Connect with us


      
ಸಾಮಾನ್ಯ

ಲಿಬಿಯಾ ತಪ್ಪಿದ್ದೆಲ್ಲಿ ? ತಪ್ಪಿದ್ದಕ್ಕೆ ಪರಿಹಾರವಿದೆಯೇ ?

Kumara Raitha

Published

on

ಉದಯ ಇಟಗಿ

ಅಂಕಣ: ಲಿಬಿಯಾ ಕಥನ
ಗಡಾಫಿಯ ಹತ್ಯೆಯಾದ ನಂತರ ಇಡೀ ಜಗತ್ತು ಲಿಬಿಯಾದತ್ತ ಕುತೂಹಲದ ಕಂಗಳನ್ನುನೆಟ್ಟುಕುಳಿತಿತ್ತು. ಒಬ್ಬ ಬಲಿಷ್ಠ ಸರ್ವಾಧಿಕಾರಿಯ ಹಿಡಿತದಿಂದ ಲಿಬಿಯಾಪಾರಾಯಿತು. ಅವನ ಶೋಷಣೆಯಿಂದ ಲಿಬಿಯನ್‍ರು ಮುಕ್ತಿ ಹೊಂದಿದರು. ಅಲ್ಲಿ ಪ್ರಜಾರಾಜ್ಯಸ್ಥಾಪನೆಯಾಗಿ ಇನ್ನು ಮುಂದೆ ಲಿಬಿಯನ್‍ರಿಗೆ ಒಳ್ಳೆಯ ದಿನಗಳು ಬರಲಿವೆ.

ಲಿಬಿಯಾ ಬಹಳ ಬೇಗನೆ ಅಭಿವೃದ್ಧಿಯ ಪತಾಕೆಯನ್ನು ಹಾರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡುತ್ತದೆ ಎಂಬೆಲ್ಲಾ ನಿರೀಕ್ಷೆಗಳನ್ನಿಟ್ಟುಕೊಂಡು ಇಡೀ ಜಗತ್ತು ಕಾಯುತ್ತಾ ಕೂತಿತ್ತು. ಆದರೆ ದುರಾದೃಷ್ಟವಶಾತ್ ಗಡಾಫಿ ಸತ್ತ ದಿನದಿಂದ ಲಿಬಿಯಾದಲ್ಲಿ ಅರಾಜಕತೆ, ಅಶಾಂತಿ ನೆಲೆಯೂರುತ್ತಾ ಹೋಯಿತು. ಹಾಗೆ ನೋಡಿದರೆ ಗಡಾಫಿ ಸತ್ತ ಮೇಲೆ ಲಿಬಿಯಾ ತನ್ನ ಸಂಕ್ರಮಣದ ಕಾಲಘಟ್ಟವನ್ನು ಒಂದು ಸುಸಂಬದ್ಧ, ಸುಶಾಂತ ಕಾಲವನ್ನಾಗಿ ಮಾರ್ಪಡಿಸಿ ಅಭಿವೃದ್ಧಿಯಪಥದತ್ತ ಹೆಜ್ಜೆಹಾಕಬಹುದಿತ್ತು. ಲಿಬಿಯಾದಲ್ಲಿ ಅಪಾರ ತೈಲ ಸಂಪತ್ತಿತ್ತು. ಯೂರೋಪ್ದೇಶಗಳಿಗೆ ಹತ್ತಿರವಾಗಿತ್ತು. ಮೇಲಾಗಿ ಅದೇ ಹಾದಿಯಲ್ಲಿ ಸಾಗಿದ ಅಕ್ಕಪಕ್ಕದರಾಷ್ಟ್ರಗಳ ಉದಾಹರಣೆಗಳಿದ್ದವು. ಹಾಗಿದ್ದೂ ಲಿಬಿಯಾ ಅಧೋಗತಿಗೆ ಇಳಿಯಿತ್ತಾ ಹೋಯಿತು. ಯಾಕೆ? ಇದಕ್ಕೆಲ್ಲಾ ಏನುಕಾರಣ? ಯಾರುಹೊಣೆ? ಲಿಬಿಯಾ ತಪ್ಪಿದ್ದೆಲ್ಲಿ? ಎಂಬೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಏಳುವದು ಸಹಜ. ಈ ಎಲ್ಲ ಪ್ರಶ್ನೆಗಳನ್ನು ಕೇಳುವದಕ್ಕಿಂತ ಮುಂಚೆ ನಾವು ಇವತ್ತಿನ ಸ್ಥಿತಿ-ಗತಿಯನ್ನು ದೊರೆ ಇದ್ರಿಸ್ಮತ್ತು ಗಡಾಫಿ ಕಾಲದಲ್ಲಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿಟ್ಟು ಪರಿಶೀಲಿಸಬೇಕಾಗುತ್ತದೆ.

ನಮಗೆಲ್ಲಾ ಗೊತ್ತಿರುವಂತೆ 1943ರವರೆಗೆ ಲಿಬಿಯಾ ಇಟ್ಯಾಲಿಯನ್ರ ಅಧೀನಕ್ಕೆ ಒಳಪಟ್ಟಿತು. ಆದರೆ ಎರಡನೇ ಮಹಾಯುದ್ಧದಲ್ಲಿ ಇಟಲಿ ಸೋತ ನಂತರ ಲಿಬಿಯಾ ಒಕ್ಕೂಟರಾಷ್ಟ್ರಗಳ ಅಧೀನಕ್ಕೆ ಒಳಪಟ್ಟಿತು. ಮುಂದೆ ಅಂದರೆ ಡಿಸೆಂಬರ್ 24, 1951 ರಂದು ಲಿಬಿಯಾ ಈ ಎಲ್ಲ ದಾಸ್ಯದಿಂದ ಬಿಡುಗಡೆ ಹೊಂದಿ ತನ್ನನ್ನು ಒಂದು ಸ್ವತಂತ್ರರಾಷ್ಟ್ರವೆಂದು ಘೋಷಿಸಿಕೊಂಡಿತು. ಅಲ್ಲಿಂದಾಚೆ 1969 ರ ತನಕ ಅಲ್ಲಿಯ ರಾಜ ಇದ್ರಿಸ್ ಎಂಬವನ ಅಧೀನಕ್ಕೆಒಳಪಟ್ಟಿತು. ಲಿಬಿಯಾದ ಮೊಟ್ಟಮೊದಲ ಅರಸನಾಗಿ ಅಧಿಕಾರ ಸ್ವೀಕರಿಸಿದ ಇದ್ರಿಸ್ ಅಷ್ಟೊಂದು ಸಮರ್ಥನಾಗಿರಲಿಲ್ಲ. ಒಕ್ಕೂಟರಾಷ್ಟ್ರಗಳ ಕೈಗೊಂಬೆಯಾಗಿದ್ದ ಆತ ಅವರು ಹೇಳಿದ್ದಕ್ಕೆಲ್ಲಾ ಸುಮ್ಮನೆ ತಲೆಆಡಿಸುತ್ತಿದ್ದ. ಅನೇಕ ಬುಡಕಟ್ಟು ಜನಾಂಗಗಳನ್ನು ಹೊಂದಿದ್ದ ಲಿಬಿಯಾದ ಎಲ್ಲಜನತೆಯನ್ನುತೃಪ್ತಿಪಡಿಸುವಲ್ಲಿ ಆತ ಯಶಸ್ವಿಯಾಗಲಿಲ್ಲ. ಮೇಲಾಗಿ ಆತ ಎಣ್ಣೆಬಾವಿಗಳಿಂದ ಎಣ್ಣೆತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಮೇಲೆ ಸಂಪರ್ಕಕ್ಕನುಗುಣವಾಗಿ ಅವಲಂಬಿತನಾದ. ಇದನ್ನು ದುರುಪಯೋಗಪಡೆದುಕೊಂಡ ಹೊರದೇಶಿಯಕಂಪನಿಗಳು ತಮ್ಮ ಅಗತ್ಯಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯದರವನ್ನು ನಿಗದಿಗೊಳಿಸಿ ಎಣ್ಣೆವ್ಯಾಪಾರದಲ್ಲಿ ಅರ್ಧಲಾಭವನ್ನು ಹೊಡೆಯುತ್ತಿದ್ದವು. ತೈಲಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟಕ್ಕೀಡಾಯಿತು.

ಆಗ ಇಲ್ಲಿನ ಪ್ರಜೆಗಳು ಹೀಗಾದರೆ ದೇಶ ಉದ್ಧಾರವಾಗುವದು ಯಾವಾಗ? ಅದರ ಬದಲು ದೇಶವನ್ನು ಒಡೆದು ಮೂರುಭಾಗಗಳನ್ನಾಗಿ ಮಾಡಿಕೊಟ್ಟುಬಿಡಿ. ನಮಗೆ ಯಾರು ಬೇಕೋ ಅವರನ್ನು ಅರಸರನ್ನಾಗಿ ಮಾಡಿ ದೇಶ ನಡೆಸುತ್ತೇವೆ ಎಂದು ಹೇಳುವದರ ಮೂಲಕ ಮೊಟ್ಟಮೊದಲಿಗೆ ವಿಭಜನೆಯ ಕೂಗನ್ನು ಹಾಕಿದ್ದರು. ಈ ಕೂಗು1969 ರವರೆಗೆ ಕೇಳಿಸುತ್ತಲೇಇತ್ತು. ಆದರೆ 1969 ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನುಮರು ಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆಹಾಕಿದ. ಬೇರೆ ದಾರಿಯಿಲ್ಲದೆ ಹೊರದೇಶಿ ಕಂಪನಿಗಳು ಬಗ್ಗಬೇಕಾಯಿತು. ಪರಿಣಾಮವಾಗಿ ಲಿಬಿಯಾ ಹೇರಳಲಾಭವನ್ನು ಗಳಿಸತೊಡಗಿತು.

ಲಿಬಿಯಾದಲ್ಲಿ ಹೇರಳ ತೈಲಸಂಪನ್ಮೂಲವಿತ್ತು. ಆದರೆ ಜನಸಂಖ್ಯೆ ಕಡಿಮೆಯಿತ್ತು. ಇದನ್ನರಿತ ಗಡಾಫಿ ತೈಲಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ರ ಉದ್ದಾರಕ್ಕಾಗಿ ಚೆಲ್ಲಿದ. ಆ ಮೂಲಕ ಗಡಾಫಿ ಸಹಜವಾಗಿ ಲಿಬಿಯನ್ರಿಗೆ ಒಬ್ಬಭರವಸೆಯ ನಾಯಕನಾಗಿ ಕಂಡನಲ್ಲದೇ ಈದೇಶವನ್ನು ನಡೆಸಲು ಇವನೇ ಸಮರ್ಥನಾಯಕನೆಂದು ತೀರ್ಮಾನಿಸಿ ಜನ ತಮ್ಮ ಸಂಪೂರ್ಣ ಬೆಂಬಲವನ್ನು ಆತನಿಗೆ ಸೂಚಿಸಿಯೂಬಿಟ್ಟರು. ಆ ಮೂಲಕ ಲಿಬಿಯಾದಲ್ಲಿ ಎದ್ದಿದ್ದ ವಿಭಜನೆಯ ಕೂಗುತಾನೇ ತಾನಾಗಿ ಹಿಂದೆಸರಿಯಿತು. ಎಲ್ಲ ನಾಯಕರಿಗೆ ಪರ ಮತ್ತು ವಿರೋಧಿಬಣಗಳಿರುವಂತೆ ಗಡಾಫಿಗೂ ಒಂದಷ್ಟು ಜನವಿರೋಧಿಗಳಿದ್ದರು. ಆದರೆ ಅವರ ಸಂಖ್ಯೆ ಕೇವಲ ಶೇಕಡಾ ಒಂಬತ್ತರಷ್ಟಿತ್ತು. ಮೇಲಾಗಿ ಗಡಾಫಿ ಒಬ್ಬ ಜಾತ್ಯಾತೀತ ಅರಸನಾಗಿದ್ದು ಆತ ಎಲ್ಲರನ್ನೂ ಸಮವಾಗಿ ಕಾಣುತ್ತಿದ್ದ. ಜೊತೆಗೆ ಲಿಬಿಯನ್ ಹೆಣ್ಣುಮಕ್ಕಳ ಮಕ್ಕಳ ವಿಷಯದಲ್ಲಿ ಉದಾರತೆಯನ್ನು ಅನುಸರಿಸುತ್ತಿದ್ದುದು ಮತ್ತು ಅವರಿಗೆ ಸಮಾಜದ ಎಲ್ಲ ರಂಗಗಳಲ್ಲೂ ಅವಕಾಶ ಕಲ್ಪಿಸಿದ್ದು ಇಲ್ಲಿನ ಕೆಲವು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇಂಥ ಒಂದಿಷ್ಟು ಜನರನ್ನು ಮುಂದಿಟ್ಟುಕೊಂಡು ಲಿಬಿಯಾದಲ್ಲಿ ಕ್ರಾಂತಿಯೆಬ್ಬಿಸಿ ಕುತಂತ್ರದಿಂದ ಆತನನ್ನು ಹೇಗೆ ಮತ್ತು ಯಾವ ಕಾರಣಕ್ಕೆ ಮುಗಿಸಿದರು ಎಂಬುದನ್ನು ನಾನು ನಿಮಗೆ ಈಹಿಂದೆ ಹೇಳಿದ್ದೇನೆ.

ಇನ್ನು ಇಲ್ಲಿಯ ಸಾಮಾಜಿಕ ವ್ಯಸ್ಥೆಯ ಬಗ್ಗೆ ಹೇಳುವದಾದರೆ ನಾನು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನನ್ನ ಲಿಬಿಯನ್ಸ ಹೋದ್ಯೋಗಿಯೊಬ್ಬ ಒಮ್ಮೆ ಹೀಗೇ ನನ್ನ ಜೊತೆ ಮಾತನಾಡುತ್ತಾ ಹೇಳಿದ್ದ; ಗಡಾಫಿ ಸತ್ತಮೇಲೆ ಇಲ್ಲಿಯ ಜನ ಅವರವರೇ ಹೊಡೆದಾಡಿಕೊಂಡು ಸಾಯದಿದ್ದರೆ ಕೇಳಿ ಎಂದು. ನಾನು ಕುತೂಹಲ ತಡೆಯಲಾರದೆ “ಯಾಕೆ?” ಎಂದುಕೇಳಿದ್ದೆ. ಅದಕ್ಕವನು “ಲಿಬಿಯಾ ಅನೇಕ ಬುಡಕಟ್ಟುಗಳಿರುವ ರಾಷ್ಟ್ರ. ಈ ಎಲ್ಲ ಬುಡಕಟ್ಟುಗಳನ್ನು ಗಡಾಫಿ ಅದ್ಹೇಗೊ ಸರಿದೂಗಿಸಿಕೊಂಡು ಹೋಗುತ್ತಿದ್ದಾನೆ. ಆದರೆ ಅವನ ನಂತರ ಬರುವವರು ಹೀಗೆ ಇರುತ್ತಾರೆ ಎಂದು ಹೇಳಲು ಬರುವದಿಲ್ಲ.” ಎಂದು ಹೇಳಿದ್ದ.

ಅವನ ಮಾತು ಇವತ್ತು ಅಕ್ಷರಶಃ ನಿಜವಾಗಿದೆ. ಗಡಾಫಿಯ ನಂತರ ಇಲ್ಲೀಗ ಎಲ್ಲ ಬುಡಕಟ್ಟುಗಳು ಎದ್ದು ಕುಳಿತಿವೆ. ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಒಬ್ಬರ ಮೇಲೊಬ್ಬರು ದ್ವೇಷ ಕಾರುತ್ತಾ ಜನರು ಅವರವರೇ ಬಡಿದಾಡಿಕೊಂಡು ಸಾಯುತ್ತಿದ್ದಾರೆ. ಈ ಪ್ರಕ್ರಿಯೆ ಗಡಾಫಿ ಸತ್ತ ಮಾರನೆಯ ದಿನದಿಂದಲೇ ಆರಂಭವಾಯಿತು. ಅದೂ ಮೊಟ್ಟಮೊದಲಿಗೆ ಗಡಾಫಿ ವಿರುದ್ಧ ಬಂಡೆದ್ದ ನೆಲವಾದ ಬೆಂಗಾಜಿಯಲ್ಲಿ. ಹಾಗೆ ಶುರುವಾದ ಬಡಿದಾಟ ನಿಧಾನವಾಗಿ ಪ್ರಮುಖ ನಗರಗಳಾದ ಟ್ರಿಪೋಲಿ, ಜಾವಿಯಾ, ಮಿಸ್ರತಾ, ಸೆಭಾ ಇನ್ನೂ ಮುಂತಾದ ನಗರಗಳಿಗೆ ಹಬ್ಬಿತು. ಆಗ ನ್ಯಾಟೋ ಇನ್ನೂ ಲಿಬಿಯಾದಲ್ಲಿಯೇ ಇತ್ತು. ಮನಸ್ಸು ಮಾಡಿದ್ದರೆ ನ್ಯಾಟೋ ಇದಕ್ಕೊಂದು ಮಂಗಳವನ್ನು ಆಗಲೇ ಹಾಡಬಹುದಿತ್ತು. ಆದರೆ ಹಾಗೆ ಮಾಡದೆ ಈ ನಗರಗಳ ಮೇಲೆ ಬಾಂಬ್ದಾಳಿ ನಡೆಸಿ ತಾತ್ಕಾಲಿಕವಾಗಿ ಅವರನ್ನು ಹತ್ತಿಕ್ಕಿ ತಮ್ಮ ಒಪ್ಪಂದಗಳಿಗೆ ಸಹಿ ಹಾಕಿದ NTC (National Transitional Council) ಹಂಗಾಮಿ ಸರಕಾರವನ್ನು ರಾಜಧಾನಿಯಲ್ಲಿ ಕೂರಿಸಿ ಹೊರಟೇಬಿಟ್ಟಿತು. ಹಾಗೆ ಸರಕಾರವನ್ನು ರಚಿಸುವಾಗ ಒಂದು ದೊಡ್ಡ ತಪ್ಪಾಯಿತು. ಅದೇನೆಂದರೆ ಕ್ರಾಂತಿಯ ಸಮಯದಲ್ಲಿ ಯುದ್ಧಭೂಮಿಯಲ್ಲಿ ಭಾಗವಹಿಸಿದ ಬಹಳಷ್ಟು ಜನಕ್ಕೆ ಮುಖ್ಯಸ್ಥಾನಗಳು ಸಿಗದೇಹೋದವು. ಬದಲಿಗೆ ಹೊರದೇಶಗಳಲ್ಲಿ ಕೆಲಸಮಾಡಿಕೊಂಡಿದ್ದ ಶ್ರೀಮಂತಲಿ ಬಿಯನ್‍ರನ್ನು ಕರೆತಂದು ದೊಡ್ಡದೊಡ್ಡ ಹುದ್ದೆಗಳಲ್ಲಿ ಕೂರಿಸಲಾಯಿತು. ಇದರಿಂದ ಸಹಜವಾಗಿ ಯುದ್ಧದಲ್ಲಿ ಭಾಗವಹಿಸಿದ ಅನೇಕರು ಅತೃಪ್ತಗೊಂಡರು. ಜೊತೆಗೆ ಅಲ್ಲಿ ಬಹಳಷ್ಟು ಜನ ಗಡಾಫಿ ಬೆಂಬಲಿಗರಿದ್ದರು. ಅವರನ್ನು ಸಹ ಸಂಪೂರ್ಣವಾಗಿ ಕಡೆಗಣಿಸುವದರ ಮೂಲಕ ಅವರಲ್ಲೂ ಅಸಮಧಾನದ ಹೊಗೆಯನ್ನೆಬ್ಬಿಸಿದರು.

ಈ ಎಲ್ಲದರ ಜೊತೆಗೆ ನ್ಯಾಟೋವನ್ನು ಕರೆಸಿಕೊಂಡುದರ ಬಗ್ಗೆ ಅವರವರಲ್ಲಿ ಕಿತ್ತಾಟ ಶುರುವಾಯಿತು. ಹಾಗೆ ನೋಡಿದರೆ ನ್ಯಾಟೋ ಲಿಬಿಯಾಕ್ಕೆ ಬಂದಿದ್ದು ಕೊನೆಘಳಿಗೆಯಲ್ಲಿ. ಅಂದರೆ ಹೆಚ್ಚುಕಮ್ಮಿ ಮುಕ್ಕಾಲುಪಾಲು ಲಿಬಿಯಾ ಗಡಾಫಿಯ ಕೈತಪ್ಪಿ ಹೋದಮೇಲೆ. ಆಗ ಅಮೆರಿಕಾ ಕೆಲವು ಮುಖ್ಯನಾಯಕರನ್ನು ಕರೆದು ನೀವು ನ್ಯಾಟೊದ ಸಹಾಯ ತೆಗೆದುಕೊಳ್ಳಿ. ಇದಕ್ಕೊಂದು ಅಂತ್ಯಹಾಡಿಬಿಡೋಣ ಎಂದು ಹೇಳಿತು. ಅದಕ್ಕವರು ಹಿಂದುಮುಂದು ನೋಡದೆ ಒಪ್ಪಿಗೆಯನ್ನು ಸೂಚಿಸಿದರು. ಇದು ಕೆಲವರನ್ನು ಕೆರಳಿಸಿತು. ನಾವು ಗೆಲ್ಲುವದು ಬಹುತೇಕ ಖಚಿತವಾದ ಸಮಯದಲ್ಲಿ ನ್ಯಾಟೋವನ್ನು ಕರೆಸಿಕೊಂಡಿದ್ದೇಕೆ? ನಾವು ನಾವೇ ಸೇರಿಕೊಂಡು ಗಡಾಫಿಯನ್ನು ಹೊಡೆದುರುಳಿಸಬಹುದಿತ್ತಲ್ಲ? ಈಗ ನೋಡಿ ನಾವುನ್ಯಾಟೋದ ಒಪ್ಪಂದಗಳಿಗೆ ಅನವಶ್ಯಕವಾಗಿ ತಲೆಬಾಗಬೇಕಿದೆ ಹಾಗೂ ಬಿಟ್ಟಿಯಾಗಿ ಅವರಿಗೆ ತೈಲವನ್ನು ಕೊಡಬೇಕಿದೆ ಎಂದು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಅಸಹನೆ ಅವರನ್ನು ಬಾಧಿಸುತ್ತಲೇ ಇತ್ತು. ಒಂದು ದಿನ ಅದೇ ರೊಚ್ಚಿನಲ್ಲಿ ಹೋಗಿ ಅಮೆರಿಕಾದ ರಾಯಭಾರಿಯನ್ನೇ ಕೊಂದುಹಾಕಿಬಿಟ್ಟರು.

ಕ್ರಾಂತಿಯ ನಂತರ ಅಧಿಕಾರ ವಹಿಸಿಕೊಂಡ NTC ಹಂಗಾಮಿ ಸರಕಾರ ಇತ್ತ ಯುದ್ಧ ಮುಗಿದ ಮೇಲಿನ ತಕ್ಷಣದ ಅವಶ್ಯಕತೆಗಳನ್ನು ಪೂರೈಸುವದರಲ್ಲಿ ಮಗ್ನವಾದರೆ ಅತ್ತ ಅಧಿಕಾರ ಹಾಗೂ ಹಣದದಾಹದಿಂದ ತಹತಹಿಸುತ್ತಿದ್ದ ಕೆಲವು ಪ್ರಜಾಸೇನೆ ಸಂಘಟನೆಗಳು ಹುಟ್ಟಿಕೊಂಡು ಅಲ್ಲಿ ಸ್ಥಾಪನೆಯಾಗಿದ್ದ ಹಂಗಾಮಿ ಸರಕಾರಕ್ಕೆ ತೊಂದರೆ ಕೊಡಲಾರಂಭಿಸಿದವು. ಅದರಲ್ಲಿ ಲಿಬಿಯಾಡಾನ್, ಸನ್ರೈಸ್, ಜಿಂತಾನ್, ಆಲ್ಅನ್ಸಾ ಶೆರಿಯಾ ಎಂಬ ಸಂಘಟನೆಗಳು ಮುಖ್ಯವಾದವು. ಹಣದ ಅವಶ್ಯಕತೆ ಬಿದ್ದಾಗ ಹಾಗೂ ತಾವು ಹೇಳಿದಂತೆ ಕೇಳದೆಹೋದಾಗ ಶಸ್ತ್ರಗಳ (ಬಂದೂಕು ಮತ್ತು ಗನ್ನುಗಳು) ಸಮೇತ ಬೆದರಿಕೆಯನ್ನೊಡ್ಡಿ ಸರಕಾರದಿಂದ ಹಣಕೀಳುವದು ಮಾಮೂಲು ದಂಧೆಯಾಯಿತು.

ಆಶ್ಚರ್ಯವೆಂದರೆ ಸರಕಾರ ಇಂಥವರನ್ನು ಬಗ್ಗುಬಡಿಯುವ ಬದಲು ದೇಶದಲ್ಲಿ ಶಾಂತಿಯನ್ನು ಕಾಪಾಡುವದಕ್ಕೋಸ್ಕರ ಇವರಿಗೆ ಹಣ ನೀಡುತ್ತಾ ಬಂತು. ಹಣ ಮಾಡುವದು ಇಷ್ಟೊಂದು ಸುಲಭವಾದ ಮೇಲೆ ದಿನ ಕಳೆದಂತೆ ಇತರ ಜನ ಒಬ್ಬರಾದ ಮೇಲೊಬ್ಬರು ತಮ್ಮದೇ ಒಂದಷ್ಟು ಸಂಘಟನೆಗಳನ್ನು ಹುಟ್ಟುಹಾಕಿ ಇವರಿಗೆ ಪೈಪೋಟಿ ಎಂಬಂತೆ ಅವರೂ ಸರಕಾರಕ್ಕೆ ತೊಂದರೆ ಕೊಡಲಾರಂಭಿಸಿದರು. ದುರಂತವೆಂದರೆ ಸರಕಾರ ಅವರಿಗೂ ಹಣ ನೀಡಿ ಅವರ ಬಾಯಿಯನ್ನು ಮುಚ್ಚಿಸುತ್ತಾ ಬಂತೇ ವಿನಃ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನೇ ಮಾಡಲಿಲ್ಲ. ಈ ಪ್ರಜಾಸೇನೆ ಸಂಘಟನೆಗಳು ಬರೀ ಪ್ರತಿಭಟನೆಕಾರರಾಗಿದ್ದರೆ ಅವರನ್ನು ಅದ್ಹೇಗೋ ಹತ್ತಿಕ್ಕಬಹುದಿತ್ತು. ಆದರೆ ಅವರ ಕೈಗೆ ಅಸ್ತ್ರಗಳು ಬಂದಿದ್ದವು. ಅವು ಹೇಗೆ ಬಂದವೆಂದರೆ ಫೆಬ್ರುವರಿ17, 2011ರ ಕ್ರಾಂತಿಯ ಸಮಯದಲ್ಲಿ ಈದೇಶದಲ್ಲಿ ಒಂದುದೊಡ್ಡ ಅವಘಡವೇ ನಡೆದುಹೋಯಿತು. ಕ್ರಾಂತಿಯ ಸಮಯದಲ್ಲಿ ಸಹಜವಾಗಿ ಎಲ್ಲೆಡೆ ಅರಾಜಕತೆಯುಂಟಾಗಿ ಯಾರೂ ಹೇಳುವವರು ಕೇಳುವವರು ಇಲ್ಲದಂತಾಯಿತು. ಅದೇ ಸಮಯದಲ್ಲಿ ಇನ್ನೇನು ಗಡಾಫಿ ಸೋತುಹೋಗುತ್ತಾನೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಜನರು ಟ್ರಿಪೋಲಿಯ ಪೋಲಿಷ್ಠಾಣೆಗಳಲ್ಲಿನ ಕಾವಲಿಲ್ಲದ ಶಸ್ತ್ರಾಗಾರದ ಮೇಲೆ ದಾಳಿ ಮಾಡಿ ಗನ್ನುಮತ್ತು ಬಂದೂಕುಗಳನ್ನು ವಶಪಡಿಸಿಕೊಂಡರು.

ಲೇಖಕರ ಪರಿಚಯ:

2000 ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದಾದ ಮೇಲೆ ಬೆಂಗಳೂರಿನ ವಿವಿಧ ಪ್ರತಿಷ್ಟಿತ ಕಾಲೇಜುಗಳಲ್ಲಿ ಏಳು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ತದನಂತರ ಲಿಬಿಯಾದ (ಉತ್ತರ ಆಫ್ರಿಕಾ) ಸೆಭಾ ವಿಶ್ವವಿದ್ಯಾನಿಲಯಕ್ಕೆ ಇಂಗ್ಲೀಷ್ ಉಪನ್ಯಾಸಕರಾಗಿ ಆಯ್ಕೆಗೊಂಡು 2007 ರಲ್ಲಿ ಅಲ್ಲಿಗೆ ಪಯಣ ಬೆಳೆಸಿದರು. ಅಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿ 2015 ರಲ್ಲಿ ಭಾರತಕ್ಕೆ ಮರಳಿದರು. ಸಧ್ಯ ಅವರು ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.
ಲಿಬಿಯಾದಲ್ಲಿರುವಾಗಲೇ ಅವರ ಬರವಣಿಗೆ ತೀವ್ರಗೊಂಡಿತು. ಪರಿಣಾಮವಾಗಿ ಅವರು ಅನೇಕ ಅರೇಬಿ ಕವನಗಳನ್ನು ಹಾಗೂ ವಿವಿಧ ಭಾಷೆಯ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಲಿಬಿಯಾದ ಕ್ರಾಂತಿ ಹಾಗೂ ಅಲ್ಲಿನ ಅನುಭವಗಳನ್ನು ಕುರಿತಂತೆ 2018 ರಲ್ಲಿ ಹೊರಬಂದ ಇವರ ಚೊಚ್ಚಲ ಕೃತಿ “ಲಿಬಿಯಾ ಡೈರಿ” ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಜೊತೆಗೆ ಇವರ ಇನ್ನೆರೆಡು ಕೃತಿಗಳಾದ “ಶೇಕ್ಸ್ಪಿಯರನ ಶ್ರೀಮತಿ” ಮತ್ತು ಅಸ್ಸಾಮಿ ಕವನಗಳ ಅನುವಾದಿತ ಕವನ ಸಂಕಲನ “ನನ್ನ ಚಹಾ ತೋಟ ಮತ್ತು ನೀಲಿಹಕ್ಕಿ” ಹೊರಬಂದಿವೆ.

Share