Connect with us


      
ಕರ್ನಾಟಕ

‘ಈಶ್ವರಪ್ಪ ವಿರುದ್ಧ ತನಿಖಾ ವರದಿ ಬರುವವರೆಗೂ ಯಾವುದೇ ಕ್ರಮ ಇಲ್ಲ’ – ಸಿಎಂ

Iranna Anchatageri

Published

on

ಸಾಂದರ್ಭಿಕ ಚಿತ್ರ

ಬೆಂಗಳೂರು: ಏಪ್ರಿಲ್ 14 (ಯು.ಎನ್.ಐ.) ಸಂತೋಷ್ ಅವರ ಆತ್ಮಹತ್ಯೆ ಪ್ರಕರಣ ಸಂಪೂರ್ಣವಾಗಿ ತನಿಖೆಯಾಗಲಿದ್ದು, ಸತ್ಯ ಹೊರಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ಆರ್.ಟಿ. ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಧಾರರಹಿತ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆಧಾರಗಳಿದ್ದರೆ ಕೊಡಲಿ ತನಿಖೆ ಮಾಡಿಸುತ್ತೇವೆ. ಸದ್ಯಕ್ಕೆ ಪ್ರಾಥಮಿಕ ತನಿಖೆಯಾಗಲಿದೆ ಅದರ ಆಧಾರದ ಮೇಲೆ ಏನಾಗಲಿದೆ ಎಂದು ನೋಡೋಣ ಎಂದು ಹೇಳಿದರು.

ತನಿಖೆಯ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ

ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜಿನಾಮೆ ಬಗ್ಗೆ ತನಿಖೆಯ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ. ಇದರಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಏನಿಲ್ಲ. ವರಿಷ್ಠರು ಮಾಹಿತಿಯನ್ನು ಪಡೆದಿದ್ದಾರೆ. ಅವರ ಪಾತ್ರ ಇದರಲ್ಲಿ ಇಲ್ಲ. ನಿನ್ನೆ ರಾತ್ರಿಯೇ ಶವಪರೀಕ್ಷೆಯಾಗಿದೆ. ಪ್ರಾಥಮಿಕ ತನಿಖೆಯಾಗಲಿ. ತನಿಖೆಯ ಆಧಾರದ ಮೇಲೆ ತೀರ್ಮಾನ ಮಾಡಲಾಗುವುದು ಎಂದರು.

ಸಿಎಂ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ಲಂಚದ ಆರೋಪಗಳು ಬಂದಿವೆ. ಬಿಡಿಎ ನಲ್ಲಿ ದೊಡ್ಡ ಹಗರಣವಾಗಿತ್ತು. ಆರೋಪಗಳು ಬಂದಿವೆ. ಅವರಿಗೆ ಯಾವ ಹಕ್ಕಿದೆ. ಏನಾದರೂ ಇದ್ದರೆ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಪ್ರಕರಣದ ಬಗ್ಗೆ ತಿಳಿಸಿದರೆ ತನಿಖೆ ಮಾಡುತ್ತೇವೆ ಎಂದರು.

ಗೋವಿಂದ ಕಾರಜೋಳ ಹಾಗೂ ಸುಧಾಕರ್ ಅವರ ವಿರುದ್ಧವೂ ಆರೋಪಗಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರೇ ಇರಲಿ.. ಯಾವುದೇ ಕಚೇರಿ ಇರಲಿ.. ನಿರ್ದಿಷ್ಟ ಆರೋಪಗಳಿದ್ದರೆ ಅದಕ್ಕೆ ಉತ್ತರ, ಪ್ರತಿಕ್ರಿಯೆ ನೀಡಬಹುದು ಎಂದರು.

ಗುತ್ತಿಗೆದಾರರ ಸಂಘ ಪ್ರತಿಭಟನೆ ಮಾಡುವ ಬಗ್ಗೆ ಉತ್ತರಿಸಿದ ಅವರು, ಹಲವಾರು ಗುತ್ತಿಗೆದಾರರ ಸಂಘಗಳಿವೆ. ಅವರ ತೀರ್ಮಾನಗಳೇನು ಎಂದು ಗೊತ್ತಿಲ್ಲ. ಏನಾದರೂ ನಿರ್ದಿಷ್ಟ ಪ್ರಕರಣಗಳಿದ್ದರೆ ಕೊಡಲಿ. ತನಿಖೆ ಮಾಡಿಸುತ್ತೇವೆ ಎಂದರು.

Share