Connect with us


      
ದೇಶ

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಬಂಧನ; ಜರ್ಮನಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ

Lakshmi Vijaya

Published

on

ನವದೆಹಲಿ:ಜುಲೈ 07 (ಯು.ಎನ್.ಐ.) ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನದ ಕುರಿತು ಜರ್ಮನಿಯ ವಿದೇಶಾಂಗ ಸಚಿವಾಲಯದ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಸರಕಾರ ಇದನ್ನು ಆಂತರಿಕ ಸಮಸ್ಯೆ ಎಂದು ಕರೆದಿದೆ.  ಮತ್ತು ನ್ಯಾಯಾಲಯದ ಮುಂದಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಇದು ನಮ್ಮ ಆಂತರಿಕ ವಿಷಯ. ವಿಷಯವು ನ್ಯಾಯಾಲಯದ ಮುಂದಿದೆ. ನಮ್ಮ ಕಾನೂನು ವ್ಯವಸ್ಥೆಯು ಸ್ವತಂತ್ರವಾಗಿದೆ. ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆಯು ಸಹಾಯಕಾರಿಯಲ್ಲ. ಇದು ಸರಿಯಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.ಮೊಹಮ್ಮದ್ ಜುಬೈರ್ ಬಂಧನದ ಬಗ್ಗೆ ಜರ್ಮನ್ ವಿದೇಶಾಂಗ ಸಚಿವಾಲಯ ತೀಕ್ಷ್ಣವಾದ ಪದಗಳನ್ನು ಬಳಸಿದ್ದಕ್ಕೆ ಕೇಂದ್ರ ಈ ರೀತಿ ಪ್ರತಿಕ್ರಿಯಿಸಿದೆ.

“ವರದಿಗಾರಿಕೆಯಲ್ಲಿ ಸ್ವಾತಂತ್ರ್ಯ ನಾವುವುದು ಯಾವುದೇ ಸಮಾಜಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ನಿರ್ಬಂಧಗಳು ಕಳವಳಕ್ಕೆ ಕಾರಣವಾಗಿವೆ. ಪತ್ರಕರ್ತರು ಅವರು ಹೇಳುವ ಮತ್ತು ಬರೆಯುವದಕ್ಕಾಗಿ ಕಿರುಕುಳ ಮತ್ತು ಜೈಲು ಶಿಕ್ಷೆಗೆ ಒಳಗಾಗಬಾರದು. ಈ ನಿರ್ದಿಷ್ಟ ಪ್ರಕರಣದ ಬಗ್ಗೆ ನಮಗೆ ತಿಳಿದಿದೆ ಮತ್ತು ಹೊಸದಿಲ್ಲಿಯಲ್ಲಿರುವ ನಮ್ಮ ರಾಯಭಾರ ಕಚೇರಿಯು ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ.” ಎಂದು ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರರು ಮೊಹಮ್ಮದ್ ಜುಬೇರ್ ಬಂಧನದ ಬಗ್ಗೆ ಹೇಳಿದ್ದರು.

ಯುರೋಪಿಯನ್ ಯೂನಿಯನ್ ಭಾರತದೊಂದಿಗೆ ಮಾನವ ಹಕ್ಕುಗಳ ಸಂವಾದವನ್ನು ನಡೆಸುತ್ತಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಆ ಚರ್ಚೆಗಳ ಕೇಂದ್ರಬಿಂದುವಾಗಿದೆ ಎಂದು ಅವರು ಹೇಳಿದ್ದರು.

“ಭಾರತವು ತನ್ನನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಬಣ್ಣಿಸುತ್ತದೆ. ಆದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದಂತಹ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಲ್ಲಿ ಅಗತ್ಯ ಸ್ಥಳವನ್ನು ನೀಡಲಾಗುತ್ತದೆ ಎಂದು ಒಬ್ಬರು ನಿರೀಕ್ಷಿಸಬಹುದು” ಎಂದು ಜರ್ಮನ್ ವಕ್ತಾರರು ಪ್ರತಿಪಾದಿಸಿದರು.

ಸತ್ಯ-ಪರಿಶೀಲನಾ ವೆಬ್‌ಸೈಟ್ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರನ್ನು 2018 ರಂದು ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ  ಜೂನ್ 27 ರಂದು ದೆಹಲಿಯಲ್ಲಿ ಬಂಧಿಸಲಾಯಿತು. ಜುಲೈ 2 ರಂದು ಪೋಲೀಸರು ಜುಬೈರ್ ವಿರುದ್ಧ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿಯಲ್ಲಿ ಹೆಚ್ಚುವರಿ ಆರೋಪವನ್ನು ಸೇರಿಸಿದರು.  ಅವರನ್ನು ಇನ್ನೂ 14 ದಿನಗಳವರೆಗೆ ಕಸ್ಟಡಿಯಲ್ಲಿ ಇರಿಸಲಾಯಿತು. ಕೊಲೆ ಬೆದರಿಕೆಯನ್ನು ಉಲ್ಲೇಖಿಸಿ ಜುಬೇರ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ.

Share