Connect with us


      
ಬೆಂಗಳೂರು

ವಿಧಾನ ಪರಿಷತ್ ಚುನಾವಣೆ: ನಾಳೆಯಿಂದ ಮದ್ಯ ಮಾರಾಟಕ್ಕೆ ಬ್ರೇಕ್

Vanitha Jain

Published

on

ಬೆಂಗಳೂರು ಗ್ರಾಮಾಂತರ, ಡಿಸೆಂಬರ್ 07, (ಯು.ಎನ್.ಐ): ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ -2021ರ ಮತದಾನ ಹಾಗೂ ಮತ ಎಣಿಕೆ ಪ್ರಯುಕ್ತ ಮದ್ಯ ಮಾರಾಟ ನಿಷೇಧಿಸಿ ಹಾಗೂ ಎಲ್ಲಾ ವಿಧದ ಮದ್ಯ ಮಾರಾಟ ಸನ್ನದುಗಳನ್ನು ಮುಚ್ಚಿಸಿ, ಶುಷ್ಕ ದಿನವೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರು ಘೋಷಿಸಿದ್ದಾರೆ.

ಎಲ್ಲಾ ಕೆಎಸ್‍ಬಿಸಿಎಲ್ ಡಿಪೋಗಳು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಡಿಸೆಂಬರ್ 8ರ ಮಧ್ಯರಾತ್ರಿ 12 ಗಂಟೆಯಿಂದ ಡಿಸೆಂಬರ್ 10ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ದೇವನಹಳ್ಳಿ ಕೆಎಸ್‍ಬಿಸಿಎಲ್ ಡಿಪೋ ಹೊರತುಪಡಿಸಿ, ದೇವನಹಳ್ಳಿ ಪುರಸಭೆ ವ್ಯಾಪ್ತಿ ಪ್ರದೇಶದಲ್ಲಿ ಮಾತ್ರ ಡಿಸೆಂಬರ್ 13ರ ಮಧ್ಯರಾತ್ರಿ 12 ಗಂಟೆಯಿಂದ ಡಿಸೆಂಬರ್ 14ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ, ಶುಷ್ಕ ದಿವಸಗಳೆಂದು ಘೋಷಿಸಲಾಗಿದೆ.

ನಿಷೇಧಿತ ಅವಧಿಯಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 135(ಸಿ) ಅನ್ವಯ ಎಲ್ಲಾ ರೀತಿಯ ಮದ್ಯದ ಅಂಗಡಿಗಳಲ್ಲಿ, ಬಾರ್, ಡಿಪೋ ಅಥವಾ ಇನ್ನಾವುದೇ ಸ್ಥಳದಲ್ಲಿ ಮದ್ಯ ಮಾರಾಟ, ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದು ಹಾಗೆಯೇ ಮದ್ಯಪಾನ ಮಾಡುವುದಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

Share