Connect with us


      
ಕರ್ನಾಟಕ

‘ಪ್ಯಾಕೇಜ್‌’ಗಾಗಿ ಮಾಧ್ಯಮಗಳಿಂದ ಸುದ್ದಿ – ಯತ್ನಾಳ್!

Iranna Anchatageri

Published

on

ಬೆಂಗಳೂರು: ಮಾರ್ಚ್ 30 (ಯು.ಎನ್.ಐ.)  ಚುನಾವಣೆ ಸಮೀಪಿಸುತ್ತಿದ್ದಂತೆ ಮಾಧ್ಯಮಗಳು ಹಣಕ್ಕಾಗಿ 5 ರಿಂದ 10 ಲಕ್ಷ ರೂಪಾಯಿ ಪ್ಯಾಕೇಜ್ ಮಾಡುತ್ತವೆ. ಅಭಿವೃದ್ಧಿಯ ಹರಿಕಾರ ಯತ್ನಾಳ್.. ರಾಜಾಹುಲಿ ಬೆಟ್ಟದ ಹುಲಿ, ಆ ಹುಲಿ ಈ ಇಲಿ.. ಎಲ್ಲವೂ 10 ಲಕ್ಷದ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಚುನಾವಣೆ ಸುಧಾರಣೆ ಮೇಲಿನ ಚರ್ಚೆ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಗಣಿ ಉದ್ಯಮಿಗಳು ಒಮ್ಮಿಂದೊಮ್ಮೆ ಎದ್ದು ಬಂದರು… ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಬಡ ವಿದ್ಯಾರ್ಥಿಗಳಿಗೆ ಪಾಸ್ ಹಂಚುವ ಕಾರ್ಯಕ್ರಮ ತರಲಾಯಿತು. ರಾಜ್ಯದ ರಾಜಕೀಯ ವ್ಯವಸ್ಥೆ ಹಾಳಾಗಿರುವುದು ಗಣಿಗಾರಿಕೆಯಿಂದ ಎಂದು ಆರೋಪಿಸಿದರು. 1990ರಲ್ಲಿ ನಾನು ಒಂದು ಪೋಲಿಂಗ್ ಬೂತ್ ಗೆ 50 ರೂ. ಕೊಟ್ಟಿದ್ದೆ. 8.50 ಲಕ್ಷ ರೂ.ದಲ್ಲಿ ಲೋಕಸಭೆಗೆ ಆರಿಸಿ ಬಂದಿದ್ದೆ. ಆದರೆ ಇಂದು ಗ್ರಾಮ ಪಂಚಾಯತಿ ಸದಸ್ಯನೂ 8.50 ಲಕ್ಷ ರೂ.‌ಖರ್ಚು ಮಾಡಿದರೂ ಆಗುವುದಿಲ್ಲ. ಮೂರು‌ ಪಿಡುಗುಗಳು ಕರ್ನಾಟಕದ ವ್ಯವಸ್ಥೆಯನ್ನು ಹಾಳು ಮಾಡಿದೆ. ಒಂದು ಗಣಿಗಾರಿಕೆ, ಎರಡನೇಯದ್ದು ರಿಯಲ್ ಎಸ್ಟೇಟ್, ಮೂರನೇಯದ್ದು ಜಾತಿ. ಆರತಿ ತಟ್ಟೆಗಳು ನಮಗೆ ಸ್ವಭಾವ ಕಲಿಸಿ ಬಿಟ್ಟಿತು. ಆ ಆರತಿ ತಟ್ಟೆಯಲ್ಲಿ ಒಂದೊಂದು ಸಾವಿರ ನೋಟುಗಳಿರುತ್ತವೆ. ನೂರೈವತ್ತು ಹೆಣ್ಣು ಮಕ್ಕಳು ಆರತಿ ತಟ್ಟೆಯೊಂದಿಗೆ ಲೈನಾಗಿ ನಿಲ್ಲುತ್ತಾರೆ. ದುಡ್ಡಿನ ಎದುರು ನಾನು ಎಂಪಿ ಚುನಾವಣೆಯಲ್ಲಿ ಸೋತು ಬಿಟ್ಟೆ. ಆಡು ಮುಟ್ಟದ ಎಲೆ ಇಲ್ಲ, ಯತ್ನಾಳ್ ತಿರುಗಾಡದ ಹಳ್ಳಿ ಇಲ್ಲ ಎಂಬ ಪ್ರಖ್ಯಾತಿಯಾಗಿದ್ದೆ. ಆದರೆ ನಾನು ಮುನ್ನೂರು ಮತಗಳಿಂದ ಸೋಲಬೇಕಾಯಿತು ಎಂದು ತಿಳಿಸಿದರು.

ನಾವು ನೀತಿ ಸಂಹಿತೆಯಲ್ಲೇ ಕಾಲಹರಣ ಮಾಡುತ್ತೇವೆ. ವರ್ಷದಲ್ಲಿ ಆರು ತಿಂಗಳು ನೀತಿ ಸಂಹಿತೆ ಬರುತ್ತದೆ.‌ ಅದನ್ನೇ ಅಧಿಕಾರಿಗಳು ಕಾಯುತ್ತಿರುತ್ತಾರೆ. ನೀತಿ ಸಂಹಿತೆಗೂ ಇತಿಮಿತಿ ಇರಬೇಕು.‌ ಇದರಲ್ಲೂ ಬದಲಾವಣೆ ಆಗಬೇಕು. ಅಭಿವೃದ್ಧಿಗೆ ಇದು ಅಡ್ಡಗಾಲಾಗಿದೆ. ಸಿಎಂ ಆಗಬೇಕಾದರೆ ಏನು ಆಗಬೇಕು ಎಂದು ಕೇಳ್ತಾರೆ. ಸಿಎಂ ಆಗಬೇಕಾದರೆ 2-3 ಸಾವಿರ ಕೋಟಿ ರೂ‌. ಇಡಬೇಕು ಅಂತಾರೆ. ಸಿಎಂ ಆಗಬೇಕಾದರೆ ಮೂರು ಸಾವಿರ ಕೊಟ್ಟರೆ ಬಳಿಕ ರಾಜ್ಯವನ್ನು ಲೂಟಿನೇ ಹೊಡಿಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನು?. ದೇಶದ ವಿರುದ್ಧ ಮಾತನಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯನಾ ಎಂದು ಯತ್ನಾಳ್ ಪ್ರಶ್ನೆ ಮಾಡಿದರು.

ಮತದಾನ ಕಡ್ಡಾಯ ಮಾಡಬೇಕು. ಆಧಾರ್ ಕಾರ್ಡನ್ನು ವೋಟರ್ ಐಡಿಗೆ ಲಿಂಕ್ ಮಾಡಬೇಕು. ಮತದಾನ ಮಾಡದೇ ಇರುವವನಿಗೆ ಸರ್ಕಾರದ ಸೌಲಭ್ಯ ನೀಡಬಾರದು. ಪತ್ರಿಕಾ ರಂಗ, ಚುನಾವಣೆ ಬಂದ ಬಳಿಕ 5-10 ಲಕ್ಷ ಪ್ಯಾಕೇಜು ಮಾಡುತ್ತವೆ. ಧರೆಗಿಳಿದು ಬಂದ ಯತ್ನಾಳ್, ಅಭಿವೃದ್ಧಿಯ ಹರಿಕಾರ ಯತ್ನಾಳ್.. ರಾಜಾಹುಲಿ ಬೆಟ್ಟದ ಹುಲಿ, ಆ ಹುಲಿ ಈ ಇಲಿ.. ಎಲ್ಲವೂ 10 ಲಕ್ಷದ ಪ್ಯಾಕೇಜ್. ಫುಲ್ ಪೇಜ್ ಆದರೆ 10.50 ಲಕ್ಷ ಆಗುತ್ತದೆ. ನಿಮಗೆ 10% ಡಿಸ್ಕೌಂಟ್. ಆದರೆ 9.70 ಲಕ್ಷ ಆಗುತ್ತದೆ ಎಂದು ಅವರೇ ಬರೀತಾರೆ. ಎಲ್ಲರೂ ಟಿವಿ, ಪತ್ರಿಕೆಯವರೇ ಬರಿತಾರೆ.

ಪರಿಷತ್ ನಲ್ಲಿ ಚುನಾವಣೆಗೆ ನಿಂತಿದ್ದಾಗ ಟಿವಿಯಲ್ಲಿ ಯತ್ನಾಳ್ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎಂದು ವರದಿ ಮಾಡಿದ್ದನು. ನಾನು ಅವನಿಗೆ ಕರೆ ಮಾಡಿ ನೀನು ಯಾರು ನನ್ನ ರಾಜಕೀಯ ಅಂತ್ಯ ಮಾಡುವವನು? ನೀವು ಸ್ಟುಡಿಯೋದಲ್ಲಿ ಕೂತು ಏನು ಮಾತನಾಡುವುದು ಎಂದು ಕೇಳಿದೆ. ನಾಳೆ ಗೆದ್ದು ಬರುತ್ತೇನೆ ಅಲ್ಲಿಗೆ ಬಂದು ಸೊಂಡಿಗೆ ಹೊಡೆಯುತ್ತೇನೆ ಎಂದಿದ್ದೆ. ಮರುದಿನ ನಾನು ಪರಿಷತ್ ನಲ್ಲಿ ಗೆದ್ದೆ. ಬಳಿಕ ಅವರಿಗೆ ಕರೆ ಮಾಡಿದೆ. ಆಗ ಟಿವಿಯವರು ನಿಮ್ಮ ಬಗ್ಗೆ ವಿಶೇಷ ವರದಿ ಬರೆಯುತ್ತೇನೆ ಎಂದು ಉಲ್ಟಾ ಹೊಡೆದರು. ಪತ್ರಿಕಾ ರಂಗಾನೂ ಹಾಳಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

Share