Connect with us


      
ದೇಶ

ದೇಶದಲ್ಲಿ ಒಮೈಕ್ರಾನ್ ನ 32 ಪ್ರಕರಣಗಳು ಪತ್ತೆ : ಮಾಸ್ಕ್ ಧರಿಸುವಂತೆ ಕೇಂದ್ರ ಸರ್ಕಾರದ ಎಚ್ಚರಿಕೆ

Iranna Anchatageri

Published

on

ಮುಂಬೈ; ಡಿಸೆಂಬರ್ 11 (ಯು.ಎನ್.ಐ) ಕರೋನಾ ವೈರಸ್‌ನ ಹೊಸ ರೂಪಾಂತರವಾದ ಒಮೈಕ್ರಾನ್ ಕುರಿತು ಮತ್ತೊಮ್ಮೆ ಆತಂಕ ಸೃಷ್ಟಿಯಾಗಿದೆ. ದೇಶದಲ್ಲಿ ಒಂದೇ ದಿನದಲ್ಲಿ 9 ಹೊಸ ಒಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಈಗ ದೇಶದಲ್ಲಿ ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾದ ಒಟ್ಟು ರೋಗಿಗಳ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ, 7 ರೋಗಿಗಳು ಮಹಾರಾಷ್ಟ್ರದವರಾಗಿದ್ದರೆ, 2 ರೋಗಿಗಳು ಗುಜರಾತ್‌ನಲ್ಲಿ ಕಂಡುಬಂದಿದ್ದಾರೆ.

ಈ ಮಧ್ಯೆ, ಹೊಸ ರೂಪಾಂತರಿ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿರುವ ವೇಳೆ ದೇಶದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರ ಬಗ್ಗೆ ಕೇಂದ್ರ ಸರ್ಕಾರವು ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ನಿನ್ನೆ  ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದೆ. ಹೀಗೆ, ನಿರ್ಲಕ್ಷ್ಯ ಮುಂದುವರಿದ್ದೆಯಾದಲ್ಲಿ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಬಗ್ಗೆಯೂ ಕೇಂದ್ರ ಎಚ್ಚರಿಸಿದೆ. ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು ದೇಶದಲ್ಲಿ ಕರೋನಾ ಸೋಂಕಿನ ಪ್ರಸ್ತುತ ಪರಿಸ್ಥಿತಿ ಮತ್ತು ಒಮೈಕ್ರಾನ್ ರೂಪಾಂತರದ ಪರಿಣಾಮದ ಕುರಿತು ಇವತ್ತು ಪರಿಶೀಲನಾ ಸಭೆ ನಡೆಸಲಿದ್ದಾರೆ.

ಮಹಾರಾಷ್ಟ್ರದಲ್ಲಿ ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದು, ಮುಂಬೈನಲ್ಲಿ 3 ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ 4 ರೋಗಿಗಳಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇದರೊಂದಿಗೆ ಮಹಾರಾಷ್ಟ್ರವೊಂದರಲ್ಲಿ ಒಮೈಕ್ರಾನ್ ಸೋಂಕಿತರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೋಂಕಿತರಾದ 7 ರೋಗಿಗಳಲ್ಲಿ 4 ಮಂದಿ ಕರೋನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿರುವುದು ಮತ್ತಷ್ಟು ಭೀತಿ ಸೃಷ್ಟಿಸಿದೆ. ಮುಂಬೈನಲ್ಲಿ ಸೋಂಕಿತ ರೋಗಿಗಳು ತಾಂಜೆನಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾ – ನೈರೋಬಿ (ಕೀನ್ಯಾ) ಗೆ ಪ್ರಯಾಣ ಮಾಡಿರುವ ಹಿನ್ನೆಲೆಯನ್ನು ಹೊಂದಿದ್ದಾರೆ.

ಏಷ್ಯಾದ ಅತಿ ದೊಡ್ಡ ಕೊಳಗೇರಿಯಲ್ಲಿ ಪತ್ತೆಯಾಯಿತು ಒಮೈಕ್ರಾನ್

ಏಷ್ಯಾದ ಅತಿ ದೊಡ್ಡ ಕೊಳೆಗೇರಿಯಾಗಿರುವ ಧಾರಾವಿಯಲ್ಲಿ ಒಮೈಕ್ರಾನ್ ವೇರಿಯಂಟ್ ಸೋಂಕಿತ ರೋಗಿಯು ಪತ್ತೆಯಾದ ಬಳಿಕ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ರೋಗಿ ತಾಂಜಾನಿಯಾದಿಂದ ಹಿಂದಿರುಗಿರುವ ಬಗ್ಗೆ ಮಾಹಿತಿ ಇದ್ದು, ಈ ಹಿಂದೆಯೂ ಎರಡನೇ ಅಲೆಯ ಸಮಯದಲ್ಲಿ ಧಾರಾವಿ ಕರೋನದ ಪ್ರಮುಖ ಹಾಟ್‌ಸ್ಪಾಟ್ ಆಗಿತ್ತು. ಸದ್ಯ ಒಮೈಕ್ರಾನ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷವೆಂದರೆ ಅದರಲ್ಲಿ ಸೋಂಕಿನ ಲಕ್ಷಣಗಳಿಲ್ಲ. ಈ ವ್ಯಕ್ತಿಯನ್ನು ಧಾರಾವಿಯ ಮಸೀದಿಯ ಮೌಲಾನಾ ಎಂದು ಹೇಳಲಾಗುತ್ತಿದೆ ಮತ್ತು ಕರೋನಾ ಲಸಿಕೆಯ ಒಂದು ಡೋಸ್ ಅನ್ನು ಸಹ ಇತ್ತ ಪಡೆಯದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 789 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಅಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ. ಇದೀಗ ಮುಂಬೈನ ಧಾರಾವಿಯಲ್ಲಿನ ಒಮೈಕ್ರಾನ್ ರೂಪಾಂತರಿ ಪತ್ತೆಯಾಗಿದ್ದು ಸಂಚಲನ ಉಂಟು ಮಾಡಿದೆ.

ಇನ್ನು ಒಮೈಕ್ರಾನ್ ಸೋಂಕಿನ ಮೊದಲ ಪ್ರಕರಣ ಗುಜರಾತ್ ನ ಜಾಮ್‌ನಗರದಲ್ಲಿ ಕಂಡುಬಂದಿದೆ. ಅಲ್ಲಿ, ನವೆಂಬರ್ 28 ರಂದು ಜಿಂಬಾಬ್ವೆಯಿಂದ ಹಿಂದಿರುಗಿದ 72 ವರ್ಷದ ವ್ಯಕ್ತಿಯಲ್ಲಿ ಒಮೈಕ್ರಾನ್ ದೃಢೀಕರಿಸಲ್ಪಟ್ಟಿದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ಇವರ ಪತ್ನಿ ಮತ್ತು ಆಕೆಯ ಸಹೋದರನಿಗೂ ಜಿನೋಮ್ ಸೀಕ್ವೆನ್ಸಿಂಗ್ ವರದಿಯಲ್ಲಿ ಒಮೈಕ್ರಾನ್ ರೂಪಾಂತರಿ ಕಂಡುಬಂದಿದ್ದು ಬೆಚ್ಚಿಬೀಳುವಂತೆ ಮಾಡಿದೆ.

10 ದಿನಗಳಲ್ಲಿ 93 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕರೊನಾ

ಜಂಟಿ ಆರೋಗ್ಯ ಕಾರ್ಯದರ್ಶಿ ಲವ್ ಅಗರ್ವಾಲ್  ಈ ಬಗ್ಗೆ ಮಾಹಿತಿ ನೀಡಿದ್ದು, ಡಿಸೆಂಬರ್ 1 ರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಕಡ್ಡಾಯ ಪರೀಕ್ಷೆ ಪ್ರಾರಂಭವಾಗಿದೆ. ಅಂದಿನಿಂದ 93 ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕಂಡುಬಂದಿದೆ. ಇವರಲ್ಲಿ 83 ಪ್ರಯಾಣಿಕರು ಒಮೈಕ್ರಾನ್ ರೂಪಾಂತರಿಯ ಅಪಾಯಕಾರಿ ರಾಷ್ಟ್ರಗಳಿಂದ ಬಂದಿದ್ದರೆ, 13 ಜನರು ಇತರ ದೇಶಗಳಿಂದ ಭಾರತಕ್ಕೆ ಆಗಮಿಸಿದ್ದಾರೆ ಅಂತಾ ತಿಳಿಸಿದ್ದಾರೆ.

WHO ನ ಎಚ್ಚರಿಕೆಯನ್ನು ಅರ್ಥಮಾಡಿಕೊಳ್ಳಿ, ಮಾಸ್ಕ್ ಧರಿಸಿ!

ಈ ಮಧ್ಯೆ, ವಿಶ್ವದ 59 ದೇಶಗಳಲ್ಲಿ ಇದುವರೆಗೆ 2936 ಒಮಿಕ್ರಾನ್ ರೂಪಾಂತರದ ಪ್ರಕರಣಗಳ ಬಗ್ಗೆ ವರದಿಯಾಗಿದೆ. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿಕೆ ಪಾಲ್, ಮಾಸ್ಕ್ ಕಡ್ಡಾಯವಾಗಿ ಧರಿಸಿ ಅಂತಾ ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್ ಧರಿಸದ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ, ಮಾಸ್ಕ್ ಧರಿಸುವುದನ್ನು ಕಡಿಮೆ ಮಾಡಿರುವ ಬಗ್ಗೆ WHO ಕಳವಳ ವ್ಯಕ್ತಪಡಿಸಿದೆ. ಹಾಗೂ ಎಚ್ಚರಿಕೆ ನೀಡಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

Share