Connect with us


      
ಕರ್ನಾಟಕ

‘ನಾವು ಗಂಡಸರು ಗಂಡಸ್ತನದಿಂದ ಮಾಡಿ ತೋರಿಸುತ್ತೇವೆ’

UNI Kannada

Published

on

CN ASHWATH NARAYAN PC
ಮೇಕೆದಾಟು ಯೋಜನೆ ಅನುಷ್ಠಾನ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಿಂದ ಆಗಲಾರದು

ರಾಮನಗರ: ಜನವರಿ.11(ಯು.ಎನ್.ಐ): ನಾವು ಗಂಡಸರು,ಗಂಡಸ್ತನ ಇರುವವರು,ಗಂಡಸ್ತನದಿಂದಲೇ ಮೇಕೆದಾಟು ಯೋಜನೆ ಮಾಡಿ ತೋರಿಸುತ್ತೇವೆ ಎಂದು ರಾಮನಗರ ಉಸ್ತುವಾರಿ ಸಚಿವ ಡಾ|ಸಿ.ಎನ್.ಅಶ್ವತ್ಥ ನಾರಾಯಣ್ ಘಂಟಾಘೋಷವಾಗಿ ಉಚ್ಛರಿಸಿದ್ದಾರೆ.

ರಾಮನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಿಂದ ಆಗಲಾರದು. ಅದನ್ನು ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸವಾಲೆಸೆದರು. ನಾವು ಗಂಡಸರು ಗಂಡಸ್ತನದಿಂದ ಈ ಕೆಲಸ ಮಾಡಿ ತೋರಿಸುತ್ತೇವೆ ಎಂದು ತಿಳಿಸಿದರು.

ಆಡಳಿತದಲ್ಲಿದ್ದಾಗ ಶೈಕ್ಷಣಿಕ. ಉದ್ಯೋಗ, ರೈತರು, ಕುಡಿಯುವ ನೀರು, ನೀರಾವರಿ ಸೇರಿದಂತೆ ಎಲ್ಲ ರಂಗಗಳಲ್ಲೂ ವಿಫಲರಾಗಿರುವ ಕಾಂಗ್ರೆಸ್ ನಾಯಕರು ಈಗ ಬಿಂಬಿಸಲು ಪೈಪೋಟಿಗೆ ಇಳಿದು ಜನರಿಗೆ ಸುಳ್ಳಿನ ಮಾಹಿತಿ ಕೊಟ್ಟು ಸುಳ್ಳಿನ ಪಾದಯಾತ್ರೆ ಮಾಡುತ್ತಿದ್ದಾರೆ.2013ರಿಂದ 18ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಮೇಕೆದಾಟು ಯೋಜನೆ ಸಾಧ್ಯಾಸಾಧ್ಯತೆ ವರದಿಯನ್ನು ಸಿದ್ಧಪಡಿಸಲಿಲ್ಲ. 4ಜಿ ವಿನಾಯಿತಿ ನೀಡದೆ ವಿಳಂಬ ಮಾಡಿತು. ಡಿಪಿಆರ್ ವಿಚಾರದಲ್ಲೂ ವಿಳಂಬ ಧೋರಣೆಯನ್ನೇ ಅನುಸರಿಸಿತು. 2007ರಲ್ಲಿ ಬಂದ ತೀರ್ಪಿನ ಗಜೆಟ್ ಅಧಿಸೂಚನೆ ಹೊರಡಿಸಲು 6 ವರ್ಷ ಬೇಕಾಯಿತು ಎಂದು ಕಾಂಗ್ರಸ್‌ ನಾಯಕರನ್ನು ಟೀಕಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ 2008ರಿಂದ ಕಾವೇರಿ ಜಲಾನಯನ ಪ್ರದೇಶದ ಸುಮಾರು 13 ಜಿಲ್ಲೆಗಳಲ್ಲಿ ವಿವಿಧ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾರ್ಯರೂಪಕ್ಕೆ ತರಲಾಗಿದೆ.

ಬಿಜೆಪಿಯು ನಾಡಿನ ನೆಲ ಮತ್ತು ಜಲದ ವಿಚಾರದಲ್ಲಿ ನಾಡಿನ ಹಿತಾಸಕ್ತಿಯನ್ನು ಕಾಪಾಡಲು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಸಂಸ್ಕೃತಿ, ಆಚಾರ-ವಿಚಾರವನ್ನು ಕಾಪಾಡಲು ಪಕ್ಷ ಬದ್ಧವಾಗಿದೆ. ಕೇವಲ ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಪ್ರವೃತ್ತಿ ನಮ್ಮದಲ್ಲ. ಸಮಾಜ ಮತ್ತು ನಾಡು ಚೆನ್ನಾಗಿರಬೇಕು ಎಂಬ ಸ್ಪಷ್ಟತೆಯೊಂದಿಗೆ ಪಕ್ಷ ಮತ್ತು ಸರಕಾರ ಮುನ್ನಡೆಯುತ್ತಿದೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆಗುವ ಮೊದಲೇ ಕಾಂಗ್ರೆಸ್‍ನವರು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಕಾಂಗ್ರೆಸ್‍ನ ಅಂದಿನ ಸರಕಾರ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲಿಲ್ಲ ಎಂದು ಟೀಕಿಸಿದರು. ನೀರಾವರಿ ಸಚಿವರಾಗಿದ್ದ ಬೊಮ್ಮಾಯಿಯವರು ಈ ವಿಚಾರದ ಕುರಿತು ಹಲವಾರು ಬಾರಿ ಕೇಂದ್ರದ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಜಿಲ್ಲೆಯವರೇ ಆಗಿದ್ದು, ಏಳು ಬಾರಿ ಶಾಸಕರಾಗಿ ಆಯ್ಕೆಯಾದವರು. ಮೊದಲ ಬಾರಿ ಶಾಸಕರಾದಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿದವರು. ಆದರೆ, ಅವರಿಗೆ ಕೆಲಸದ ಆಸಕ್ತಿ ಇಲ್ಲ. ಸಂಪನ್ಮೂಲಗಳನ್ನೆಲ್ಲ ಲೂಟಿ ಹೊಡೆದು ಏನೂ ಇಲ್ಲದ ಡಿ.ಕೆ.ಶಿವಕುಮಾರ್ ಇಷ್ಟು ದೊಡ್ಡ ಎತ್ತರಕ್ಕೆ ಮತ್ತು ಸಾವಿರಾರು ಕೋಟಿಗೆ ಒಡೆಯನಾಗಿರುವುದು ಹೇಗೆ? 7 ಬಾರಿ ಶಾಸಕರಾಗಿ ವ್ಯಾಪಾರ ಮಾಡಲು ಇವರಿಗೆ ಎಲ್ಲಿಂದ ಸಮಯ ಸಿಕ್ಕಿತು?7 ಬಾರಿ ಶಾಸಕರಾಗಿ ಜನರಿಗೆ ಏನು ಮಾಡಿದ್ದಾರೆ?. 2 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಡಿ.ಕೆ.ಸುರೇಶ್ ಜಿಲ್ಲೆಗೆ ಏನನ್ನು ಮಾಡಿದ್ದಾರೆ? ಎಂದು ಪ್ರಶ್ನಿಸಿದ ಅಶ್ವತ್ಥ ನಾರಾಯಣ್ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಸಿಎಂ ಕುರ್ಚಿಯ ಪೈಪೋಟಿಗಾಗಿ ಪಾದಯಾತ್ರೆ ನಡೆದಿದೆ ಎಂದು ಟೀಕಿಸಿದರು.

ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರು ಈ ಯೋಜನೆ ಮಾಡಬಾರದು ಎಂಬ ಉದ್ದೇಶ ಇದರ ಹಿಂದಿದೆ. ಶಿವಕುಮಾರ್ ತಮ್ಮ ಅಸ್ತಿತ್ವಕ್ಕೆ ಕಾಂಗ್ರೆಸ್ ಪಕ್ಷವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಬ್ರದರ್ಸ್ ಷೋ ಆಗಿದೆ ಎಂದು ಕುಟುಕಿದರು.

ನಮ್ಮ ಸರಕಾರವು ಗ್ರೀನ್ ಟ್ರಿಬ್ಯೂನಲ್‍ನಲ್ಲಿ ಇದ್ದ ಎಲ್ಲ ತಡೆಯಾಜ್ಞೆಗಳನ್ನು ತೆರವುಗೊಳಿಸಿದೆ. ಪರಿಸರ ಇಲಾಖೆಯ ಅನುಮತಿ ಪಡೆಯಲು ಮುಳುಗಡೆ ಪ್ರದೇಶಕ್ಕೆ ಪರ್ಯಾಯ ಸ್ಥಳವನ್ನು ಗುರುತಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ- ಸುಪ್ರೀಂ ಕೋರ್ಟ್‍ನಲ್ಲಿ ಅನುಮತಿಗಾಗಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು

ಕಾಂಗ್ರೆಸ್ ಪಕ್ಷವು ಪಾದಯಾತ್ರೆ ಮೂಲಕ ಕೋವಿಡ್ ಹರಡಿಸುತ್ತಿದೆ. ಇವರಿಗೆ ಏನಾದರೂ ಜವಾಬ್ದಾರಿ ಇದೆಯೇ? ಸಂವಿಧಾನದ ಕುರಿತು ಗೌರವ ಇಲ್ಲ.
ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನಿಸಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸಿ ಪ್ರಕರಣ ದಾಖಲಿಸಿದ್ದೇವೆ. ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅಶ್ವತ್ಥ ನಾರಾಯಣ್ ಉತ್ತರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಸ ಅಶ್ವತ್ಥನಾರಾಯಣ, ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಕೇಶವ್ ಪ್ರಸಾದ್, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಅ. ದೇವೇಗೌಡ ಉಪಸ್ಥಿತರಿದ್ದರು.

Share