Connect with us


      
ಕರ್ನಾಟಕ

ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ – ಗೋಪಾಲಯ್ಯ

Iranna Anchatageri

Published

on

ಬೆಳಗಾವಿ (ಸುವರ್ಣ ವಿಧಾನಸೌಧ) ಡಿಸೆಂಬರ್ 15 (ಯು.ಎನ್.ಐ.) ರಾಜ್ಯದಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಬೇಕಾಬಿಟ್ಟಿ ಮದ್ಯ ಮಾರಾಟವಾಗುವ ವಿಚಾರ ಇಂದು ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಯಾವ ಮಾನದಂಡದಡಿ ಹಾಗೂ ಎಷ್ಟು ಅಂಗಡಿಗಳಿಗೆ ಮದ್ಯ ಮಾರಾಟಕ್ಕೆ ಪರವಾನಿಗೆ ನೀಡಲಾಗಿದೆ ಎಂದು ರಾಯಚೂರು ಶಾಸಕ ಬಸವನಗೌಡ ದದ್ದಲ್, ಅಬಕಾರಿ ಸಚಿವರನ್ನು ಪ್ರಶ್ನೆ ಮಾಡಿದರು.

ಈ ಬಗ್ಗೆ ಉತ್ತರಿಸಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕಳೆದ ಮೂರು ವರ್ಷಗಳಲ್ಲಿ ಸಿಎಲ್-9 ಅಡಿ ಯಾವುದೇ ಪರವಾನಗಿ ನೀಡಿಲ್ಲ. ಈ ರೀತಿಯ ಪರವಾನಗಿ ನೀಡುವುದನ್ನು 1992ರಿಂದ ನಿಲ್ಲಿಸಲಾಗಿದೆ. ಆದರೆ, ಸಿಎಲ್-7 ಅಡಿ 2018-19ನೇ ಸಾಲಿನಲ್ಲಿ 159, 2018-19ರಲ್ಲಿ 206 ಹಾಗೂ 2020-21ರಲ್ಲಿ 203 ಮಳಿಗೆಗಳಿಗೆ ಪರವಾನಗಿ ನೀಡಲಾಗಿದೆ ಎಂದರು.

ಧಾರ್ಮಿಕ ಕ್ಷೇತ್ರಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ವಾಸಿಸುವ ಪ್ರದೇಶದಿಂದ 100 ಮೀಟರ್ ದೂರದಲ್ಲಿ ಮಳಿಗೆ ತೆರೆಯಲು ಸಿಎಲ್-7 ನಿಯಮದಡಿ ಪರವಾನಗಿ ನೀಡಲಾಗಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದು ಕಂಡುಬಂದರೆ ಕ್ರಮಗೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಸಚಿವರ ಉತ್ತರಕ್ಕೆ ತೃಪ್ತಿಯಾಗದ ದದ್ದಲ್, ಈವರೆಗೆ ನಿಯಮ ಉಲ್ಲಂಘಿಸಿದ ಯಾವ ಏಜೆನ್ಸಿಯನ್ನು ರದ್ದುಪಡಿಸಿದ್ದೀರಿ? ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಿದ ಬಡಪಾಯಿಗಳಿಗೆ ಶಿಕ್ಷೆಯಾಗುತ್ತಿದೆ. ಆದರೆ ಅಲ್ಲಿಗೆ ಸರಬರಾಜು ಮಾಡಿದವರಿಗೆ ಶಿಕ್ಷೆ ಆಗುತ್ತಿಲ್ಲ, ನಲ್ಲಿಗಳ ಮೂಲಕ ಮನೆ ಮನೆಗೆ ಪೂರೈಕೆ ಮಾಡಿ ಎಂದು ವ್ಯಂಗ್ಯಭರಿತ ಪ್ರಶ್ನೆ ಮಾಡಿದರು.

ದದ್ದಲ್ ಅವರ ಮಾತಿಗೆ ಧ್ವನಿಗೂಡಿಸಿದ, ಶಾಸಕರಾದ ನಾರಾಯಣಸ್ವಾಮಿ, ರೂಪಕಲಾ, ನಂಜೇಗೌಡ, ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶದ ವಾತಾವರಣ ಹದಗೆಡುತ್ತಿದೆ. ಕೆಲ ಮಳಿಗೆಗಳಲ್ಲಿ ಕಲಬೆರಕೆ ಮದ್ಯ ಮಾರಾಟವಾಗುತ್ತಿದೆ. ಅಲ್ಲದೆ, ಪ್ರತಿ ಅಂಗಡಿಗಳಿಗೂ ರಾಜ್ಯ ಸರ್ಕಾರ ಟಾರ್ಗೆಟ್ ನೀಡಿದೆ. ಇದರಿಂದ ಗಡಿ ಭಾಗದಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟವಾಗುತ್ತಿದ್ದು, ಇದನ್ನು ತಡೆಯಲು ಎಂಎಸ್ಐಎಲ್ ಮಳಿಗೆಗಳನ್ನು ಗಡಿ ಭಾಗದಲ್ಲಿ ತೆರೆಯುವಂತೆ ಶಾಸಕರು ಆಗ್ರಹಿಸಿದರು.

ಬಳಿಕ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಗೋಪಾಲಯ್ಯ, ರಾಜ್ಯದಲ್ಲಿ ಈಗಾಗಲೇ 900ಕ್ಕೂ ಹೆಚ್ಚು ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳಿವೆ. ಯಾವ ತಾಲೂಕಿನಲ್ಲಿ ಖೋಟಾ ಖಾಲಿ ಇದೆಯೋ ಆ ಭಾಗದಲ್ಲಿ ಎಂಎಸ್ಐಎಲ್ ಮಳಿಗೆ ತೆರೆಯಲು ಅವಕಾಶ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಅಂಗಡಿಗಳಿಗೆ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಅಧಿಕಾರಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ. ಹಾಗೂ ಕಲಬೆರಕೆ ಮದ್ಯ ಮಾರಾಟವಾಗುತ್ತಿರುವ ಸಂಬಂಧಿಸಿದಂತೆ, ಶಾಸಕರು ನಿರ್ದಿಷ್ಟ ಪ್ರಕರಣದ ಬಗ್ಗೆ ಮಾಹಿತಿ ನೀಡಿದರೆ ಆ ಪ್ರದೇಶಕ್ಕೆ ಗೌಪ್ಯವಾಗಿ ಭೇಟಿ ನೀಡಿ ಕಠಿಣ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

Share