Connect with us


      




ಕ್ರೀಡೆ

ನೊವಾಕ್ ಜೊಕೊವಿಕ್ ಜೈಲಿನಲ್ಲಿ ಬಂಧಿ?

Iranna Anchatageri

Published

on

ಮೆಲ್ಬೋರ್ನ್ : ಜನೆವರಿ 08 (ಯು.ಎನ್.ಐ.) ವಿಶ್ವದ ನಂಬರ್-1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಮತ್ತು ಆಸ್ಟ್ರೇಲಿಯಾ ಸರ್ಕಾರವು ಲಸಿಕೆ ನಿಯಮಗಳ ಕುರಿತು ನಡೆಯುತ್ತಿರುವ ವಿವಾದ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೊರೊನಾ ಲಸಿಕೆ ಪಡೆಯದೆ ಹಾಲಿ ಚಾಂಪಿಯನ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಆಡಲು ಮೆಲ್ಬೋರ್ನ್ ನಲ್ಲಿದ್ದಾರೆ.

ನೊವಾಕ್ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ರದ್ದು ಮಾಡಿ, ಮೆಲ್ಬೋರ್ನ್ ಪಾರ್ಕ್ ಇನ್ ಹೊಟೇಲ್ ನಲ್ಲಿ ಇರಿಸಿದ್ದಾರೆ. ಈ ಹೋಟೆಲ್ ಅನ್ನು ವಲಸೆ ಪ್ರಕರಣದಲ್ಲಿ ಸಿಲುಕಿರುವವರ ಜೈಲು ಎಂದೂ ಕರೆಯುತ್ತಾರೆ. ಅಂದರೆ, ವೀಸಾ, ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಬಿದ್ದವರನ್ನು ಇಲ್ಲಿ ಇರಿಸಲಾಗುತ್ತದೆ. ಆಸ್ಟ್ರೇಲಿಯನ್ ಓಪನ್ ಜನವರಿ 17 ರಂದು ಆರಂಭವಾಗಲಿದೆ.

ಆಸ್ಟ್ರೇಲಿಯಾ ಹೊಟೇಲ್ ನಲ್ಲಿ 32 ಜನರು ಬಂಧಿ!

ಮೆಲ್ಬೋರ್ನ್ ಪಾರ್ಕ್ ಇನ್ ಹೊಟೇಲ್ ನಲ್ಲಿ ವಿವಿಧ ದೇಶಗಳಿಂದ 32 ಜನರನ್ನು ಕೂಡಿ ಹಾಕಲಾಗಿದೆ. ಅನುಮತಿಯಿಲ್ಲದೆ ಈ ಹೊಟೇಲ್ ನಿಂದ ಹೊರ ಹೋಗುವಂತಿಲ್ಲ. ಚಿಕ್ಕ ಕೊಠಡಿಯಲ್ಲಿ ಉಳಿದುಕೊಳ್ಳಬೇಕು ಮತ್ತು ಎಲ್ಲೆಂದರಲ್ಲಿ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದೆ. ಈ ಹೊಟೇಲ್ ನಲ್ಲಿ ಬಂಧಿಯಾಗಿರುವವರಿಗೆ ಉತ್ತಮ ಆಹಾರ ನೀಡಲ್ಲ. ಕ್ರೀಮಿ ಕೀಟಗಳು ಇರುವ ಬಗ್ಗೆ ಹಾಗೂ ಕೊಠಡಿಗಳು ಅವ್ಯವಸ್ಥೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಇಲ್ಲಿ ಇರಿಸುವವರು ಹಲವು ಬಾರಿ ದೂರು ನೀಡಿದ್ದಾರೆ.

ಜೊಕೊವಿಕ್ ಗೆ ಲಸಿಕೆ ಹಾಕಿಸಿಕೊಳ್ಳಲು ಇಷ್ಟವಿಲ್ಲ!

ಜೊಕೊವಿಕ್ ಪಾಲಿಗೆ ಆಸ್ಟ್ರೇಲಿಯನ್ ಓಪನ್ ಅದೃಷ್ಟಶಾಲಿ ಪಂದ್ಯಾವಳಿಯಾಗಿದೆ. ಇದುವರೆಗೆ ಜೊಕೊವಿಕ್ ಗೆದ್ದಿರುವ 20 ಗ್ರ್ಯಾಂಡ್ ಸ್ಲಾಮ್ ಗಳಲ್ಲಿ ಒಂಭತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳಾಗಿವೆ. ಕಳೆದ ಬಾರಿಯೂ ಆಸ್ಟ್ರೇಲಿಯಾದ ಚಾಂಪಿಯನ್ ಆಗಿ ಜೊಕೊವಿಕ್ ಮರಳಿದ್ದರು. ಅದಕ್ಕಾಗಿಯೇ ಜೊಕೊವಿಕ್ ಯಾವಾಗಲೂ ಆಸ್ಟ್ರೇಲಿಯಾ ಪಂದ್ಯಾವಳಿಯನ್ನು ಆಡಲು ಇಷ್ಟಪಡುತ್ತಾರೆ. ಆದಾಗ್ಯೂ, ಲಸಿಕೆ ಪಡೆಯದಿರುವ ಅವರ ಹಠ ಮತ್ತು ಆಸ್ಟ್ರೇಲಿಯಾದ ಕಠಿಣ ಲಸಿಕೆ ನಿಯಮಗಳು ಜೊಕೊವಿಕ್ ಗೆಲುವಿಗೆ ಅಡ್ಡಿಯಾಗಿವೆ.

ಲಸಿಕೆ ಪಡೆಯದೆಯೂ ಆಡುವ ಅರ್ಹತೆ ಇದೆ ಎಂದು ಜೊಕೊವಿಕ್ ಸ್ಪಷ್ಟವಾಗಿ ಆಸ್ಟ್ರೇಲಿಯಾ ಸರ್ಕಾರಕ್ಕೆ ಹೇಳಿದ್ದಾರೆ. ಆದರೆ, ಯಾವುದೇ ಒಬ್ಬ ವ್ಯಕ್ತಿಗೆ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ಇಡೀ ದೇಶದ ಸಾಂಕ್ರಾಮಿಕ ರೋಗದಿಂದ ರಕ್ಷಣೆಯ ವಿಷಯವಾಗಿದೆ. ಲಸಿಕೆ ಹಾಕದ ಜನರಿಗೆ ಆಸ್ಟ್ರೇಲಿಯಾಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೆ, ಕ್ವಾರಂಟೈನ್ ನಿಯಮಗಳು ತುಂಬಾ ಕಠಿಣವಾಗಿವೆ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳುತ್ತಿದೆ.

ಈ ಮಧ್ಯೆ ಜೊಕೊವಿಕ್ ಅವರನ್ನು ಜೈಲಿನಂತಿರುವ ಹೋಟೆಲ್ ನಲ್ಲಿ ಇರಿಸುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಟೆನಿಸ್ ಆಟಗಾರನನ್ನು ಚೆನ್ನಾಗಿ ನಡೆಸಿಕೊಳ್ಳಬೇಕು. ಹಾಗೂ ಹೊಟೇಲ್ ನಲ್ಲಿ ಸಮಸ್ಯೆಗಳು ಇರುವ ಬಗ್ಗೆ ಜೊಕೊವಿಕ್ ದೂರು ನೀಡಿದ್ದಾರೆ. ಅವರಿಗೆ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ಇರುವ ಅವಕಾಶ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಬೇಡಿಕೆಯನ್ನು ಆಸ್ಟ್ರೇಲಿಯಾದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಕೋರ್ಟ್ ಮೆಟ್ಟಲೇರಲು ಜೊಕೊವಿಕ್ ಸಿದ್ಧತೆ!

ಜೊಕೊವಿಕ್ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದು, ತನ್ನ ವಕೀಲರೊಂದಿಗೆ ಫೋನ್ ಮತ್ತು ಇಂಟರ್ನೆಟ್ ಮೂಲಕ ಸಂಪರ್ಕದಲ್ಲಿದ್ದಾರೆ. ಅಲ್ಲದೆ, ಲಸಿಕೆಯಿಂದ ವಿನಾಯಿತಿ ಕೋರಿ ಆಸ್ಟ್ರೇಲಿಯಾದ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಅಲ್ಲಿಯವರೆಗೆ ಜೊಕೊವಿಕ್ ಮೆಲ್ಬೋರ್ನ್ ಪಾರ್ಕ್ ಇನ್ ಹೊಟೇಲ್ ನಲ್ಲಿ ತಂಗಲಿದ್ದಾರೆ. ಆದರೆ, ಕೋರ್ಟ್ ವಿಚಾರಣೆ ವೇಳೆ ಹೊಟೇಲ್ ನಿಂದ ಶಿಫ್ಟ್ ಮಾಡುವ ಬಗ್ಗೆ ತೀರ್ಪು ನೀಡಿದರೆ, ಜೊಕೊವಿಕ್ ಜೈಲಿನಂತಿರುವ ಹೊಟೇಲ್ ನಿಂದ ಬೇರೆಕಡೆ ಸ್ಥಳಾಂತರಗೊಳ್ಳಲಿದ್ದಾರೆ.

Share