Published
2 weeks agoon
ಹೊಸದಿಲ್ಲಿ: ಆಗಸ್ಟ್ 03 (ಯು.ಎನ್.ಐ.) ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ದೆಹಲಿಯಲ್ಲಿರುವ ಯಂಗ್ ಇಂಡಿಯಾ ಕಚೇರಿಗೆ ಸೀಲ್ ಹಾಕಿದೆ. ಏಜೆನ್ಸಿಯ ಅನುಮತಿಯಿಲ್ಲದೆ ಆವರಣವನ್ನು ತೆರೆಯಬಾರದು ಎಂದು ಇಡಿ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದೆ. ಅಲ್ಲದೆ, ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯ ಹೊರಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಸೋನಿಯಾ-ರಾಹುಲ್ ಗಾಂಧಿ ಅವರ ಕಂಪನಿ ಯಂಗ್ ಇಂಡಿಯಾ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ದೇಶದಾದ್ಯಂತ 12 ಸ್ಥಳಗಳಲ್ಲಿ ಇಡಿ ಮಂಗಳವಾರ ದಾಳಿ ನಡೆಸಿತ್ತು. ದೆಹಲಿಯ ಬಹದ್ದೂರ್ ಷಾ ಜಾಫರ್ ಮಾರ್ಗ್ನಲ್ಲಿರುವ ಹೆರಾಲ್ಡ್ ಹೌಸ್ನಲ್ಲಿಯೂ ಅವರು ಶೋಧ ನಡೆಸಿದ್ದರು. ಹೆರಾಲ್ಡ್ ಹೌಸ್ ನ ನಾಲ್ಕನೇ ಮಹಡಿಯಲ್ಲಿ ಇಡಿ ಶೋಧ ನಡೆಸಿರುವ ಮಾಹಿತಿ ಬೆಳಕಿಗೆ ಬಂದಿದೆ. ನ್ಯಾಷನಲ್ ಹೆರಾಲ್ಡ್ ನ ಪ್ರಕಾಶನ ಕಚೇರಿಯೂ ಇಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆರಾಲ್ಡ್ ಹೌಸ್ ಗೆ ಆಗಮಿಸಿ ಈ ಹಿಂದೆ ಪ್ರತಿಭಟನೆ ನಡೆಸಿದ್ದರು.