Connect with us


      




ದೇಶ

ಮಣಿಪುರ ಚುನಾವಣಾ ಹಿಂಸಾಚಾರದಲ್ಲಿ ಒಬ್ಬ ಸಾವು, ಒಬ್ಬರಿಗೆ ಗಾಯ

Vanitha Jain

Published

on

ಇಂಫಾಲ: ಮಾರ್ಚ್ 05 (ಯು.ಎನ್‌.ಐ.) ಮಣಿಪುರ ವಿಧಾನಸಭಾ ಎರಡನೇ ಹಂತದ ಚುನಾವಣೆಯಲ್ಲಿ ನಡೆದ ಹಿಂಸಾಚಾರ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲೂ ಒಬ್ಬ ಭದ್ರತಾ ಸಿಬ್ಬಂದಿ ಸಾವಿಗೀಡಗಿದ್ದರು.

ಮೃತ ಕೆ ಲಾಂಗ್‌ವಾವೊ ಮತ್ತು ತೀವ್ರವಾಗಿ ಗಾಯಗೊಂಡ ವಿ.ಸೋಪೆ ಎಂದು ಗುರುತಿಸಲಾಗಿದೆ.

ಸೇನಾಪತಿ ಜಿಲ್ಲೆಯ ಕರೋಂಗ್ ಕ್ಷೇತ್ರದ 47/49 ಸಂಖ್ಯೆಯ ಮತಗಟ್ಟೆ ಕೇಂದ್ರದಲ್ಲಿ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, ಇನ್ನೊಬ್ಬ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಇಂಫಾಲಗೆ ಕಳುಹಿಸಲಾಗಿದೆ.

ಇಬ್ಬರು ವ್ಯಕ್ತಿಗಳು ಮತಗಟ್ಟೆಯಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುವ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು, ಇದರ ಪರಿಣಾಮವಾಗಿ ಒಬ್ಬರು ಸಾವನ್ನಪ್ಪಿದರು ಮತ್ತು ಇನ್ನೊಬ್ಬ ವ್ಯಕ್ತಿ ಗಾಯಗೊಂಡರು.

ಏತನ್ಮಧ್ಯೆ, ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟ್ ನ್ಗಾವೊನಿ ಆರ್ ಜೇಮ್ಸ್, ಜೊನಾಥನ್ ತಾವೊ ಅವರು ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ಮೃತ ಕೆ ಲಾಂಗ್‌ವಾವೊ ಮತ್ತು ತೀವ್ರವಾಗಿ ಗಾಯಗೊಂಡ ವಿ.ಸೋಪೆ ಅವರನ್ನು ಯಾವುದೇ ಸೂಚನೆಯಿಲ್ಲದೆ ಗುಂಡು ಹಾರಿಸಲಾಗಿದೆ. ನ್ಯಾಯ ಸಿಗುವವರೆಗೂ ಘಟನೆ ನಡೆದ ಮತಗಟ್ಟೆಯಿಂದ ಭದ್ರತಾ ಪಡೆಗಳಿಗೆ ತೆರಳಲು ಬಿಡುವುದಿಲ್ಲ ಮತಗಟ್ಟೆಯಲ್ಲಿ ಮತದಾನ ಸ್ಥಗಿತಗೊಂಡಿತ್ತು ಎಂದು ಹೇಳಿದ್ದಾರೆ.

ಬಿಜೆಪಿಯ ಮಾಜಿ ವಕ್ತಾರ ಚಿ ಬಿಜೋಯ್ ಅವರ ಇಂಫಾಲ ನಿವಾಸದ ಬಳಿ ಶುಕ್ರವಾರ ರಾತ್ರಿ ಬಾಂಬ್ ಸ್ಫೋಟ ಸಂಭವಿಸಿದೆ. ಉರಿಪೋಕ್ ಕ್ಷೇತ್ರದ ಟಿಕೆಟ್ ನಿರಾಕರಿಸಿದ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಲವು ಅಭ್ಯರ್ಥಿಗಳ ಬೆಂಬಲಿಗರ ನಡುವಿನ ಘರ್ಷಣೆಯ ನಂತರ ಮಾವೋ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಚುನಾವಣಾ ಚಟುವಟಿಕೆಗಳು ಅಸ್ತವ್ಯಸ್ತಗೊಂಡವು.

ಎರಡನೇ ಹಂತದಲ್ಲಿ 22 ಕ್ಷೇತ್ರಗಳಲ್ಲಿ ಮತದಾನ 11 ಗಂಟೆಗೆ ಶೇ. 28.19 ರಷ್ಟಾಗಿದೆ. ಫೆಬ್ರವರಿ 28ರಂದು ಮೊದಲ ಸುತ್ತಿನ ಅವಧಿಯಲ್ಲಿ ನಡೆದ ಚುನಾವಣೆಯನ್ನು ಅಸಿಂಧು ಎಂದು ಘೋಷಿಸಿದ 12 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ.

Share