Connect with us


      




ಕರ್ನಾಟಕ

“ಬೆಂಗಳೂರಿನಂತೆ ಮೈಸೂರು, ಚಾಮರಾಜನಗರ ಅಭಿವೃದ್ಧಿಪಡಿಸುವುದು ನನ್ನ ಆಶಯ”

Iranna Anchatageri

Published

on

ಬೆಂಗಳೂರು : ಜನೆವರಿ 10 (ಯು.ಎನ್.ಐ.) ಬೆಂಗಳೂರು ನಗರದಂತೆ ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವುದು ನನ್ನ ಆಶಯ. ಜನರ ನಡುವೆ ಒಡನಾಟ, ಜನರ ಸೇವೆ ಮಾಡಿದಾಗ ಅವರ ಪ್ರೀತಿ ಗಳಿಸಲು ಸಾಧ್ಯ’ ಎಂದು ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಶಾಸಕರ ಕಚೇರಿ ಅವರಣದಲ್ಲಿ ಮೈಸೂರು ಜಿಲ್ಲೆಯ ವಿ.ಸೋಮಣ್ಣ ಅಭಿಮಾನಿಗಳ ಬಳಗ ಆಯೋಜಿಸಿದ್ದ ಸಮಾರಂಭದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಮೈಸೂರು ಜಿಲ್ಲೆಗೂ ನನಗೂ 40 ವರ್ಷಗಳ ನಿಕಟ ಸಂಪರ್ಕವಿದೆ. ನನಗೆ ಸಂಸ್ಕೃತಿ, ಸಂಪ್ರದಾಯ ಕಲಿಸಿದ ಊರು. ಬೆಂಗಳೂರು ನಗರ ಅಭಿವೃದ್ಧಿಪಡಿಸಿದಂತೆ ಮೈಸೂರು, ಚಾಮರಾಜನಗರ ಅಭಿವೃದ್ಧಿಪಡಿಸುವುದು ನನ್ನ ಆಶಯ. ಈ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತೆ ಇಲ್ಲದೇ ಸಾಕಷ್ಟು ಅವ್ಯವಸ್ಥೆಯಿತ್ತು. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಯಿತು. ಇಡೀ ಮೈಸೂರು ಜನರು ಇಂತಹ ಸೇವಾ ಕಾರ್ಯವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು. ಇದೀಗ ಅಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ” ಎಂದರು.
“ಮಲೈ ಮಹದೇಶ್ವರ ಬೆಟ್ಟದ ಸನ್ನಿಧಾನದ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹಕಾರದಿಂದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ದೇವಸ್ಥಾನ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಮಲೈ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಮೇಲೆ ಭಕ್ತರು ನೀಡುವ ಧವಸ, ಧಾನ್ಯದ ದೇಣಿಗೆಯಿಂದ ಲಕ್ಷಾಂತರ ಜನರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಮಲೈ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಕಾರ್ಯಗಳನ್ನು ನೋಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು” ಎಂದು ಹೇಳಿದರು.
ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಪಾಲಿಕೆ ಮಾಜಿ ಸದಸ್ಯ ದಾಸೇಗೌಡ, ರೂಪಾಲಿಂಗೇಶ್ವರ್, ಪಲ್ಲವಿ ಮತ್ತು ಬಿಜೆಪಿ ಮುಖಂಡರಾದ ಎಚ್. ರಮೇಶ್, ವೇಣು, ರಾಮಚಂದ್ರ ಹಾಗೂ ಮೈಸೂರು ಜಿಲ್ಲೆ ವಿ. ಸೋಮಣ್ಣ ಅಭಿಮಾನಿ ಬಳಗದ ಮಹದೇವಸ್ವಾಮಿ, ಚಿನ್ನಸ್ವಾಮಿ ಖಾಂಡೇಶ್ ಮತ್ತಿತರರು ಉಪಸ್ಥಿತರಿದ್ದರು.

Share