Connect with us


      




ಸಂಗೀತ

ಗಾನ ಕೋಗಿಲೆ ಲತಾ ಮಂಗೇಶ್ಕರ್ ಗೆ ಕೋವಿಡ್ ದೃಢ: ಐಸಿಯುನಲ್ಲಿ ಚಿಕಿತ್ಸೆ

Vanitha Jain

Published

on

ಮುಂಬೈ: ಜನೆವರಿ 11 (ಯು.ಎನ್.ಐ.) ಗಾನ ಕೋಗಿಲೆ ಲತಾ ಮಂಗೇಶ್ಕರ್ ಗೆ ಕೋವಿಡ್ ಕಾಣಿಸಿಕೊಂಡಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದಾರೆ.

ಸ್ವರ ದಿಗ್ಗಜೆ ಲತಾ ಮಂಗೇಶ್ಕರ್ ಆರಾಮವಾಗಿ ಇದ್ದಾರೆ. ವಯಸ್ಸಿನ ಕಾರಣ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದೆ. ಕೊವಿಡ್‍ನ ಸೌಮ್ಯ ಲಕ್ಷಣಗಳಿವೆಯೇ ಹೊರತು ಗಂಭೀರತೆ ಇಲ್ಲ ಎಂದು ಸೋದರ ಸೊಸೆ ರಚನಾ ಶಾ ಹೇಳಿದ್ದಾರೆ.

ಲತಾ ಮಮಗೇಶ್ಕರ್ ಚೆನ್ನಾಗಿದ್ದಾರೆ. ಆಕೆಯ ವಯಸ್ಸನ್ನು ಪರಿಗಣಿಸಿ ಮುಂಜಾಗ್ರತಾ ದೃಷ್ಟಿಯಿಂದ ಐಸಿಯುನಲ್ಲಿ ಇರಿಸಲಾಗಿದೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ, ನಿಮ್ಮ ಅಕ್ಕನಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಎಂದು ಸೋದರ ಸೊಸೆ ರಚನಾ ಶಾ ಮನವಿ ಮಾಡಿದ್ದಾರೆ.

‘ನೈಟಿಂಗೇಲ್ ಆಫ್ ಇಂಡಿಯಾ’ ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್, ತಂಗಿ ಆಶಾ ಭೋಂಸ್ಲೆ ಸೇರಿದಂತೆ ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯರು. ಬಾಲಿವುಡ್‍ನ ಮಂಗೇಶ್ಕರ್ ಕುಟುಂಬಕ್ಕೆ ಸೇರಿದ ಲತಾ ಮಂಗೇಶ್ಕರ್ 13 ನೇ ವಯಸ್ಸಿನಿಂದ ಗಾಯನದಲ್ಲಿ ಮಗ್ನರಾಗಿದ್ದಾರೆ.

ಸುಮಾರು ಏಳು ದಶಕಗಳ ಕಾಲದ ಸಕ್ರಿಯ ವೃತ್ತಿಜೀವನದಲ್ಲಿ, ಭಾರತೀಯ ಸಂಗೀತ ರಂಗವನ್ನು, ಭಾರತದಲ್ಲಿ ಮಹಿಳಾ ಗಾಯಕರ ಸ್ಥಾನವನ್ನು ಉತ್ತುಂಗಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಲತಾ ಮಂಗೇಶ್ಕರ್ ಅವರಿಗೆ ಸಲ್ಲುತ್ತದೆ. ಅವರು ಇಂದಿನ ಪಿಳಿಗೆಗೂ ಕೂಡ ಸ್ಫೂರ್ತಿದಾಯಕರಾಗಿದ್ದಾರೆ.

1949 ರ ಮಹಲ್ ಚಲನಚಿತ್ರದ “ಆಯೇಗಾ ಆನೆವಾಲಾ” ಮಗೇಶ್ಕರ್ ಅವರ ಮೊದಲ ಪ್ರಮುಖ ಗಾಯನವಾಗಿದೆ. 1974 ರಲ್ಲಿ ಲತಾ ಮಂಗೇಶ್ಕರ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಮಾಡಿದರು. 1948 ಮತ್ತು 1974 ರ ನಡುವೆ “20 ಭಾರತೀಯ ಭಾಷೆಗಳಲ್ಲಿ 25,000 ಕ್ಕಿಂತ ಹೆಚ್ಚು ಏಕವ್ಯಕ್ತಿ, ಯುಗಳ ಮತ್ತು ಕೋರಸ್ ಹಾಡುಗಳನ್ನು ಹಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ತನ್ನ ಪ್ರಯಾಣದ ಬಗ್ಗೆ ಮಾತನಾಡುತ್ತಾ, ಆ ದೀರ್ಘ ಪ್ರಯಾಣ ಮತ್ತು ಆ ಪುಟ್ಟ ಹುಡುಗಿ ಇನ್ನೂ ನನ್ನೊಂದಿಗಿದ್ದಾಳೆ. ಅವಳು ಎಲ್ಲಿಯೂ ಹೋಗಿಲ್ಲ. ಕೆಲವರು ನನ್ನನ್ನು ‘ಸರಸ್ವತಿ’ ಎಂದು ಕರೆಯುತ್ತಾರೆ ಅಥವಾ ನನಗೆ ಅವರ ಆಶೀರ್ವಾದವಿದೆ ಎಂದು ಹೇಳುತ್ತಾರೆ. ಇದೆಲ್ಲವೂ ನನ್ನ ತಂದೆ ತಾಯಿ, ನಮ್ಮ ಆರಾಧ್ಯ ದೈವ ಮಂಗೇಶ್, ಸಾಯಿಬಾಬಾ ಮತ್ತು ದೇವರ ಆಶೀರ್ವಾದವೇ ಹೊರತು ನನ್ನದಲ್ಲ ಎನ್ನುತ್ತಾರೆ. ಲತಾ ಮಂಗೇಶ್ಕರ್ ಅವರಿಗೆ 1969 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Share