Connect with us


      
ಕರ್ನಾಟಕ

ಸಾರ್.. ನಾನು ಸಿಎಂ ಆದ್ರೆ, ನಿಮ್ಮ ಸರ್ಕಾರವೇ ಬರೋದಿಲ್ಲ…

Iranna Anchatageri

Published

on

ವಿಧಾನಸಭೆ/ಬೆಂಗಳೂರು: ಮಾರ್ಚ್ 08 (ಯು.ಎನ್.ಐ.) ಬಜೆಟ್ ಮೇಲಿನ ಚರ್ಚೆಗೂ ಮುನ್ನ ನಾಯಕರು ಕಾಲೆಳೆದುಕೊಂಡ ಪ್ರಸಂಗ ಇಂದು ವಿಧಾನಸಭೆಯಲ್ಲಿ ನಡೆಯಿತು. ಸಿದ್ದರಾಮಯ್ಯ ಅವರನ್ನು ಕಾಯುತ್ತಾ ಆಡಳಿತ ಪಕ್ಷದವರು ಒಂದು ಗಂಟೆಯಿಂದ ಕಾಯುತ್ತಾ ಕುಳಿತಿದ್ದೇವೆ. ಹಾಗಾಗಿ ಅರ್ಧ ಗಂಟೆ ನಿಮ್ಮ ಭಾಷಣ ಮೊಟಕುಗೊಳಿಸಿ ಎಂದು ಯತ್ನಾಳ್ ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಯು.ಟಿ ಖಾದರ್, ಇನ್ನೂ ನಾಲ್ಕು ಗಂಟೆ ಬೇಕಾದ್ರೂ ವಿರೋಧ ಪಕ್ಷದ ನಾಯಕರು ಮಾತಾಡ್ತಾರೆ ಅಂತ ಹೇಳಿದರು. ಸಿದ್ದರಾಮಯ್ಯ ಬೆಂಬಲಿಗರು ಅಷ್ಟೇ ಬಂದಿದ್ದಾರೆ, ಉಳಿದವರು ಕಾಣುತ್ತಿಲ್ಲ ಅಂತ ಡಿಕೆಶಿ ಬಣದವರನ್ನು ಯತ್ನಾಳ್ ಕಾಲೆಳೆದರು. ಈ ಯತ್ನಾಳ್ ಅವರು ಸರಿ.. ನೀವು ಮಿನಿಸ್ಟರೂ ಆಗಲಿಲ್ಲ, ಚೀಫ್ ಮಿಸ್ಟರ್ ಕೂಡ ಆಗಲಿಲ್ಲ. ಸಿಎಂ ಆಗಿದ್ರೆ ಪರವಾಗಿರಲಿಲ್ಲ, ನೀವು ಎಷ್ಟು ಬೇಕಾದ್ರೂ ಮಾತಾಡಿ ಅಂತ ಸಿದ್ದರಾಮಯ್ಯ ಕುಹಕ ಮಾಡಿದರು.

ಸಾರ್.. ನಾನು ಸಿಎಂ ಆದ್ರೆ, ನಿಮ್ಮ ಸರ್ಕಾರವೇ ಬರೋದಿಲ್ಲ.. 20 ವರ್ಷ ನಾನೇ ಸಿಎಂ ಆಗಿರ್ತೀನಿ ಅಂತ ಯತ್ನಾಳ್ ಸಮಜಾಯಿಷಿ ನೀಡಿದರು.  ಏನಪ್ಪ ಅಂತ ಸಿದ್ದರಾಮಯ್ಯ ಮತ್ತೊಮ್ಮೆ ಕೇಳಿದಾಗ, ಯತ್ನಾಳ್ ಅವರು 20 ವರ್ಷ ಸಿಎಂ ಆಗ್ತಾರಂತೆ ಅಂತ ವಿಪಕ್ಷ ಉಪನಾಯಕ ಖಾದರ್ ಹೇಳಿದರು. ಹೂ ಬಿಡಪ್ಪ, ಅದಕ್ಕೇ ಆಗಲಿಲ್ಲ ಪಾಪ.. ಅದಕ್ಕೆ 20 ವರ್ಷ ಕೂತ್ಕೊಬಿಡ್ತೀಯಾ ಅಂತ ಮಾಡಿಲ್ಲ ಎಂದು ಸಿದ್ದರಾಮಯ್ಯ ಉರಿಯೋ ಬೆಂಕಿಗೆ ತುಪ್ಪ ಸುರಿದರು.

ನಮ್ಮದು ಎಲ್ಲಾ ಅವಕಾಶ ಹೋಯ್ತು. ಮಂತ್ರಿ ಮಾಡಿದ್ರೆ, ಮುಂದೆ ಮುಖ್ಯಮಂತ್ರಿ ಆಗಬಹುದು ಅಂತ ಅದೂ ಮಾಡ್ತಿಲ್ಲ ಅಂತ ಸ್ವಪಕ್ಷೀಯರ ವಿರುದ್ಧ ಕೆಂಡಕಾರಿ ಯತ್ನಾಳ್ ಅಸಹನೆ ತೋಡಿಕೊಂಡರು. ನೀವು ನನ್ನ ಬಗ್ಗೆ ಅಪಾರ ಗೌರವ ಪ್ರೀತಿ ಇದೆ ಅದಕ್ಕೆ ನಿಮ್ಗೆ ಧನ್ಯವಾದಗಳು ಎಂದ ಯತ್ನಾಳ್ ಹೇಳಿದರು.

ಪಾಪ ಅಶೋಕ್ ಅವರಿಗೆ ಅಲ್ಲಿರೋ ಭಿನ್ನಾಭಿಪ್ರಾಯಗಳನ್ನ ಹೇಳೋಕಾಗಲ್ಲ, ಅದಕ್ಕೆ ಈ ಕಡೆದು ಹೇಳ್ತಿದ್ದಾರೆ ಎಂದ ಸಿದ್ದರಾಮಯ್ಯ ಅಶೋಕ್ ಅವರನ್ನು ಕೆಣಕಿದರು. ನಾವು, ಸಿಎಂ ಚೆನ್ನಾಗಿದ್ದೀವಿ ನಿಮಗೆ ಗೊತ್ತಿದೆ.. ನಿಮ್ಮ (ಸಿದ್ದು, ಡಿಕೆಶಿ) ನಡುವಿನ ಗೊಂದಲದ ಬಗ್ಗೆ ದಿನಾ ಮಾಧ್ಯಮದವರು ಬರೀತಿದಾರೆ.. ಬೇಕು ಅಂತಾ ಬರೀತಿದಾರೋ, ಬೇಡ ಅಂತ ಬರೀತಿದಾರೋ ಗೊತ್ತಿಲ್ಲ ಎಂದ ಅಶೋಕ್.

ನೀನೇ ಬೇಕು ಅಂತ ಬರೆಸ್ತಿದ್ದೀಯೇನೋ ಗೊತ್ತಿಲ್ಲ.  ಪತ್ರಿಕೆ, ಟಿವಿಲೆಲ್ಲ ನೀನೇ ಬರೆಸ್ತಿದ್ದೀಯೇನೋ ಎಂಬ ಅನುಮಾನ ಹುಟ್ಟಿದೆ ಎಂದು ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದರು. ನನಗೂ, ಶಿವಕುಮಾರ್ ಹಾಗೂ ಬೇರೆಯವರ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ದೇಶಪಾಂಡೆ ಜೊತೆ ಚೆನ್ನಾಗಿದ್ದೀರಾ? ನಾವೇ ಸರ್ಟಿಫಿಕೇಟ್ ಕೊಡ್ತೀವಿ, ಆದ್ರೆ ಅವರ ಜೊತೆಗೂ ಇಲ್ಲ‌ಬಿಡಿ. ತೊಟ್ಟು ಹುಳಿ ಬಿದ್ರೆ ಸಾಕು ಒಡೆದೋಗುತ್ತೆ ಅಂತ ಮತ್ತೆ ಅಶೋಕ್ ಸಿದ್ದರಾಮಯ್ಯ ಅವರ ಕಾಲೆಳೆದ್ರು.

ತೀಟೆ ಮಾಡೋದಕ್ಕೆ ಸಿದ್ದರಾಮಯ್ಯ ಒಬ್ರೆ ಸಾಕು. ಗಾಂಭೀರ್ಯವಾಗಿ ಚರ್ಚೆ ಮಾಡಿ. ನಿನ್ನೆಯಿಂದ ಅಂಕಿ ಸಂಖ್ಯೆ, ನಿಮ್ಮ ಚರ್ಚೆ ಮಾಡಿ ಅಂತ ಸಲಹೆ ನೀಡಿದ ಸೋಮಣ್ಣ. ಹಾಗಾದ್ರೆ ಕೂತ್ಗೊಳ್ಲಾ ಅಂತ ಕೇಳಿದ ಸಿದ್ದರಾಮಯ್ಯ. ನೀನು ಏನ್ ಹೇಳಿದ್ಯೋ ನನಗೆ ಗೊತ್ತಿಲ್ಲ ಅಂತ ಹೇಳಿ ಬಜೆಟ್ ಭಾಷಣ ಆರಂಭಿಸಿದ ಸಿದ್ದರಾಮಯ್ಯ.

Share