Connect with us


      
ದೇಶ

ಹೆಣ್ಣು ಮಕ್ಕಳ ಮದುವೆ ಕನಿಷ್ಠ ವಯಸ್ಸು ಇನ್ಮುಂದೆ 21? – ಆಧಾರ್ ನೊಂದಿಗೆ ಮತದಾರರ ಐಡಿ ಜೋಡಣೆ

Iranna Anchatageri

Published

on

ಹೊಸದಿಲ್ಲಿ, ಡಿಸೆಂಬರ್ 16 (ಯು.ಎನ್.ಐ.) ಕೇಂದ್ರದ ಮೋದಿ ನೇತೃತ್ವದ ಸರ್ಕಾರ 2 ಕ್ರಾಂತಿಕಾರಿ ಮಸೂದೆಗಳನ್ನು ಸದನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಈ ಪ್ರಮುಖ ಸುಧಾರಣಾ ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ.

ಮೊದಲ ಪ್ರಮುಖ ಸುಧಾರಣೆ ಹುಡುಗಿಯರ ಮದುವೆ ವಯಸ್ಸಿಗೆ ಸಂಬಂಧಿಸಿದ್ದಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳ ಮದುವೆ ಕನಿಷ್ಠ ವಯಸ್ಸು ಒಂದೇ ಆಗಿರಬೇಕು. ಅಂದರೆ 21 ವರ್ಷಗಳು ಎಂಬ ಮಸೂದೆಗೆ ಕೇಂದ್ರ ಕ್ಯಾಬಿನೇಟ್ ಅನುಮೋದಿಸಿದೆ. ಈ ಕಾನೂನು ಜಾರಿಗೆ ಬಂದರೆ ದೇಶದ ಎಲ್ಲ ಧರ್ಮ ಮತ್ತು ವರ್ಗದ ಹೆಣ್ಣು ಮಕ್ಕಳು ಮದುವೆಯ ಕನಿಷ್ಠ ವಯಸ್ಸು ಬದಲಾಗಲಿದೆ.

ಎರಡನೇ ಪ್ರಮುಖ ಸುಧಾರಣೆ ಚುನಾವಣೆಗೆ ಸಂಬಂಧಿಸಿದ್ದಾಗಿದೆ. ಈ ನೂತನ ಮಸೂದೆಯನ್ನು ಸಂಸತ್ತು ಅಂಗೀಕರಿಸಿದರೆ, ಮತದಾರರ ಗುರುತಿನ ಚೀಟಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಹೊಸ ಅರ್ಜಿದಾರರ ಅಂಕಿ ಅಂಶಗಳು ಮತ್ತು ಪ್ರಥಮ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳುವರಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಕ್ಯಾಬಿನೆಟ್ ಸಭೆಯಲ್ಲಿ ಶಿಫಾರಸುಗೊಂಡಿರುವ ಈ ನೂತನ ಮಸೂದೆಯಿಂದ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿಯಾಗಿರುವ ನಕಲಿ ಮತದಾರರು ಅಥವಾ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಸಹಾಯಕವಾಗುತ್ತದೆ. ವಲಸೆ ಕಾರ್ಮಿಕರಿಗೆ ಅವರ ನಿವಾಸದ ನಗರಗಳಲ್ಲಿ ಮತದಾನ ಮಾಡಲು ಚುನಾವಣಾ ಆಯೋಗವು ಉದ್ದೇಶಿಸಿದೆ.

ಈ ಎರಡೂ ಕ್ರಾಂತಿಕಾರಿ ಮಸೂದೆಗಳನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. 2020ರಲ್ಲಿ ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ, ಹುಡುಗ ಮತ್ತು ಹುಡುಗಿಯ ವಯಸ್ಸನ್ನು ಸಮೀಕರಿಸುವ ಬಗ್ಗೆ ಘೋಷಣೆ ಮಾಡಿದ್ದರು. ಇನ್ನು ಆಧಾರ್ ಮತ್ತು ವೋಟರ್ ಐಡಿ ಜೋಡಣೆಗೆ ಹಲವು ತಿಂಗಳುಗಳಿಂದ ಚರ್ಚೆಗೊಳಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಎರಡೂ ಮಸೂದೆಗಳು ಶೀಘ್ರ ಕಾಯ್ದೆಯಾಗಿ ಜಾರಿಗೆ ಬರುವ ಸಾಧ್ಯತೆ ಇದೆ.

ಹೆಣ್ಣುಮಕ್ಕಳ ಮದುವೆ ವಯಸ್ಸು ಬದಲಾವಣೆಗೆ ಸಂಬಂಧಿಸಿದಂತೆ ಜಯಾ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ವೊಂದನ್ನು ರಚನೆ ಮಾಡಲಾಗಿತ್ತು. ಈ ಸಮಿತಿ ಕಳೆದೆ ಡಿಸೆಂಬರ್ ನೀತಿ ಆಯೋಗಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ಟಾಸ್ಕ್ ಫೋರ್ಸ್, ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಸುವ ವರದಿಯನ್ನು ಸಲ್ಲಿಸಿತ್ತು. ಅಲ್ಲದೆ, ದೇಶಾದ್ಯಂತ ಏಕರೂಪವಾಗಿ ಜಾರಿಗೆ ತರಲು ಬಲವಾದ ಶಿಫಾರಸ್ಸನ್ನು ಸಹ ಮಾಡಿತ್ತು. ಮೋದಿ ನೇತೃತ್ವದ ಸರ್ಕಾರ ಮದುವೆ ವಿಚಾರಗಳಿಗೆ ಸಂಬಂಧಿಸಿದಂತೆ ಎರಡನೇ ಪ್ರಮುಖ ಸುಧಾರಣೆ ಕೈಗೆತ್ತಿಕೊಂಡಿದೆ. ಈ ಹಿಂದೆ ಎನ್ಆರ್ ಐ ವಿವಾಹಗಳನ್ನು 30 ದಿನಗಳಲ್ಲಿ ನೋಂದಾಯಿಸುವ ದೃಢ ಹೆಜ್ಜೆ ಇಡಲಾಗಿತ್ತು.

Share