Published
5 months agoon
ಪನ್ನಾ: ಡಿ, 8 (ಯುಎನ್ಐ) ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದ ವಿಶ್ವಪ್ರಸಿದ್ಧ ಪನ್ನಾ ವಜ್ರದ ಗಣಿಯಲ್ಲಿ 60 ಲಕ್ಷ ರೂ. ಮೌಲ್ಯದ 13 ಕ್ಯಾರೆಟ್ ವಜ್ರ ಬುಡಕಟ್ಟು ಸಮುದಾಯದ ಕೂಲಿ ಕಾರ್ಮಿಕನಿಗೆ ದೊರೆತಿದೆ.
ಕೃಷ್ಣ ಕಲ್ಯಾಣಪುರ ಪಟ್ಟಿ ಬಳಿ ಉತ್ಖನನ ನಡೆಸುತ್ತಿದ್ದ ವೇಳೆ ಮುಲಾಯಂ ಸಿಂಗ್ ಎಂಬುವವರಿಗೆ ಈ ವಜ್ರ ಸಿಕ್ಕಿದೆ. ಈ ಮೂಲಕ ಅವರ ಅದೃಷ್ಟ ರಾತ್ರೋರಾತ್ರಿ ಬದಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮುಲಾಯಂ ಸಿಂಗ್ ಅವರಿಗೆ ಸಿಕ್ಕಿರುವ ವಜ್ರದ ತೂಕ 13.54 ಕ್ಯಾರೆಟ್ ಆಗಿದ್ದು, ಇದರ ಬೆಲೆ ಕನಿಷ್ಠ 60 ಲಕ್ಷ ರೂ. ಎಂದು ತಿಳಿದುಬಂದಿದೆ.
ಸಿಂಗ್ ಅವರಲ್ಲದೆ, ಇತರ ಕಾರ್ಮಿಕರಿಗೆ ವಿವಿಧ ತೂಕದ ಆರು ವಜ್ರಗಳು ಸಿಕ್ಕಿವೆ. ಒಂದೇ ದಿನದಲ್ಲಿ 7 ವಜ್ರಗಳು ಪತ್ತೆಯಾದ ಹಿನ್ನೆಲೆ ಈ ದಿನವನ್ನು ಡೈಮಂಡ್ ಡೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆರು ವಜ್ರಗಳಲ್ಲಿ ಎರಡು ಕ್ರಮವಾಗಿ 6-ಕ್ಯಾರೆಟ್ ಮತ್ತು 4-ಕ್ಯಾರೆಟ್ ತೂಗುತ್ತದೆ, ಇತರವು ಕ್ರಮವಾಗಿ 43, 37 ಮತ್ತು 74 ಸೆಂಟ್ಸ್ ತೂಗುತ್ತದೆ ಎಂದು ಅವರು ಹೇಳಿದರು.
ಈ ಎಲ್ಲಾ ವಜ್ರಗಳ ಒಟ್ಟು ಮೌಲ್ಯ 1 ಕೋಟಿ ರೂಪಾಯಿ ಇರಬಹುದು. ಹರಾಜಿನಲ್ಲಿ ನಿಜವಾದ ಬೆಲೆ ತಿಳಿಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
“ವಜ್ರದ ಹರಾಜಿನಿಂದ ಬರುವ ಹಣವನ್ನು ನನ್ನ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತೇನೆ” ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.