Connect with us


      
ನ್ಯಾಯಾಲಯ

ಹಾಜರಾಗದ ಅಧಿಕಾರಿಗಳು: ನ್ಯಾಯಾಲಯ ಅಸಮಾಧಾನ

Kumara Raitha

Published

on

ಬೆಂಗಳೂರು: ನವೆಂಬರ್ 08 (ಯು.ಎನ್.ಐ.) ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಖುದ್ದು ಹಾಜರಾತಿಗೆ ಆದೇಶಿಸಿದ್ದ ಹೊರತಾಗಿಯೂ ಅವರು ಪೀಠದ ಮುಂದೆ ಉಪಸ್ಥಿತರಿರದ್ದಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಕೆಂಡಾಮಂಡಲವಾಗಿದೆ. ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಮಾನಸಿಕ ಶುಶ್ರೂಷೆ ಕಾಯಿದೆ ನಿಬಂಧನೆಗಳನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ನ್ಯಾಯಾಲಯದ ಆದೇಶ ಪಾಲಿಸುವಂತೆ ಮಾಡುವುದು ನಮಗೆ ಚೆನ್ನಾಗಿ ತಿಳಿದಿದೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಅಧಿಕಾರಿಗಳನ್ನು ಬಂಧಿಸಿ ಪೀಠದ ಮುಂದೆ ಹಾಜರುಪಡಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸುವ ಮೂಲಕ ಸರ್ಕಾರಕ್ಕೆ ಅಪಥ್ಯವಾದ ಆದೇಶವನ್ನು ಹೊರಡಿಸುವಂತೆ ನಮ್ಮನ್ನು ಮಾಡಬೇಡಿ. ಹೈಕೋರ್ಟ್ ಅನ್ನು ಲಘುವಾಗಿ ಪರಿಗಣಿಸಬೇಡಿ” ಎಂಬ ಖಡಕ್ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನ್ಯಾಯಾಲಯ ನೀಡಿತು.
“ನ್ಯಾಯಾಲಯವು ಹಿಂದಿನ ಆದೇಶದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಜರಿರಬೇಕು ಎಂದು ಲಿಖಿತ ಆದೇಶದಲ್ಲಿ ಹೇಳಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಅವಸ್ಥಿ ಹೇಳಿದರು. ಆಗ, ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ರೇವತಿ ಆದಿನಾಥ್ ನಾರ್ದೆ ಅವರು “ರಾಜ್ಯ ಸಚಿವ ಸಂಪುಟ ಸಭೆ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿ ಅಲ್ಲಿಗೆ ತೆರಳಿದ್ದಾರೆ” ಎಂದು ಹೇಳಿದರು.
ಇದರಿಂದ ಕೆಂಡಾಮಂಡಲವಾದ ಪೀಠವು “ನ್ಯಾಯಾಲಯದ ಆದೇಶ ಪಾಲಿಸುವುದಕ್ಕೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀವು ಸಂಪುಟ ಸಭೆಗೆ ನೀಡುತ್ತೀರಾ? ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಎಂಆರ್ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರಗಳನ್ನು ಅವಳಡಿಸಲಾಗಿದೆಯೇ? ವೈದ್ಯಕೀಯ ಮೇಲ್ವಿಚಾರಕರನ್ನು ನೇಮಿಸಲಾಗಿದೆಯೇ?” ಎಂದು ಪ್ರಶ್ನಿಸಿತು. ಸರ್ಕಾರಿ ವಕೀಲರು ನ್ಯಾಯಾಲಯದ ಆದೇಶವನ್ನು ಭಾಗಶಃ ಪಾಲಿಸಲಾಗಿದೆ ಎಂದು ಉತ್ತರಿಸಿದ್ದು, ನ್ಯಾಯಾಲಯವನ್ನು ಮತ್ತಷ್ಟು ಕೆರಳಿಸಿತು.
“೨೦೨೦ರ ಮಾರ್ಚ್ನಲ್ಲಿ ಹೊರಡಿಸಲಾಗಿರುವ ಆದೇಶವನ್ನು ಇನ್ನೂ ಪಾಲಿಸಲಾಗಿಲ್ಲ. ಈ ಮಧ್ಯೆ, ನ್ಯಾಯಾಲಯ ಆದೇಶ ಮಾಡಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಿಲ್ಲ. ಸಂಪುಟ ಸಭೆಗೆ ತೆರಳುವಂತೆ ಅವರಿಗೆ ಹೇಳಿದವರು ಯಾರು? ನೀವು (ಅಧಿಕಾರಿ) ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸಿದ್ದೀರಿ. ಈ ನಡತೆಯನ್ನು ಪೀಠ ಸಹಿಸುವುದಿಲ್ಲ. ಈ ಕ್ಷಣದಿಂದಲೇ ಅಧಿಕಾರಿಯನ್ನು ಜೈಲಿಗೆ ಕಳುಹಿಸುತ್ತೇವೆ. ಈ ಪ್ರಕರಣದ ಮೂಲಕ ಮಾದರಿ ಸೃಷ್ಟಿಸಲಾಗುವುದು. ನ್ಯಾಯಾಲಯ ಎಂದರೇನು ಎಂಬುದು ನಿಮಗೆ (ಅಧಿಕಾರಿ) ಇಂದು ಅರ್ಥವಾಗುತ್ತದೆ. ಪೀಠದ ಮುಂದೆ ಹಾಜರಾಗುವಂತೆ ಅವರಿಗೆ ಹೇಳಿ. ಅವರಿಗೆ ಪಾಠ ಕಲಿಸುತ್ತೇವೆ. ನ್ಯಾಯಾಲಯ, ಹೈಕೋರ್ಟ್ ಎಂದರೇನು ಅವರಿಗೆ ತಿಳಿಸುತ್ತೇವೆ” ಎಂದು ಆಕ್ರೋಶದಿಂದ ನುಡಿದು, ಪ್ರಕರಣವನ್ನು ದಿನದಂತ್ಯಕ್ಕೆ ನಿಗದಿ ಮಾಡಿ ಆದೇಶಿಸಿತ್ತು. ವಕೀಲೆ ರೇವತಿ ಅವರ ಕೋರಿಕೆಗೆ ಸೊಪ್ಪು ಹಾಕದ ಪೀಠವು ಏರು ಧ್ವನಿಯಲ್ಲಿ ಪ್ರಶ್ನೆಗಳ ಮಳೆಗರೆದು ಪ್ರಕರಣವನ್ನು ಮುಂದೂಡಿತ್ತು.

Share