Connect with us


      
ಕರ್ನಾಟಕ

ಕನ್ನಡವನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಸ್ಪೂರ್ತಿ ಇರಲಿ: ಕನ್ನಡಿಗರಿಗೆ ಸಿಎಂ ಕರೆ

pratham

Published

on

ಕನ್ನಡವನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಸ್ಪೂರ್ತಿ ಇರಲಿ: ಕನ್ನಡಿಗರಿಗೆ ಸಿಎಂ ಕರೆ

ಬೆಂಗಳೂರು : ನ. 1(ಯುಎನ್ಐ) ಕನ್ನಡವನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಸ್ಪೂರ್ತಿ ಕನ್ನಡಿಗರಿಗಿರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಮೈಸೂರು ಬ್ಯಾಂಕ್ ಬಳಿ ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಉತ್ಸವ ಹಾಗೂ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡವನ್ನು ಬೆಳೆಸಿ ಕರ್ನಾಟಕವನ್ನು ಉಳಿಸಬೇಕು. ಕನ್ನಡಿಗರು ಈ ಕೆಲಸ ಮಾಡಬೇಕು. ಕನ್ನಡ ಬಳಕೆ, ಇತರರಿಗೆ ಕಲಿಸುವುದು, ಸಾಹಿತ್ಯ, ಸಂಸ್ಕೃತಿಯಲ್ಲಿ ನಿರಂತರವಾಗಿ ಬೆಳೆಸಲು ಪರಿಶ್ರಮ ಅಗತ್ಯ. ಕನ್ನಡಕ್ಕೆ ಆಡಳಿತದಲ್ಲಿ ಹಾಗೂ ಬದುಕಿನಲ್ಲಿ ಅಗ್ರಮಾನ್ಯ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಕರ್ನಾಟಕದ ಏಕೀಕರಣ: ಸ್ವಾತಂತ್ರ್ಯ ನಂತರ ಕರ್ನಾಟಕದ ಏಕೀಕರಣಕ್ಕಾಗಿ ದೊಡ್ಡ ಹೋರಾಟ ನಡೆದು, ಹರಿದು ಹಂಚಿಹೋದಿದ್ದ ಪ್ರಾಂತ್ಯಗಳು ಒಂದಾದವು. ಹಳೆ ಕರ್ನಾಟಕ, ಹೊಸ ಕರ್ನಾಟಕ ಸೇರಿ 1950ರಲ್ಲಿ ವಿಶಾಲ ಕರ್ನಾಟಕದ ಉದಾಯವಾಯಿತು. ನಿಜಲಿಂಗಪ್ಪ, ದೊಡ್ಡಮೇಟಿ, ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಕುವೆಂಪು ಅವರ ಚಿಂತನೆ ಪರಿಶ್ರಮದಿಂದ ಕರ್ನಾಟಕದ ಏಕೀಕರಣವಾಯಿತು ಎಂದು ತಿಳಿಸಿದರು.

ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನದ ಸಂಗಮ: ವಾಟಾಳ್ ನಾಗರಾಜ್ ಅವರು ಕನ್ನಡದ ಅಭಿಮಾನವಿರುವ ಯುವಕರಾಗಿದ್ದರು. ಹಿರಿಯರ ಕಷ್ಟವನ್ನು ಕಣ್ಣಾರೆ ಕಂಡವರು.  ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನದ ಸಂಗಮ ವಾಟಾಳ್ ನಾಗರಾಜ್. ಕರ್ನಾಟಕದ ಏಕೀಕರಣವನ್ನು ಅವರು ಹತ್ತಿರದಿಂದ ನೋಡಿದ್ದಾರೆ. ಸ್ವಾಭಿಮಾನ, ಅಭಿಮಾನ ಗುಣಧರ್ಮಗಳನ್ನು ಕನ್ನಡಕ್ಕೆ ತುಂಬದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಎಂದು ತಿಳಿದು, ಬೆಂಗಳೂರಿನಲ್ಲಿ ಕನ್ನಡದ ಪ್ರಾಬಾಲ್ಯತೆ ತರಲು ಸಂಘಟನೆ ಮಾಡಿ, ದನಿ ಎತ್ತಿ ಕನ್ನಡವನ್ನು ಅಸ್ತಿತ್ವಕ್ಕೆ ತಂದರು. ರಾಜ್ಯದ ರಾಜಧಾನಿಯಲ್ಲಿ ಕನ್ನಡ ಪ್ರಾಬಲ್ಯವಾದರೆ ಇಡೀ ರಾಜ್ಯದಲ್ಲಿ ಕನ್ನಡದ ಅಸ್ತಿತ್ವಕ್ಕೆ ಬರುವಂತೆ ಮಾಡಿದರು. ಸರ್ಕಾರ ಅಧಿಕೃತವಾಗಿ ರಾಜ್ಯೋತ್ಸವ ಆಚರಿಸುವ ಮುನ್ನವೇ 1962 ರಿಂದ ನಿರಂತರವಾಗಿ ರಾಜ್ಯೋತ್ಸವವನ್ನು ವಾಟಾಳ್ ಅವರು ಆಚರಿಸಿಕೊಂಡು ಬಂದಿದ್ದಾರೆ ಎಂದರು.

ಕನ್ನಡದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಕನ್ನಡ ಏಕೀಕರಣ, ಕನ್ನಡ ನಾಡನ್ನು ಕಟ್ಟುವ ಕಾಯಕವನ್ನು ಚಿರಸ್ಮರಣೀಯವಾಗಿ ನಡೆಸಿಕೊಂಡು ಬಂದಿದ್ದಾರೆ. ವಾಟಾಳ್ ನಾಗರಾಜ್ ಅವರ ಬದುಕು, ದನಿ, ಸ್ವಾಭಿಮಾನ, ಸಂಘಟನೆ, ಹೋರಾಟ, ಬದುಕಿನ ಪ್ರತೀಕ. ಅವರ ಅನುಭವ, ಹೋರಾಟದ ದೃಷ್ಟಿಯಿಂದ ಹಿರಿಯರು. ಅವರ ಕ್ರಿಯಾಶೀಲತೆ ಉತ್ಸಾಹ, ನೋಡಿದರೆ ಯುವಕರಂತೆ ಕೆಲಸ ಮಾಡುತ್ತಾರೆ ಎಂದು ಪ್ರಶಂಸಿದರು.

ಶಿಕ್ಷಣದಿಂದ ಉದ್ಯೋಗದವರೆಗೆ ಕನ್ನಡಿಗರಿಗೆ ಆದ್ಯತೆ : ಯುವಕರಿಗೆ ಸಮಕಾಲೀನ ಸಮಸ್ಯೆಗಳನ್ನು ಎದುರಿಸಲು ಉದ್ಯೋಗ ಅಗತ್ಯ. ಸ್ಥಿರವಾದ ಆರ್ಥಿಕ ಬದುಕು ಕೊಟ್ಟಾಗ ಮಾತ್ರ ಸಮೃದ್ಧ ಕರ್ನಾಟಕ ಕಟ್ಟಲು ಸಾಧ್ಯ. ಉನ್ನತ ಶಿಕ್ಷಣದಲ್ಲಿ ಕನ್ನಡಕ್ಕೆ ಸ್ಥಾನ ನೀಡಿದೆ. ದೇಶದಲ್ಲಿಯೇ ಅತ್ಯಂತ ಉನ್ನತ ಐ.ಟಿ.ಐ ಗಳು ಕರ್ನಾಟಕದಲ್ಲಿದೆ. ತಾಂತ್ರಿಕ ವಿದ್ಯೆ,ಕೌಶಲ್ಯಾಭರಿತ ತರಬೇತಿ ನೀಡಿ ಯುವಕರಿಗೆ ಉದ್ಯೋಗ ನೀಡುತ್ತದೆ. ಶಿಕ್ಷಣದಿಂದ ಹಿಡಿದು ಉದ್ಯೋಗದವರೆಗೆ ಕನ್ನಡ ಹಾಗೂ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ನೆಲ, ಜಲ, ದನಿಯನ್ನು ರಕ್ಷಣೆ, ನೈಸರ್ಗಿಕ ಸಂಪತ್ತು ಉಳಿಸುವ ಸಂಕಲ್ಪವನ್ನು ಸರ್ಕಾರ ಮಾಡುತ್ತದೆ ಎಂದರು.

Share