Connect with us


      
ದೇಶ

ಲಖಿಂಪುರ ಹಿಂಸಾಚಾರದ ಚಾರ್ಜ್‌ಶೀಟ್ ಸಲ್ಲಿಕೆ

UNI Kannada

Published

on

ಉತ್ತರಪ್ರದೇಶ,ಜನೆವರಿ .03 (ಯು.ಎನ್.ಐ) ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದೆ. ಮೂಲಗಳ ಪ್ರಕಾರ, 5000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದೆ. ಅಷ್ಟೇ ಅಲ್ಲ, ಎಸ್‌ಐಟಿ ಪ್ರಕಾರ ಆಶಿಶ್ ಸ್ಥಳದಲ್ಲಿಯೇ ಇದ್ದ ಎನ್ನಲಾಗಿದೆ.

ಇದಕ್ಕೂ ಮುನ್ನ ಎಸ್‌ಐಟಿ 5000 ಪುಟಗಳ ಚಾರ್ಜ್‌ಶೀಟ್ ಅನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಲಕ್ನೋ ನ್ಯಾಯಾಲಯವನ್ನು ತಲುಪಿಸಿದೆ. ಆರೋಪಪಟ್ಟಿಯಲ್ಲಿ ಪೊಲೀಸರು ಆಶಿಶ್ ಮಿಶ್ರಾ ಅವರ ಇನ್ನೊಬ್ಬ ಸಂಬಂಧಿಯನ್ನೂ ಆರೋಪಿಯನ್ನಾಗಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ವೀರೇಂದ್ರ ಶುಕ್ಲಾ ಸಾಕ್ಷ್ಯವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ. ಆಶಿಶ್ ಮಿಶ್ರಾ ಅವರ ಥಾರ್ ಜೀಪಿನ ಹಿಂದೆ ಓಡುತ್ತಿದ್ದ ಎರಡು ವಾಹನಗಳಲ್ಲಿ ಒಂದು ವೀರೇಂದ್ರ ಅವರ ಸ್ಕಾರ್ಪಿಯೋ. ಈ ಹಿಂದೆ ಶುಕ್ಲ ತನ್ನ ಸ್ಕಾರ್ಪಿಯೋವನ್ನು ಮರೆಮಾಚಿಕೊಂಡು ಪರರ ವಾಹನ ಎಂದು ಹೇಳಿದ್ದ.

ಪ್ರಕರಣದ 13 ಆರೋಪಿಗಳಿಗೆ ಜೈಲು ಶಿಕ್ಷೆ: ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಸೇರಿದಂತೆ ಎಲ್ಲ 13 ಆರೋಪಿಗಳು ಜೈಲಿನಲ್ಲಿದ್ದಾರೆ. ಪೊಲೀಸರು ಆರೋಪಪಟ್ಟಿಯಲ್ಲಿ ವೀರೇಂದ್ರ ಶುಕ್ಲಾ ಎಂಬ ಹೊಸ ಹೆಸರನ್ನೂ ಸೇರಿಸಿದ್ದಾರೆ. ವೀರೇಂದ್ರ ಸೆಕ್ಷನ್ 201 ರ ಅಡಿಯಲ್ಲಿ ಸಾಕ್ಷ್ಯ ನಾಶಪಡಿಸಲು ಸಂಚು ಹೂಡಿದ್ದಾರೆ ಎಂದು ಆರೋಪಿಸಲಾಗಿದೆ. ವೀರೇಂದ್ರ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಸಂಬಂಧಿಯಾಗಿದ್ದಾನೆ.

ಅಕ್ಟೋಬರ್ 3 ರಂದು ಹಿಂಸಾಚಾರ: ಅಕ್ಟೋಬರ್ 3 ರಂದು ಲಖಿಂಪುರದ ಟಿಕುನಿಯಾದಲ್ಲಿ ನಡೆದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಪುತ್ರ ಆಶಿಶ್ ಮಿಶ್ರಾ ಅಲಿಯಾಸ್ ಮೋನು ತನ್ನ ಜೀಪಿನಿಂದ ರೈತರಿಗೆ  ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಇದಾದ ನಂತರ ಆಶೀಶ್‌ನ ಚಾಲಕ ಸೇರಿದಂತೆ ನಾಲ್ವರನ್ನು ಕೋಪೋದ್ರಿಕ್ತ ಗುಂಪು ಕೊಂದಿತ್ತು.

ಇತ್ತೀಚೆಗಷ್ಟೇ ಎಸ್‌ಐಟಿ ವರದಿ ಈ ವಿಚಾರದಲ್ಲಿ ಮುನ್ನೆಲೆಗೆ ಬಂದಿದೆ. ಇದರಲ್ಲಿ, ಲಖಿಂಪುರದ ಟಿಕುನಿಯಾದಲ್ಲಿ ನಡೆದ ಹಿಂಸಾಚಾರವು ಅಪಘಾತ ಅಥವಾ ತಪ್ಪಿತಸ್ಥ ನರಹತ್ಯೆ ಅಲ್ಲ, ಆದರೆ ಗಂಭೀರ ಸಂಚು ರೂಪಿಸಿ ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಕೊಲೆಗೆ ಯತ್ನಿಸಿದ ಘಟನೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. ತನಿಖಾಧಿಕಾರಿಯ ಬೇಡಿಕೆಯ ಮೇರೆಗೆ ನ್ಯಾಯಾಲಯವು ಆಶಿಶ್ ಮಿಶ್ರಾ ವಿರುದ್ಧ ಇನ್ನಷ್ಟು ಕಠಿಣ ಸೆಕ್ಷನ್‌ಗಳನ್ನು ವಿಧಿಸಿದೆ. ಇದಾಸ ನಂತರ, ಪ್ರತಿಪಕ್ಷಗಳು ಸಂಸತ್ತಿನವರೆಗೆ ಗದ್ದಲ ಸೃಷ್ಟಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Share