Connect with us


      
ರಾಜಕೀಯ

ರಾಜಕೀಯ ಮೇಲಾಟಕ್ಕೆ ಮೇಕೆದಾಟು !

Kumara Raitha

Published

on

ವಿಶೇಷ ವರದಿ

ರಾಜ್ಯದ ಕಾವೇರಿ ಕೊಳ್ಳದ ಪ್ರಮುಖ ಯೋಜನೆಯಾಗಿರುವ ಮೇಕೆ ದಾಟು ಯೋಜನೆ ಅನುಷ್ಠಾನ ಮಾಡುವ ವಿಚಾರ ದಿಢೀರ್ ಎಂದು ಮುನ್ನಲೆಗೆ ಬಂದಿದೆ, ಸಮುದ್ರದಲ್ಲಿ ಹವಾಮಾನ ವೈಪರಿತ್ಯದಿಂದ ಚಂಡಮಾರುತಗಳು ಬೀಸಿ ಅಕಾಲಿಕವಾಗಿ ಜೋರಾಗಿ ಮಳೆ ಬಂದು ಜನಜೀವನ ಅಸ್ತವ್ಯಸ್ತಗೊಳಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಏಕಾಏಕಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ್ದಾರೆ. ಇದು ಸಾಮಾನ್ಯ ಜನರಿಗಷ್ಟೇ ಅಲ್ಲದೇ ಅದೇ ಪಕ್ಷದ ಹಲವು ನಾಯಕರು ಹುಬ್ಬೇರಿಸುವಂತೆ ಮಾಡಿರುವುದು ಸುಳ್ಳಲ್ಲ.

ಈ ಯೋಜನೆಯ ಅನುಷ್ಠಾನಕ್ಕಾಗಿ ಪಾದಯಾತ್ರೆ ಮಾಡುವ ವಿಚಾರದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಆರಂಭದಿಂದಲೂ ಹೊಂದಾಣಿಕೆ ಇಲ್ಲದಿರುವುದು ಬಹಿರಂಗವಾಗುತ್ತಲೇ ಇತ್ತು. ಪ್ರತಿಪಕ್ಷದ ನಾಯಕರ ಗಮನಕ್ಕೆ ತಾರದೇ ಡಿ.ಕೆ.ಶಿವಕುಮಾರ್ ಪಾದಯಾತ್ರೆಯ ಕುರಿತು ಪೂರ್ವಭಾವಿ ಸಿದ್ದತಾ ಸಭೆಗಳನ್ನು ನಡೆಸಿ, ಯಾರು ಒಪ್ಪಲಿ ಬಿಡಲಿ ತಾವು ತಮ್ಮ ಹೋರಾಟ ನಡೆಸುತ್ತೇವೆ ಎನ್ನುವ ರೀತಿಯಲ್ಲಿ ಮುನ್ನಡೆದರು.

ಪಾದಯಾತ್ರೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಏಕಾಏಕಿ ಹೆಚ್ಚಳವಾಗುವ ಲಕ್ಷಣ ಕಂಡುಬಂತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿತು. ಕಾಂಗ್ರೆಸ್ ಹಲವು ನಾಯಕರು ಸರ್ಕಾರ ನಿರ್ಭಂಧ ಹೇರಿದಾಗ ಅದನ್ನು ಮೀರುವುದು ಜವಾಬ್ದಾರಿಯುತವಾದ ರಾಜಕೀಯ ಪಕ್ಷವಾಗಿ ಒಳ್ಳೆಯ ಬೆಳವಣಿಗೆಯಲ್ಲ. ಪಾದಯಾತ್ರೆ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಮಾಡಿ, ಕೊರೊನಾ ಸೋಂಕು ಕಡಿಮೆಯಾದ ನಂತರ ಮುಂದುವರಿಸಿ ಎಂದು ಪಾದಯಾತ್ರೆಯ ಮೊದಲ ದಿನವೇ ಸಲಹೆ ನೀಡಿದ್ದರು.

ಡಿಕೆ ಸಹೋದರರು ಸರ್ಕಾರ ತಮ್ಮ ಯಾತ್ರೆಯನ್ನು ತಡೆಯಲು ಕೊರೊನಾ ಹೆಚ್ಚಳ ಮಾಡುತ್ತಿದೆ ಎಂದು ಆರೊಪಿಸಿ ತಮ್ಮ ಪಾದಯಾತ್ರೆ ಮುಂದುವರೆಸಿದರು. ಡಿ.ಕೆ ಸಹೋದರರ ಈ ನಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರಿಗೆ ಇರಿಸುಮುರಿಸು ಉಂಟು ಮಾಡಿದ್ದರೂ, ಪಕ್ಷದ ಕಾರ್ಯಕ್ರಮದಿಂದ ದೂರ ಉಳಿದರೆ ತಪ್ಪು ಸಂದೇಶ ಹೋಗುತ್ತದೆ ಎನ್ನುವ ಸಂದಿಗ್ದತೆಗೆ ಸಿಲುಕಿ ಡಿ.ಕೆ. ಶಿವಕುಮಾರ್ ಜೊತೆ ಹೆಜ್ಜೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ಹಂತದಲ್ಲಿ ಪಾದಯಾತ್ರೆಗೆ ಅಪಸ್ವರ ಎತ್ತಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರಿಗೆ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಮೂಲಕ ಸೂಚನೆ ಕೊಡಿಸಿದ್ದರು ಎಂಬುದು ಈಗ ಹೊರ ಬರುತ್ತಿವೆ.

ಕೊರೊನಾ ದಿನೇ ದಿನೇ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪಾದಯಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡರು. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಪ್ರಮುಖ ನಾಯಕರಿಗೇ ಸೋಂಕು ಕಾಣಿಸಿಕೊಂಡರೂ, ಸರ್ಕಾರದ ಅಧಿಕಾರಿಗಳು ತಪಾಸಣೆಗೆ ಹೋದಾಗ ಧಾರ್ಷ್ಟ್ಯದಿಂದ ಅವಮಾನಿಸುವ ರೀತಿಯಲ್ಲಿ ಅವರನ್ನು ಬೈದು ಕಳುಹಿಸಿದ ಕೆಪಿಸಿಸಿ ಅಧ್ಯಕ್ಷರ ನಡವಳಿಕೆ ಸಾಮಾನ್ಯ ಜನರು ಅವರ ನಾಯಕತ್ವದ ಬಗ್ಗೆ ಆಲೋಚಿಸುವಂತೆ ಮಾಡಿತು. ಅಧಿಕಾರ ಇಲ್ಲದಿರುವಾಗ ಒಂದು ಪಕ್ಷದ ಅಧ್ಯಕ್ಷರಾಗಿ, ಶಾಸಕರಾಗಿ ಇರುವ ಕಾನೂನುಗಳಿಗೆ ಬೆಲೆ ಕೊಡದೇ ಭಂಡತನ ತೋರಿದರೆ, ಮುಂದೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಂತ ಪ್ರಮುಖ ಸ್ಥಾನದಲ್ಲಿ ಕುಳಿತುಕೊಂಡರೆ ಅವರ ನಡೆ ಹೇಗಿರುತ್ತದೆ ಎಂಬ ಪ್ರಶ್ನೆಯ ಜೊತೆಗೆ ಆತಂಕವೂ ಸಾಮಾನ್ಯ ನಾಗರಿಕರ ಮನಸಲ್ಲಿ ಬಂದು ಹೋಗದೇ ಇರುವುದಿಲ್ಲ.

ಈ ವಿಚಾರದಲ್ಲಿ ಸರ್ಕಾರದ ನಡೆಯೂ ಪ್ರಶ್ನಾರ್ಹವೇ ಆಗಿದೆ. ಕೊವಿಡ್‌ನಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತಾನು ಮಾಡಿದ ನಿಯಮವನ್ನು ಯಾರೇ ಮೀರಿದರೂ, ಅದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವುದು ಒಂದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಕೂಡ ಈ ಪಾದಯಾತ್ರೆಯನ್ನು ತಡೆಯುವುದರ ಹಿಂದಿನ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಲೇ ನಾಲ್ಕು ದಿನ ಕಾನೂನು ಮೀರಿ ಪಾದಯಾತ್ರೆ ನಡೆಯಲು ಅವಕಾಶ ಕೊಟ್ಟಿತು. ಅದರ ಫಲವಾಗಿಯೇ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯ ಹೊರಗೆ ಬಂದವರು, ಮಾಸ್ಕ್ ಹಾಕದವರನ್ನು ಪೊಲಿಸರು ಹಿಡಿದು ದಂಡ ಕಟ್ಟುವಂತೆ ಸೂಚಿಸಿದಾಗ, ಸರ್ಕಾರದ ನೈತಿಕತೆಯನ್ನು ಬಹಿರಂಗವಾಗಿಯೇ ಪ್ರಶ್ನಿವಂತಾಗಿದೆ.

ಕಾನೂನು ಎಲ್ಲರಿಗೂ ಒಂದೇ ಎನ್ನುವ ಸರ್ಕಾರ ತನ್ನ ಪಕ್ಷದ ಶಾಸಕರು ನಿಯಮ ಮೀರಿದರೂ ತಲೆ ಕೆಡಿಸಿಕೊಳ್ಳದೇ, ಪ್ರತಿಪಕ್ಷವೂ ಭಂಡತನದಿಂದ ಬಹಿರಂಗವಾಗಿ ಸವಾಲು ಹಾಕುತ್ತ ತಾಳ್ಮೆ ಪರೀಕ್ಷೆ ಮಾಡುತ್ತಿದ್ದರೂ, ಅದರಲ್ಲೂ ರಾಜಕೀಯ ಲೆಕ್ಕಾಚಾರ ಹಾಕುತ್ತ ಕುಳಿತುಕೊಳ್ಳುವುದು ಸಂವಿಧಾನಬದ್ಧವಾಗಿ ನಡೆಯುವ ಒಂದು ಜವಾಬ್ದಾರಿಯುತ ಸರ್ಕಾರದ ಲಕ್ಷಣವಲ್ಲ. ಮೇಕೆದಾಟು ಯೋಜನೆಗೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿರುವ ಸಂದರ್ಭ ಮತ್ತು ಉದ್ದೇಶ ಎರಡನ್ನೂ ಸಮರ್ಥವಾಗಿ ಜನರಿಗೆ ಮನವರಿಕೆ ಮಾಡಿಕೊಟ್ಟು ಮೊದಲ ದಿನವೇ ಬಂಧಿಸಿದ್ದರೂ, ಸರ್ಕಾರ ಅಥವಾ ಬಿಜೆಪಿಗೇನು ರಾಜಕೀಯವಾಗಿ ನಷ್ಟವಾಗುತ್ತಿರಲಿಲ್ಲ.

ಈಗ ಕಾಂಗ್ರೆಸ್ ನಡೆಸಿರುವ ಪಾದಯಾತ್ರೆಯ ಹಿಂದಿನ ಉದ್ದೇಶವೇನು ಗುಟ್ಟಾಗಿ ಉಳಿದಿಲ್ಲ. ಈ ಪಾದಯಾತ್ರೆಯ ಮಾರ್ಗದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ನಷ್ಟವಾಗುವಂತಹದ್ದೇನು ಇರಲಿಲ್ಲ. ಬೆಂಗಳೂರಿನಲ್ಲಿ ಪಾದಯಾತ್ರೆ ನಡೆದಿದ್ದರೂ, ಸಂಪೂರ್ಣ ಅದರ ಲಾಭ ಕಾಂಗ್ರೆಸ್‌ಗೆ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ.  ರಾಮನಗರದಲ್ಲಿ ಜೆಡಿಎಸ್‌ಗೆ ಆಘಾತ ನೀಡಬಹುದು. ಅದೂ ಕೂಡ ರಾಮನಗರದಿಂದ ಸ್ಪರ್ಧೆ ಮಾಡಿದರೆ ಮಾತ್ರ ಮುಖ್ಯಮಂತ್ರಿಯಾಗುವ ಯೋಗ ಇದೆ ಎಂದು ಜ್ಯೋತಿಷಿಗಳು ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದಾರಂತೆ. ಅದೇ ಕಾರಣಕ್ಕೆ ಹೇಗಾದರೂ ಮಾಡಿ ರಾಮನಗರದವರೆಗಾದರೂ ಪಾದಯಾತ್ರೆ ಮುಟ್ಟಿಸಿ ತಮ್ಮ ಸ್ಥಾನ ಅಲ್ಲಿಯೂ ಭದ್ರಪಡಿಸಿಕೊಳ್ಳಬೇಕೆಂಬ ಉದ್ದೇಶವನ್ನು ಡಿ.ಕೆ.ಸಹೋದರರು ಹೊಂದಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ವಾಸ್ತವವಾಗಿ ಈಗ ನಡೆದ ಪಾದಯಾತ್ರೆ ಡಿ.ಕೆ.ಶಿವಕುಮಾರ್ ಅವರು ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಗೆ ವೇದಿಕೆಯನ್ನಾಗಿ ಮಾಡಿಕೊಳ್ಳಲು ನಡೆಸಿದ ಪ್ರಯತ್ನದ ಭಾಗ ಎಂಬ ಮಾತುಗಳು ಕಾಂಗ್ರೆಸ್‌ನ ಬಹುತೇಕ ಹಿರಿಯ ನಾಯಕರಿಗೆ ಅರಿವಾಗಿದ್ದರೂ ಬಾಯಿ ಬಿಡದ ಸ್ಥಿತಿಯಲ್ಲಿರುವಂತಾಗಿದೆ.

ಕಾಂಗ್ರೆಸ್ ಪಾದಯಾತ್ರೆ ನಡೆಸಿದ ತಕ್ಷಣ ಈ  ಯೋಜನೆಗೆ ಒಪ್ಪಿಗೆ ಸಿಗುತ್ತದೆ ಎಂದೇನಿಲ್ಲ. ಯಾಕೆಂದರೆ, ಈ ಯೋಜನೆಯನ್ನು ಜಾರಿಗೆ ತರುವ ಆಡಳಿತ ಪಕ್ಷವೂ ಇದರಿಂದಾಗುವ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿಯೇ ಯೋಜನೆಗೆ ಅನುಮತಿಯನ್ನು ಕೇಂದ್ರದಿಂದ ಪಡೆಯುವ ಪ್ರಯತ್ನ ಮಾಡಲಿದೆ. ತಮಿಳುನಾಡು ತಕರಾರು ತೆಗೆದಿದ್ದಕ್ಕೆ ಕೋರ್ಟ್ನಿಂದ ಒಪ್ಪಿಗೆ ಪಡೆದುಕೊಂಡು ಬಂದರೂ, ಯಾವ ಸಂದರ್ಭದಲ್ಲಿ ಯೋಜನೆ ಅನುಷ್ಠಾನಕ್ಕೆ ಕೈ ಹಾಕಿದರೆ, ರಾಜಕೀಯವಾಗಿ ಲಾಭವಾಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಆಡಳಿತ ಪಕ್ಷ ಮುಂದಡಿ ಇಡುತ್ತದೆ.

ಈ ಯೋಜನೆ ಆಗಬೇಕೆಂದು ನಿನ್ನೆ ಮೊನ್ನೆ ಬೇಡಿಕೆ ಬಂದಿದ್ದಲ್ಲ. ಇದಕ್ಕೂ ನಲವತ್ತು ವರ್ಷಗಳ ಇತಿಹಾಸ ಇದೆ. ಹೀಗಿದ್ದಾಗ ಯಾವ ರಾಜಕೀಯ ಪಕ್ಷವೂ ಜನರಿಗೆ ಅನುಕೂಲವಾಗುತ್ತದೆ ಎಂದು ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈಗ ನಡೆಸಿದ ಕಾಂಗ್ರೆಸ್‌ನ ಪಾದಯಾತ್ರೆಯ ಹಿಂದೆ ಹೇಗೆ ರಾಜಕೀಯ ಲಾಭದ ಲೆಕ್ಕಾಚಾರವಿದೆಯೋ ಆಡಳಿತ ಪಕ್ಷವೂ ಅದೇ ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಹೆಜ್ಜೆ ಇಡುತ್ತದೆ. ಈ ರೀತಿಯ ಹೋರಾಟಗಳು ಒಬ್ಬ ವ್ಯಕ್ತಿಗೆ ನಾಯಕನ ಸ್ಥಾನ ತಂದುಕೊಡಬಹುದು ಅಥವಾ ಒಂದು ಪಕ್ಷಕ್ಕೆ ರಾಜಕೀಯವಾಗಿ ಲಾಭ ಉಂಟು ಮಾಡಬಹುದು. ಅಕಾಲಿಕ ಮಳೆಯಂತೆ ಎದ್ದಿರುವ ಈ ಮೇಕೆದಾಟು ಯೋಜನೆ ಕುರಿತ ಹೋರಾಟವೂ ರಾಜಕೀಯ ಮೇಲಾಟದ ಭಾಗವೇ ಹೊರತು, ರಾಜ್ಯದ ಹಿತಕ್ಕಾಗಿಯಂತೂ ಅಲ್ಲವೆನ್ನುವ ಭಾವ ಅರಳಿಕಟ್ಟೆಯ ಮೇಲೆ ಕುಳಿತುಕೊಂಡವರಿಗೂ ಅರ್ಥವಾಗುವಂತಿದೆ.

Share