾಲಾವಧಿಯಲ್ಲಿ ಇತ್ಯರ್ಥಪಡಿಸಿ ಸವಲತ್ತುಗಳ ವಿತರಣೆಗಾಗಿ ಕಾರ್ಮಿಕ ಅದಾಲತ್ 2.0 ಅನ್ನು ಆಯೋಜಿಸಲಾಗಿದೆ. ಇದಕ್ಕಾಗಿ ರಾಜ್ಯದಾದ್ಯಂತ ಕಾರ್ಮಿಕರಿಂದ ಅರ್ಜಿ ಪಡೆಯುವ ಪ್ರಕ್ರಿಯೆ ಆರಂಭಗೊಳಿಸಲಾಗಿದೆ.

ರಾಜ್ಯದ ಕಾರ್ಮಿಕ ವಲಯಕ್ಕೆ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸುತ್ತಿರುವ ಇಲಾಖೆಯು ಬಹು ವರ್ಷಗಳಿಂದ ಬಾಕಿ ಉಳಿದಿದ್ದ ಅರ್ಜಿಗಳ ಇತ್ಯರ್ಥದ ಜತೆಗೆ ಕೂಡಲೇ ಸವಲತ್ತುಗಳನ್ನು ಒದಗಿಸಿ ಯಶಸ್ಸು ಕಂಡ ಕಾರ್ಮಿಕ ಅದಾಲತ್ 1.0 ನಂತೆಯೇ ಇದೀಗ ಕಾರ್ಮಿಕ ಅದಾಲತ್ 2.0ಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಚಾಲನೆ ನೀಡಿದ್ದು, ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ.

ದೇಶವು ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರ್ ಆಯೋಜಿಸಲಾಗಿದ್ದು, ಶ್ರಮಿಕ ವರ್ಗಕ್ಕೆ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳು, ಅಗತ್ಯ ನೆರವು ಮತ್ತು ಯೋಜನೆಗಳನ್ನು ತ್ವರಿತಗತಿಯಲ್ಲಿ ತಲುಪಿಸುವ ಸಲುವಾಗಿ “ಕಾರ್ಮಿಕ ಅದಾಲತ್ 2.0” ಅನ್ನು ಆಯೋಜಿಸಲಾಗಿದೆ. ಇದೇ 15ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಜುಲೈ 31ರವರೆಗೆ ಅರ್ಜಿಗಳ ಸಲ್ಲಿಕೆಗೆ ಅವಕಾಶವಿದ್ದು, ಸಲ್ಲಿಕೆಯಾದ ಅರ್ಜಿಗಳು ಮತ್ತು ಬಾಕಿ ಅರ್ಜಿಗಳನ್ನು ರಾಜ್ಯದಾದ್ಯಂತ ಆಗಸ್ಟ್ 1ರಿಂದ ಮೊದಲ್ಗೊಂಡು 15ನೇ ತಾರೀಖಿನವರೆಗೆ ವಿಲೇವಾರಿ ಮಾಡಲು ಸಚಿವ ಹೆಬ್ಬಾರ್ ಸೂಚಿಸಿದ್ದಾರೆ.

ಇಲಾಖೆಯು ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ, ದುರ್ಬಲತೆ ಪಿಂಚಣಿ, ಶ್ರಮ ಸಾಮರ್ಥ್ಯ ಮೂಲಕ ಟ್ರೈನಿಂಗ್ಗ್ ಕಮ್ ಟೂಲ್ ಕಿಟ್ ಸೌಲಭ್ಯ, ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ, ವಸತಿ ಸೌಲಭ್ಯ, ಹೆರಿಗೆ ಸೌಲಭ್ಯ, ಶಿಶುಪಾಲನಾ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ, ಮದುವೆ ಸಹಾಯಧನ, ಬಿಎಂಟಿಸಿ ಬಸ್ ಪಾಸ್ ಸೌಲಭ್ಯ, ತಾಯಿ ಮಗು ಸಹಾಯ ಹಸ್ತ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿರುವ ಇಲಾಖೆ ಈ ಅರ್ಜಿಗಳ ತ್ವರಿತ ವಿಲೇವಾರಿಗೆ ಅನುವಾಗುವಂತೆ ಕಾರ್ಮಿಕ ಅದಾಲತ್‌ಗಳನ್ನು ಆಯೋಜಿಸುತ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಪಡೆದು ವಿಲೇವಾರಿ ಮಾಡಲು ಅನುವಾಗುವಂತೆ ಇಲಾಖೆಯು “ಕಾರ್ಮಿಕ ಅದಾಲತ್ 2.0” ಬಗ್ಗೆ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಭರ್ಜರಿ ಪ್ರಚಾರವನ್ನೂ ಸಹ ಕೈಗೊಂಡಿದ್ದು, ಶ್ರಮಿಕವ ವರ್ಗಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಂದಡಿ ಇರಿಸಿದೆ.

ಕಾರ್ಮಿಕ ಅದಾಲತ್‌ಗೆ ಅರ್ಜಿ ಸಲ್ಲಿಕೆ ಸಂಬoಧ ಹೆಚ್ಚಿನ ಮಾಹಿತಿಗೆ ಸ್ಥಳೀಯ ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸುವಂತೆ ಸೂಚಿಸಿರುವ ಇಲಾಖೆಯು, ಉಚಿತ ಸಹಾಯವಾಣಿ 155214ಕ್ಕೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಸೂಚಿಸಿದೆ.

ಈ ಕುರಿತು ಮಾತನಾಡಿರುವ ಸಚಿವ ಶಿವರಾಂ ಹೆಬ್ಬಾರ್, ಕಳೆದ ವರ್ಷ ನಡೆಸಲಾದ ಕಾರ್ಮಿಕ ಅದಾಲತ್ ಅತ್ಯಂತ ಯಶಸ್ವಿ ಕಂಡಿತ್ತು. 2021ರಲ್ಲಿ ನಡೆಸಲಾದ ಅದಾಲತ್‌ನಲ್ಲಿ 3,02,213 ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೀಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ ಕಾನೂನಾತ್ಮಕ ತೊಡಕುಗಳಿಲ್ಲದ 2,83,294 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ 89,04,97,718 ಕೋಟಿ ರೂಪಾಯಿಗಳ ಪರಿಹಾರ ಮೊತ್ತವನ್ನು ಕಾರ್ಮಿಕರಿಗೆ ತಲುಪಿಸಲಾಗಿತ್ತು. ಇದರಿಂದ ಒಟ್ಟಾರೆ 1,53,996ಕ್ಕೂ ಅಧಿಕ ಕಾರ್ಮಿಕರು ಲಾಭ ಪಡೆದುಕೊಂಡಿದ್ದರು.

ಈ ಮೂಲಕ ರಾಜ್ಯ ಸರ್ಕಾರವು ಶ್ರಮಿಕ ವರ್ಗದ ಪರ ಎಂಬುದನ್ನು ನಿರೂಪಿಸಲಾಗಿತ್ತು. ಕಾರ್ಮಿಕ ಅದಾಲತ್ 1.0 ಯಶಸ್ಸಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಇದೀಗ ಬಾಕಿ ಉಳಿದಿರುವ ಅರ್ಜಿಗಳ ಜತೆಗೆ ಹೊಸ ಅರ್ಜಿಗಳ ತ್ವರಿತ ವಿಲೇವಾರಿಗೆ ಕಾರ್ಮಿಕ ಅದಾಲತ್ 2.0 ಅನ್ನು ಆಯೋಜಿಸಲಾಗಿದೆ. ಶ್ರಮಿಕ ವರ್ಗ ಈ ಅದಾಲತ್‌ನ ಲಾಭ ಪಡೆದುಕೊಳ್ಳುವ ಮೂಲಕ ಇಲಾಖೆ ಯೋಜನೆಗಳನ್ನು ಯಶಸ್ವಿಗೊಳಿಸಬೇಕೆಂದು ಸಚಿವರು ಕೋರಿದ್ದಾರೆ.

Share